ಭಾರತ್‌ ಜೋಡೋ ಯಾತ್ರೆಯ ಕೇರಳದಲ್ಲಿ ಭಾನುವಾರದಿಂದ ಆರಂಭವಾಗಿದೆ. ಇದು 19 ದಿನಗಳ ಕಾಲ ಕೇರಳದಲ್ಲಿ ಸಾಗಲಿದ್ದು, ನಂತರ ಕರ್ನಾಟಕವನ್ನು ಪ್ರವೇಶಿಸಲಿದೆ.

ತಿರುವನಂತಪುರಂ(ಸೆ.12): 2024ರ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಪಕ್ಷ ಆರಂಭಿಸಿರುವ ಭಾರತ್‌ ಜೋಡೋ ಯಾತ್ರೆಯ ಕೇರಳದಲ್ಲಿ ಭಾನುವಾರದಿಂದ ಆರಂಭವಾಗಿದೆ. ಇದು 19 ದಿನಗಳ ಕಾಲ ಕೇರಳದಲ್ಲಿ ಸಾಗಲಿದ್ದು, ನಂತರ ಕರ್ನಾಟಕವನ್ನು ಪ್ರವೇಶಿಸಲಿದೆ.

ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆ 3 ದಿನಗಳ ಬಳಿಕ ಶನಿವಾರ ಕೇರಳಕ್ಕೆ ಪ್ರವೇಶಿಸಿತ್ತು. ಈ ವೇಳೆ ರಾಹುಲ್‌ ಗಾಂಧಿಯನ್ನು ಸ್ವಾಗತಿಸಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಭಾನುವಾರ ಮುಂಜಾನೆ ನೆಯ್ಯಟ್ಟಿಕಾರ ಎಂಬ ಪ್ರದೇಶದಿಂದ ಕೇರಳದ ಯಾತ್ರೆ ಆರಂಭಗೊಂಡಿದೆ.

'ತಮಿಳು ಹುಡ್ಗಿಯನ್ನು ಮದುವೆ ಮಾಡಿಸಿಕೊಡ್ತೇವೆ', ಯಾತ್ರೆಯಲ್ಲಿ ರಾಹುಲ್‌ ಗಾಂಧಿಗೆ ಮದುವೆ ಪ್ರಪೋಸಲ್‌!

ಕೇರಳದಲ್ಲಿನ ಯಾತ್ರೆ ಸೆ.1ರಂದು ಕೊಲ್ಲಂ ಜಿಲ್ಲೆ, ಸೆ.17ರಂದು ಆಲಪ್ಪುಳ, ಸೆ.22ರಂದು ಎರ್ನಾಕುಲಂ, ಸೆ.23ರಂದು ತ್ರಿಶೂರು, ಸೆ.26ರಂದು ಪಾಲಕ್ಕಾಡ್‌ ಮತ್ತು ಸೆ.28ರಂದು ಮಲ್ಲಪುರಂ ಜಿಲ್ಲೆಗಳನ್ನು ತಲುಪಲಿದೆ. ಕೇರಳ ಯಾತ್ರೆಯ ಚಿತ್ರಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ರೈತರು, ಕಾರ್ಮಿಕರು, ಯುವಕರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಎಲ್ಲಾ ಪ್ರಕಾರದ ಜನರು ಈ ಯಾತ್ರೆಯಲ್ಲಿ ಭಾಗಿಯಾಗಲು ಉತ್ಸುಕತೆ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

‘ನಮ್ಮ ಯಾತ್ರೆ ತಮಿಳುನಾಡಿನಿಂದ ಕೇರಳಕ್ಕೆ ಪ್ರವೇಶಿಸಿದೆ. ವಣಕ್ಕಂನಿಂದ ನಮಸ್ಕಾರಂಗೆ ಬಂದಿದ್ದೇವೆ’ ಎಂದು ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. ದೇಶದ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗುವ ಯಾತ್ರೆ 150 ದಿನಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಅಂತ್ಯವಾಗಲಿದೆ.