ಮೂವರಲ್ಲಿ ಇಬ್ಬರು ಮೇಲ್ಮನೆಗೆ, ಒಬ್ಬರು ಮನೆಗೆ! ವಿಧಾನ ಪರಿಷತ್‌ ಚುನಾವಣೆ ​ಮತ ಎಣಿಕೆ ಇಂದು ವಿಧಾನ ಪರಿಷತ್‌ ಚುನಾವಣೆ -ಸ್ಥಳೀಯ ಸಂಸ್ಥೆಗಳ ಕ್ಷೇತ್ರ

ವರದಿ : ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಡಿ.14): ಮೈಸೂರು, ಚಾಮರಾಜನಗರ (Mysuru -chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಡಿ.10 ರಂದು ನಡೆದ ಚುನಾವಣೆಯ ಮತ ಎಣಿಕೆಯು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಕಣದಲ್ಲಿ ಒಟ್ಟು ಏಳು ಮಂದಿ ಇದ್ದಾರೆ. ಆರ್‌. ರಘು (ಬಿಜೆಪಿ BJP), ಡಾ.ಡಿ. ತಿಮ್ಮಯ್ಯ (ಕಾಂಗ್ರೆಸ್‌ Congress), ಸಿ.ಎನ್‌. ಮಂಜೇಗೌಡ (ಜೆಡಿಎಸ್‌ JDS), ವಾಟಾಳ್‌ ನಾಗರಾಜ್‌ (Vatal Nagaraj) (ಕನ್ನಡ ಚಳವಳಿ ಪಕ್ಷ), ಕೆ.ಸಿ. ಬಸವರಾಜಸ್ವಾಮಿ, ಗುರುಲಿಂಗಯ್ಯ, ಆರ್‌. ಮಂಜುನಾಥ್‌ (ಎಲ್ಲರೂ ಪಕ್ಷೇತರರು) ಕಣದಲ್ಲಿದ್ದಾರೆ. ಈ ಪೈಕಿ ಇಬ್ಬರು ಆಯ್ಕೆಯಾಗಲಿದ್ದಾರೆ. ಕಣದಲ್ಲಿ ಏಳು ಮಂದಿ ಇದ್ದರೂ ಗೆಲುವಿಗಾಗಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ (BJP) ಅಭ್ಯರ್ಥಿಗಳ ನಡುವೆ ತ್ರಿಕೋನ ಹೋರಾಟ ನಡೆದಿದೆ. ಹೀಗಾಗಿ ಈ ಮೂವರಲ್ಲಿ ಇಬ್ಬರು ಗೆದ್ದು, ಚಿಂತಕರ ಚಾವಡಿ ಎಂದು ಕರೆಯಲಾಗುವ ‘ಮೇಲ್ಮನೆ’ ಪ್ರವೇಶಿಸಲಿದ್ದಾರೆ. ಒಬ್ಬರು ‘ಮನೆ’ಗೆ ಹೋಗಲಿದ್ದಾರೆ. ಗೆಲ್ಲುವವರು ಯಾರು?. ಮನೆಗೆ ಹೋಗುವವರು ಯಾರು? ಎಂಬ ಕುತೂಹಲ ಕೆರಳಿದೆ.

ಮೈಸೂರು (Mysuru), ಹುಣಸೂರು, ಪಿರಿಯಾಪಟ್ಟಣ, ಕೆ.ಆರ್‌. ನಗರ, ಎಚ್‌.ಡಿ. ಕೋಟೆ, ಟಿ. ನರಸೀಪುರ, ನಂಜನಗೂಡು, ಸರಗೂರು, ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ತಾಲೂಕು ಕೇಂದ್ರಗಳಿಂದ ಮತಪೆಟ್ಟಿಗೆಗಳನ್ನು ಬಿಗಿ ಬಂದೋಬಸ್ತಲ್ಲಿ ತಂದು, ಮತ ಎಣಿಕೆ ನಡೆಯುವ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವ್ಯವಹಾರ ಮತ್ತು ನಿರ್ವಹಣಾ ಕಾಲೇಜಿನಲ್ಲಿ (College) ಇರಿಸಲಾಗಿದೆ. ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಲಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅವರ ನೇತೃತ್ವದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಸಹಾಯಕ ಚುನಾವಣಾಧಿಕಾರಿಯಾದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ ಸೇರಿದಂತೆ ಎಣಿಕೆ ಕಾರ್ಯಕ್ಕೆ ನಿಯೋಜಿತರಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಥ್‌ ನೀಡಲಿದ್ದಾರೆ.

