Council Election Karnataka: ಮೂರು ಪಕ್ಷಗಳಿಗೂ ಇಲ್ಲಿ ಗೆಲುವು ಪ್ರತಿಷ್ಠೆ : ಕುತೂಹಲವಾಗಿದೆ ಕ್ಷೇತ್ರ
- ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣೆ
- ಚುನಾವಣೆಯಲ್ಲಿ ಗೆಲ್ಲುವುದನ್ನು ಮೂರು ಪ್ರಮುಖ ರಾಜಕೀಯ ಪಕ್ಷಗಳು ಸವಾಲಾಗಿ ಸ್ವೀಕರಿಸಿವೆ
ವರದಿ : ಅಂಶಿ ಪ್ರಸನ್ನಕುಮಾರ್
ಮೈಸೂರು (ಡಿ.09): ಮೈಸೂರು- ಚಾಮರಾಜನಗರ (chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ (Election) ಗೆಲ್ಲುವುದನ್ನು ಮೂರು ಪ್ರಮುಖ ರಾಜಕೀಯ (Politics) ಪಕ್ಷಗಳು ಸವಾಲಾಗಿ ಸ್ವೀಕರಿಸಿವೆ. ಇದರಿಂದಾಗಿಯೇ ಮೂರು ಪಕ್ಷಗಳ ಪರ ಅತಿರಥ ಮಹಾರಥಗಳು ಚುನಾವಣಾ ಪ್ರಚಾರಕ್ಕೆ ಬಂದು ಹೋಗಿದ್ದಾರೆ. ಕಾಂಗ್ರೆಸ್ (Congress) ಪರ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಮಾಜಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಸಿ.ಪುಟ್ಟ ರಂಗಶೆಟ್ಟಿ, ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ ಮತ್ತು ಪಕ್ಷದ ಎಲ್ಲಾ ಶಾಸಕರು, ಮಾಜಿ ಶಾಸಕರು, ಮುಖಂಡರು ಪ್ರಚಾರ ಮಾಡಿದ್ದಾರೆ.
ಜೆಡಿಎಸ್(JDS) ಪರ ಮಾಜಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD kumaraswamy), ಮಾಜಿ ಸಚಿವ ಸಾ.ರಾ. ಮಹೇಶ್ (Sa Ra Mahesh), ಶಾಸಕರು, ಮಾಜಿ ಶಾಸಕರು, ಮುಖಂಡರು ಪ್ರಚಾರ ಮಾಡಿದ್ದಾರೆ.
ಬಿಜೆಪಿಯ (BJP) ಪರವಾಗಿ ಡಜನ್ ಗಟ್ಟಲೇ ನಾಯಕರು ಬಂದು ಹೋಗಿದ್ದಾರೆ. ಅವರಲ್ಲಿ ಕೇಂದ್ರ ಸಚಿವೆ ಶೋಭಾ ಕರಂಂದ್ಲಾಜೆ , ಮಾಜಿ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS yediyurappa), ಸಂಸದರಾದ ವಿ. ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ, ಸ ಸಚಿವರಾದ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಎಸ್.ಟಿ. ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಮುಖರು. ಇದಲ್ಲದೇ ಪಕ್ಷದ ಮಾಜಿ ಶಾಸಕರು, ಮುಖಂಡರು ಪ್ರಚಾರ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರ ತವರು ಜಿಲ್ಲೆ ಇದಾಗಿರುವುದರಿಂದ ಕಾಂಗ್ರೆಸ್‌ಗೆ (Congress) ಇಲ್ಲಿ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆ. ಉಭಯ ಜಿಲ್ಲೆಗಳ 15 ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್, 5 ರಲ್ಲಿ ಬಿಜೆಪಿ, 4 ರಲ್ಲಿ ಜೆಡಿಎಸ್ (JDS) ಶಾಸಕರಿದ್ದಾರೆ.
