ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೋ ಮಾಡಿ: ಕೆ.ವಿರೂಪಾಕ್ಷಪ್ಪ
ಅಧ್ಯಕ್ಷ ಸ್ಥಾನದ ಚುನಾವಣೆ ನ್ಯಾಯಯುತವಾಗಿ ಆಗುವ ಭರವಸೆ ಕಾಂಗ್ರೆಸ್ಸಿಗರಿಗೆ ಇಲ್ಲದಂತಾಗಿದೆ. ಕಾಂಗ್ರೆಸ್‌ನ ಗುಲಾಮಗಿರಿ ವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ: ಕೆ.ವಿರೂಪಾಕ್ಷಪ್ಪ
ಸಿಂಧನೂರು(ಸೆ.11): ಕಾಂಗ್ರೆಸ್ ಪಕ್ಷದ ವತಿಯಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈಗೊಂಡಿರುವ ಭಾರತ್ ಜೋಡೋ ಅರ್ಥವಿಲ್ಲದ ಕಾರ್ಯಕ್ರಮವಾಗಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕತ್ವದ ಗೊಂದಲದಿಂದ ಕಾಂಗ್ರೆಸ್‌ನಲ್ಲಿ ಆಂತರಿಕ ಜಗಳ, ಕಚ್ಚಾಟ ನಡೆಯುತ್ತಿದೆ. ಹಿರಿಯ ನಾಯಕರು ಪಕ್ಷ ಬಿಟ್ಟು ಹೊರಬಂದಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆ ನ್ಯಾಯಯುತವಾಗಿ ಆಗುವ ಭರವಸೆ ಕಾಂಗ್ರೆಸ್ಸಿಗರಿಗೆ ಇಲ್ಲದಂತಾಗಿದೆ. ಕಾಂಗ್ರೆಸ್‌ನ ಗುಲಾಮಗಿರಿ ವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ ಎಂದು ದೂರಿದರು.
KARNATAKA POLITICS: ಚುನಾವಣಾ ರಣಕಹಳೆ ಮೊಳಗಿಸಿದ ಹೆಬ್ಬಾರ
ಅಪ್ರಬುದ್ಧ ರಾಹುಲ್ ಗಾಂಧಿ ನಾಯಕತ್ವದಿಂದ ಕಾಂಗ್ರೆಸ್‌ಗೆ ಶಕ್ತಿ ಬರುವುದಿಲ್ಲ. ಅವರು ಭಾರತ್ ಜೋಡೋ ಬದಲಿಗೆ ಕಾಂಗ್ರೆಸ್ ಜೋಡೋ ಯಾತ್ರೆ ಮಾಡುವುದು ಸೂಕ್ತ. ಅಖಂಡ ಭಾರತ ಒಗ್ಗಟ್ಟಾಗಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿದೆ. ಕಾಂಗ್ರೆಸ್ ಈ ಯಾತ್ರೆ ಮೂಲಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಭಾರತಕ್ಕೆ ಜೋಡಿಸುವ ಉದ್ದೇಶ ಹೊಂದಿರುವಂತೆ ಕಾಣುತ್ತಿದೆ. ಯಾವ ಅರ್ಥದಲ್ಲಿ ಜೋಡೋ ಶಬ್ಧ ಬಳಕೆ ಮಾಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ಎಲ್ಲಿ ಹೋದರೂ ಜನ ಸೇರುತ್ತಾರೆ, ಕೇಕೆ, ಸೀಳ್ಳೆ ಹೊಡೆದು ಸ್ವಾಗತಿಸಿ ಸಂಭ್ರಮಿಸುತ್ತಾರೆ. ಆದರೆ, ಅವರನ್ನು ಜನ ಯಾಕೆ ಸೋಲಿಸಿದರು?, ಯಾವ ಪಾರ್ಟಿ ಕರೆದರೂ ಜನರು ಸೇರುತ್ತಾರೆ. ಓಟ್ ಮಾತ್ರ ಯಾರಿಗೆ ಹಾಕಬೇಕೋ ಅವರಿಗೆ ಹಾಕುತ್ತಾರೆ ಎಂದರು. ಬಿಜೆಪಿ ಪಕ್ಷದ ಮುಖಂಡರಾದ ಬಸವರಾಜ ಗೊರೇಬಾಳ, ಮಂಜುನಾಥ ಜವಳಗೇರಾ ಇದ್ದರು.