ಒಟ್ಟು 6787 ಮತದಾರರಿದ್ದು, ಈ ಪೈಕಿ 6769 ಮಂದಿ ಮತ ಚಲಾಯಿಸಿದ್ದಾರೆ. ಶೇ.99.73 ರಷ್ಟುಮತದಾನವಾಗಿದೆ. ಮೊದಲಿಗೆ ಮತಪೆಟ್ಟಿಗೆಗಳನ್ನು ತೆಗೆದು, ಮತಪತ್ರಗಳನ್ನು ಮಿಶ್ರಣ ಮಾಡಲಾಗುತ್ತದೆ. ನಂತರ ಕಟ್ಟುಗಳಾಗಿ ವಿಂಗಡಿಸಲಾಗುತ್ತದೆ. ಎಣಿಕೆ ಕಾರ್ಯ ಆರಂಭವಾದಾಗ ಮೊದಲಿಗೆ ತಿರಸ್ಕೃತ ಮತಗಳನ್ನು ತೆಗೆದು, ಕೋಟಾ ನಿಗದಿ ಮಾಡಲಾಗುತ್ತದೆ. ಇದು ದ್ವಿಸದಸ್ಯ ಕ್ಷೇತ್ರವಾಗಿರುವುದರಿಂದ ಸ್ವೀಕೃತ ಮತಗಳಲ್ಲಿ ಮೂರನೇ ಒಂದರಷ್ಟು ಪ್ಲಸ್‌ 1 ಮತಗಳನ್ನು ಪಡೆದರೆ ಮೊದಲ ಸುತ್ತಿನಲ್ಲಿಯೇ ಗೆಲ್ಲಬಹುದು. ಆಗ ಮತ ಎಣಿಕೆ ಕಾರ್ಯ ಬೇಗ ಮುಗಿಯುತ್ತದೆ. ಒಂದು ವೇಳೆ ಒಬ್ಬ ಅಭ್ಯರ್ಥಿ ಕೋಟಾ ತಲುಪಿ ಆಯ್ಕೆಯಾಗಿ, ಇನ್ನೊಬ್ಬರು ಕೋಟಾ ತಲುಪುವ ತನಕ ಎಣಿಕೆ ಮಾಡಲಾಗುತ್ತದೆ. ಕಡಿಮೆ ಮತಗಳು ಇರುವುದರಿಂದ ಆ ಕಾರ್ಯ ಕೂಡ ಬೇಗ ಮುಕ್ತಾಯವಾಗುವ ಸಾಧ್ಯತೆ ಇದೆ.

ಮೂರು ಪಕ್ಷಗಳಿಗೂ ಪ್ರತಿಷ್ಠೆ

ಪ್ರಮುಖ ಪಕ್ಷಗಳ ಮೂವರು ಅಭ್ಯರ್ಥಿಗಳು ತಮಗೆ ಗೆಲವು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaiah) - ಕಾಂಗ್ರೆಸ್‌, ಬಿ.ಎಸ್‌. ಯಡಿಯೂರಪ್ಪ- ಬಿಜೆಪಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) - ಜೆಡಿಎಸ್‌ ಅವರಿಗೂ ಇಲ್ಲಿ ಗೆಲ್ಲುವುದು ಪ್ರತಿಷ್ಠೆಯಾಗಿದೆ.