ನರಸಿಂಹರಾಜದ ತನ್ವೀರ್ ಸೇಠ್, ವರುಣದ ಡಾ. ಯತೀಂದ್ರ ಸಿದ್ದರಾಮಯ್ಯ, ಹುಣಸೂರಿನ ಎಚ್.ಪಿ. ಮಂಜುನಾಥ್, ಎಚ್.ಡಿ. ಕೋಟೆಯ ಅನಿಲ್ ಚಿಕ್ಕಮಾದು, ಚಾಮರಾಜನಗರದ ಸಿ. ಪುಟ್ಟರಂಗಶೆಟ್ಟಿ, ಹನೂರಿನ ಆರ್. ನರೇಂದ್ರ- ಕಾಂಗ್ರೆಸ್ ಪ್ರತಿನಿಧಿಸುವ ಶಾಸಕರು. ಕೃಷ್ಣರಾಜದ ಎಸ್.ಎ. ರಾಮದಾಸ್, ಚಾಮರಾಜದ ಎಲ್. ನಾಗೇಂದ್ರ, ನಂಜನಗೂಡಿನ ಬಿ. ಹರ್ಷವರ್ಧನ್, ಗುಂಡ್ಲುಪೇಟೆಯ ಸಿ.ಎಸ್. ನಿರಂಜನಕುಮಾರ್, ಕೊಳ್ಳೇಗಾಲದ ಎನ್. ಮಹೇಶ್- ಬಿಜೆಪಿ ಪ್ರತಿನಿಧಿಸುವ ಶಾಸಕರು.
ಚಾಮುಂಡೇಶ್ವರಿಯ ಜಿ.ಟಿ. ದೇವೇಗೌಡ (GT Devegowda), ಕೆ.ಆರ್. ನಗರದ ಸಾ.ರಾ. ಮಹೇಶ್, ಪಿರಿಯಾ ಪಟ್ಟಣದ ಕೆ. ಮಹದೇವ್ ಹಾಗೂ ಟಿ. ನರಸೀಪುರದ ಎಂ. ಅಶ್ವಿನ್‌ಕುಮಾರ್- ಜೆಡಿಎಸ್ ಪ್ರತಿನಿಧಿಸುವ ಶಾಸಕರು. ಈ ಪೈಕಿ ಜಿ.ಟಿ. ದೇವೇಗೌಡರು ಜೆಡಿಎಸ್‌ನಿಂದ ದೂರ ಇದ್ದಾರೆ.
ಕಾಂಗ್ರೆಸ್‌ನಲ್ಲಿ ಆರ್. ಧರ್ಮಸೇನ, ಜೆಡಿಎಸ್‌ನಲ್ಲಿ ಮರಿ ತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಸಂದೇಶ್ ನಾಗರಾಜ್, ಬಿಜೆಪಿಯಲ್ಲಿ ಎಚ್. ವಿಶ್ವನಾಥ್ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಈ ಬಾರಿ ಆರ್. ಧರ್ಮಸೇನ ಅವರಿಗೆ ಕಾಂಗ್ರೆಸ್ ಹಾಗೂ ಸಂದೇಶ್ ನಾಗರಾಜ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿಲ್ಲ. ಧರ್ಮಸೇನ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಸಂದೇಶ್ ನಾಗರಾಜ್ ಜೆಡಿಎಸ್‌ನಿಂದ ದೂರ ಇದ್ದಾರೆ. ಮರಿತಿಬ್ಬೇಗೌಡ ಜೆಡಿಎಸ್ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಕೆ.ಟಿ. ಶ್ರೀಕಂಠೇಗೌಡರು ಪ್ರಚಾರ ಮಾಡಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಎಚ್. ವಿಶ್ವನಾಥ್ ಸುದ್ದಿಗೋಷ್ಠಿ ಬಿಜೆಪಿ ಬೆಂಬಲಿಸಿದ್ದಾರೆ.
ಕಾಂಗ್ರೆಸ್‌ನಿಂದ ಆರೋಗ್ಯ ಇಲಾಖೆ (Health Department) ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ.ತಿಮ್ಮಯ್ಯ, ಬಿಜೆಪಿಯಿಂದ (BJP) ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು, ಜೆಡಿಎಸ್‌ನಿಂದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ, ಗ್ರಾಪಂ ಹಾಗೂ ತಾಪಂ ಮಾಜಿ ಸದಸ್ಯ ಸಿ.ಎನ್. ಮಂಜೇಗೌಡ ಅಭ್ಯರ್ಥಿಗಳಾಗಿದ್ದಾರೆ.
