ವಿಜಯೇಂದ್ರ ಆಯ್ಕೆಯ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ತಿಳಿಯಲಿದೆ: ಕೋಟ ಶ್ರೀನಿವಾಸ ಪೂಜಾರಿ
ಮೋದಿ, ಅಮಿತ್ ಶಾ, ನಡ್ದಾ , ಬಿ.ಎಲ್. ಸಂತೋಷ್ ಎಲ್ಲರೂ ಒಮ್ಮತದಿಂದ ಈ ಆಯ್ಕೆ ಮಾಡಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದವರು. ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ಕೊಡಲಾಗಿದೆ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ(ನ.11): ಪಕ್ಷದ ಹೈಕಮಾಂಡ್ ಬಹಳ ಸಮರ್ಥ, ಯುವಕ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದೆ, ರಾಜ್ಯ ಬಿಜೆಪಿಯ ಇಡೀ ತಂಡವೇ ವಿಜಯೇಂದ್ರ ಜೊತೆ ಒಟ್ಟಾಗಿ ನಿಂತು ಕೆಲಸ ಮಾಡಲಿದೆ, ಮುಂದಿನ ಚುನಾವಣೆಯಲ್ಲಿ ಅದರ ಫಲಿತಾಂಶ ಹೊರಬೀಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭರವಸೆ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ, ಅಮಿತ್ ಶಾ, ನಡ್ದಾ , ಬಿ.ಎಲ್. ಸಂತೋಷ್ ಎಲ್ಲರೂ ಒಮ್ಮತದಿಂದ ಈ ಆಯ್ಕೆ ಮಾಡಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದವರು. ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ಕೊಡಲಾಗಿದೆ ಎಂದರು.
ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಶ್ರೀ ರಾಮುಲು, ಸಿ.ಟಿ. ರವಿಗೆ ಬೇಸರ ಇಲ್ಲ, ಅವರೂ ಎಲ್ಲರೂ ಜೊತೆಯಾಗಿ ಪಕ್ಷ ಸಂಘಟನೆಯ ಕೆಲಸವನ್ನು ಮಾಡುತ್ತಾರೆ. ಎಲ್ಲ ಸಮಾಜವನ್ನು ಒಟ್ಟುಗೂಡಿಸಿಕೊಂಡು ಒಂದು ರಾಜಕೀಯ ಪಕ್ಷವನ್ನು ಕಟ್ಟಲಾಗುತ್ತದೆ ಎಂದ ಅವರು, ಸರ್ವವ್ಯಾಪಿ ಸರ್ವಸ್ಪರ್ಶಿ ಸಮುದಾಯ ಗಮನಲ್ಲಿಟ್ಟು ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದರು.
ವಿಪಕ್ಷ ನಾಯಕನಾಗಲು ಸಿದ್ಧ
ಪಕ್ಷ ಕಳೆದ ಬಾರಿ ನನಗೆ ವಿಪಕ್ಷ ನಾಯಕರ ಸ್ಥಾನದ ಅವಕಾಶ ಕೊಟ್ಟಿತ್ತು, ಈ ಬಾರಿಯೂ ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಹೇಳಿದ್ದೇನೆ. ಬಿಜೆಪಿಯಲ್ಲಿ 34 ಜನ ಮೇಲ್ಮನೆ ಸದಸ್ಯರಿದ್ದಾರೆ, ಹುದ್ದೆಗಳಿಗೆ ನಿರಾಸಕ್ತಿ ಇರುವವರು ಇರೋದಿಲ್ಲ ಎಲ್ಲರಿಗೂ ಆಸಕ್ತಿ ಇರುತ್ತದೆ, ಯಾರನ್ನ ಮಾಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.