ಕಾಂಗ್ರೆಸ್‌ಗೆ ಗೆದ್ದೆ ಗೆಲ್ಲುವ ಜೊತೆಗೆ ಜೆಡಿಎಸ್‌ (JDS) ಗೆಲ್ಲಬಾರದು ಎಂಬ ಅಭಿಪ್ರಾಯವಿದೆ. ಬಿಜೆಪಿಗೆ 2009ರ ನಂತರ ಮತ್ತೊಂದು ಗೆಲವು ದಾಖಲಿಸುವ ಹಂಬಲವಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ (GT Devegowda). ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಅವರ ಹೊರತಾಗಿಯೂ ತಮ್ಮ ಪಕ್ಷ ಬಲವಾಗಿದೆ ಎಂಬುದನ್ನು ತೋರಿಸಲು ನಾವು ಗೆಲ್ಲಲೇಬೇಕು ಎಂದು ಜೆಡಿಎಸ್‌ ಹೋರಾಟ ಮಾಡಿದೆ. ‘ಕೈ’ ಮೇಲಾಗುತ್ತಾ, ‘ಕಮಲ’ ಅರಳುತ್ತಾ, ಮಹಿಳೆ ‘ತೆನೆ’ ಹೊರುವಳೇ? ಕಾದು ನೋಡಬೇಕು.

ತಮಗೆ ಗೆಲುವು- ಮೂವರ ಲೆಕ್ಕಾಚಾರ

ಅತಿ ಹೆಚ್ಚು ಚುನಾಯಿತ ಪ್ರತಿನಿಧಿಗಳಿರುವುದರಿಂದ ತಮ್ಮ ಗೆಲವು ಶತಸಿದ್ಧ ಎಂಬುದು ಕಾಂಗ್ರೆಸ್‌ನ ಡಾ.ಡಿ. ತಿಮ್ಮಯ್ಯ ಅವರ ವಿಶ್ವಾಸ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಇಬ್ಬರು ಸಂಸದರು, ಐವರು ಶಾಸಕರು ಇದ್ದಾರೆ. ಇದರಿಂದ ಪ್ರಚಾರ ಕಾರ್ಯ ಉತ್ತಮವಾಗಿ ಆಗಿದ್ದು, ತಾವೇ ಗೆಲ್ಲುವುದು ಎಂದು ಬಿಜೆಪಿ. ಆರ್‌. ರಘು ವಿಶ್ವಾಸದಿಂದ ಇದ್ದಾರೆ. ಈವರೆಗೆ ನಡೆದಿರುವ ಚುನಾವಣೆಯಲ್ಲಿ ಜನತಾ ಪರಿವಾರ ಸೋತಿಲ್ಲ. ಜಿಲ್ಲೆಯಲ್ಲಿ ಪಕ್ಷಕ್ಕೆ ಗಟ್ಟಿನೆಲೆ ಇರುವುದರಿಂದ ಮತದಾರರು ತಮ್ಮನ್ನು ಕೈಬಿಟ್ಟಿಲ್ಲ ಎಂದು ಮಂಜೇಗೌಡ ಹೇಳುತ್ತಾರೆ.

ಜಾತಿ, ಹಣ....ದೇವರು

ಈ ಚುನಾವಣೆಯಲ್ಲಿ ಜಾತಿ ಅದಕ್ಕಿಂತ ಮುಖ್ಯವಾಗಿ ಹಣವೂ ಕೆಲಸ ಮಾಡಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಒಬ್ಬರು ಸಂಖ್ಯಾಶಾಸ್ತ್ರದ ಪ್ರಕಾರ ಬೆಳ್ಳಿ ನಾಣ್ಯ, 36 ಸಾವಿರ, ಮತ್ತೊಬ್ಬರು 30 ಸಾವಿರ, ಇನ್ನೊಬ್ಬರು 20 ಸಾವಿರ ರು. ‘ಕಾಣಿಕೆ’ ನೀಡಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಹಿಂದಿನ ಚುನಾವಣೆಗಳಲ್ಲಿ ಚಾಮುಂಡೇಶ್ವರಿ, ಮಹದೇಶ್ವರನ ಮೇಲೆ ಆಣೆ- ಪ್ರಮಾಣ ನಡೆದಿದ್ದರೆ ಈ ಬಾರಿ ಮಂಜುನಾಥಸ್ವಾಮಿ ಮೇಲೆ ಕೂಡ ಈ ಕಾರ್ಯ ನಡೆದಿದೆ.