ಎಂಎಲ್‌ಸಿ ಎಚ್. ವಿಶ್ವನಾಥ್, ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ಹಿಂದೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯರ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಸೇಡಿನ ರಾಜಕಾರಣ ಎಂದಿರುವ ಅವರು, ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ಮೈಸೂರು (ಮೇ.20): ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂಎಲ್‌ಸಿ ಎಚ್‌.ವಿಶ್ವನಾಥ್‌ ಈ ಪ್ರಕರಣದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಕುಮ್ಮಕ್ಕಿದೆ ಗಂಭೀರ ಆರೋಪ ಮಾಡಿದರು.

ಪೊಲೀಸ್‌ ನೋಟೀಸ್‌ಗೆ ಉತ್ತರ ಕೊಟ್ಟಿದ್ದರೂ ಎಫ್‌ಐಆರ್‌!

ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ನೋಟೀಸ್‌ ನೀಡಿದ್ದರು. ಅದಕ್ಕೆ ತಾವು ಉತ್ತರ ಕೂಡ ನೀಡಿದ್ದೇನೆ. ಆದರೂ ಎಫ್‌ಐಆರ್‌ ದಾಖಲಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿ ತಮ್ಮ ತೇಜೋವಧೆ ಮಾಡಲು ಯತ್ನಿಸಲಾಗುತ್ತಿದೆ ಎಂದು ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

55 ಲಕ್ಷ ಸಾಲ ಕೊಡಲು ಹಣ ಎಲ್ಲಿಂದ ಬಂತು?’

ಕೋಟೆಹುಂಡಿ ಮಹದೇವ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಹೆಚ್‌ ವಿಶ್ವನಾಥ್‌, 'ನಿನಗೆ 55 ಲಕ್ಷ ರೂ. ಸಾಲ ಕೊಡಲು ಹಣ ಎಲ್ಲಿಂದ ಬಂತು?' ಎಂದು ನೇರವಾಗಿ ಪ್ರಶ್ನಿಸಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ನಾನು 50 ವರ್ಷ ರಾಜಕಾರಣದಲ್ಲಿ ಇದ್ದವನು!

ನಾನು 50 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಸದನದಲ್ಲೇ ಸತ್ಯವಂತ ಎಂದು ಪ್ರಮಾಣ ಮಾಡಿದ್ದೇನೆ. ಈ ಕೋಟೆಹುಂಡಿ ಮಹದೇವ ನನ್ನ ಮನೆಯ ಮುಂದೆ ದಿನಾ ಬಂದು ನಿಲ್ಲುತ್ತಿದ್ದ' ಎಂದು ಹೇಳುವ ಮೂಲಕ ಹಳೆಯ ಸಂಬಂಧಗಳನ್ನೂ ಬಹಿರಂಗಪಡಿಸಿದ್ದಾರೆ.

ಯತೀಂದ್ರ ಸೇಡಿನ ರಾಜಕಾರಣ?

'ಸಿದ್ದರಾಮಯ್ಯ ಮಗನನ್ನು ನಾನು HM ಎಂದು ಹೇಳಿದ್ದೆ. ಈಗ ಅದನ್ನೇ ಸೇಡು ತೀರಿಸಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ವಿಶ್ವನಾಥ್‌ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಕೇವಲ ಕೀಟಲೆ ಮಾಡುವ ಕೆಲಸ ಮಾತ್ರ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಎಫ್‌ಐಆರ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರ್ತೀನಿ!

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುವುದಾಗಿ ವಿಶ್ವನಾಥ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಪುತ್ರ ಯತೀಂದ್ರ, ಹೆಚ್‌ ಆರ್ ವಿಶ್ವನಾಥ ನಡುವೆ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ಮೈಸೂರು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.