ಇನ್ನೇನು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು (ZP - TP Election) ಬರುವುದರಿಂದ, ತಮ್ಮ ಮುಂದಿನ ಚುನಾವಣೆಗೆ (Election) ಇವೆಲ್ಲಾ ಬುನಾದಿ ಆಗಿರುವುದರಿಂದ ಎಲ್ಲಾ ಶಾಸಕರಿಗೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಲ್ಲದೇ ಆಯಾ ಪಕ್ಷಗಳ ಟಿಕೆಟ್ (Ticket) ಆಕಾಂಕ್ಷಿಗಳು ಈ ದಿಸೆಯಲ್ಲಿ ಬೆವರು ಸುರಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿ, ನಿಯಮಿತವಾಗಿ ಚುನಾವಣೆ ನಡೆಸಲು ಆರಂಭಿಸಿದ ನಂತರ ಈವರೆಗೆ ಐದು ಚುನಾವಣೆಗಳು, ಒಂದು ಉಪ ಚುನಾವಣೆ ನಡೆದಿದ್ದು, ಮೊದಲ ಬಾರಿ ಕಾಂಗ್ರೆಸ್‌ನ ಟಿ.ಎನ್. ನರಸಿಂಹಮೂರ್ತಿ- ಜನತಾಪಕ್ಷದ ವಿ.ಎಚ್. ಗೌಡ, ಎರಡನೇ ಬಾರಿ ಕಾಂಗ್ರೆಸ್‌ನ ಸಿ. ರಮೇಶ್- ಜನತಾದಳದ ವೈ. ಮಹೇಶ್, ಮೂರನೇ ಬಾರಿ ಕಾಂಗ್ರೆಸ್‌ನ ಎನ್. ಮಂಜುನಾಥ್- ಜೆಡಿಎಸ್‌ನ ಬಿ. ಚಿದಾನಂದ, ನಾಲ್ಕನೇ ಬಾರಿ ಜೆಡಿಎಸ್‌ನ ಸಂದೇಶ್ ನಾಗರಾಜ್- ಬಿಜೆಪಿಯ ಪ್ರೊ.ಕೆ.ಆರ್. ಮಲ್ಲಿಕಾರ್ಜನಪ್ಪ ಗೆದ್ದಿದ್ದರು. ಮಲ್ಲಿಕಾರ್ಜನಪ್ಪ ಅವರು 2013 ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಇನ್ನೂ ಎರಡೂವರೆ ವರ್ಷ ಇರುವಾಗಲೇ ರಾಜಿನಾಮೆ ನೀಡಿದ್ದರಿಂದ 2013 ರಲ್ಲಿ ಉಪ ಚುನಾವಣೆ ನಡೆಯಿತು. ಆಗ ಕಾಂಗ್ರೆಸ್‌ನ ಆರ್. ಧರ್ಮಸೇನ ಚುನಾಯಿತರಾಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಸ್ಪರ್ಧಿಸಿರಲಿಲ್ಲ. ಕೆಜೆಪಿಯಿಂದ ಯು.ಎಸ್. ಶೇಖರ್ ಕಣದಲ್ಲಿದ್ದರು.
2015 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ಧರ್ಮಸೇನ ಹಾಗೂ ಜೆಡಿಎಸ್‌ನ ಸಂದೇಶ್ ನಾಗರಾಜ್ ಪುನಾರಾಯ್ಕೆಯಾಗಿದ್ದರು.
ಆರು ವರ್ಷಗಳ ಹಿಂದೆ ನಡೆದ ಚುನಾವಣೆ ನಂತರ ರಾಜಕೀಯವಾಗಿ ಸಾಕಷ್ಟುಬದಲಾವಣೆಗಳಾಗಿವೆ. ಮೊದಲೆಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ಎಂದರೇ ಕಾಂಗ್ರೆಸ್ ಹಾಗೂ ಜನತಾ ಪರಿವಾರಕ್ಕೆ ತಲಾ ಒಂದೊಂದು ಸ್ಥಾನ ಎಂಬಂತಿತ್ತು. ಇದು 2009 ರಲ್ಲಿ ಬಾರಿ ಸುಳ್ಳಾಗಿದೆ. ನಾನಾ ಕಾರಣಗಳಿಂದ ಬಿಜೆಪಿ ಕೂಡ ಈಗ ಪೈಪೋಟಿ ಕೊಡುವ ಮಟ್ಟಕ್ಕೆ ಬೆಳೆದಿದೆ. ಹೀಗಾಗಿ ಎರಡು ಸ್ಥಾನಗಳಲ್ಲಿ ಗೆಲ್ಲುವರು ಯಾರು? ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು
ಡಾ.ಡಿ. ತಿಮ್ಮಯ್ಯ- ಕಾಂಗ್ರೆಸ್
ಸಿ.ಎನ್. ಮಂಜೇಗೌಡ- ಜೆಡಿಎಸ್
ಆರ್. ರಘು- ಬಿಜೆಪಿ
ವಾಟಾಳ್ ನಾಗರಾಜ್- ಕನ್ನಡ ಚಳವಳಿ ವಾಟಾಳ್ ಪಕ್ಷ
ಕೆ.ಸಿ. ಬಸವರಾಜ ಸ್ವಾಮಿ, ಗುರುಲಿಂಗಯ್ಯ, ಆರ್. ಮಂಜುನಾಥ್