ಸೋಮವಾರದಿಂದ ಎರಡು ವಾರಗಳ ಕಾಲ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಹತ್ತಾರು ಸಂಘಟನೆಗಳು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಸುವರ್ಣಸೌಧದ ಎದುರು ಪ್ರತಿಭಟನೆಗೆ ಮುಂದಾಗಿವೆ.

 ಮಲ್ಲಿಕಾರ್ಜುನ ಸಿದ್ದಣ್ಣವರ

 ಹುಬ್ಬಳ್ಳಿ : ಸೋಮವಾರದಿಂದ ಎರಡು ವಾರಗಳ ಕಾಲ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಹತ್ತಾರು ಸಂಘಟನೆಗಳು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಸುವರ್ಣಸೌಧದ ಎದುರು ಪ್ರತಿಭಟನೆಗೆ ಮುಂದಾಗಿವೆ. ಇವುಗಳ ಮಧ್ಯೆ ಹತ್ತಾರು ವರ್ಷಗಳಿಂದ ಪರಿಹಾರ ಕಾಣದೇ ಇರುವ ಹಳೆಯ ಬೇಡಿಕೆಗಳ ಕೂಗು ತುಸು ಜೋರಾಗಿ ಕೇಳಿ ಬರುತ್ತಿದೆ.

ಕರ್ನಾಟಕ ರಾಜ್ಯ ರಚನೆಯಾದಂದಿನಿಂದ ಅಭಿವೃದ್ಧಿಯಲ್ಲಿ ಸದಾ ತಾರತಮ್ಯ ಎದುರಿಸುತ್ತ ಬಂದ ರಾಜ್ಯದ ಉತ್ತರ ಭಾಗದ ಜನತೆಗೆ ಬಹು ದೊಡ್ಡ ಆಶಾಕಿರಣವಾಗಿದ್ದ ಈ ‘ಬೆಳಗಾವಿ ಅಧಿವೇಶನ’ ಅತಿ ವೈಭವದಿಂದ 17 (4 ಬಾರಿ ಕೆಎಲ್‌ಇ ಆವರಣ, 13 ಸಲ ಸುವರ್ಣಸೌಧ) ಬಾರಿ ನಡೆದಿದ್ದರೂ ಈ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅದು ವಿಫಲವಾಗಿದ್ದರಿಂದ ಅವು ಮತ್ತೆ, ಮತ್ತೆ ಧ್ವನಿಸುತ್ತಲೇ ಇವೆ.

ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮಾನತೆಗೆ ಮುಲಾಮು ಸೂಚಿಸಿರುವ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ಅವರು ತಮ್ಮ ವರದಿಯಲ್ಲಿ, ‘ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲಕ ಈ ಭಾಗದ ಸಮಸ್ಯೆಗಳ ಬಗ್ಗೆ ಉಭಯ ಸದನದಲ್ಲಿ ಸಮರ್ಪಕ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಇದರಿಂದ ಸರ್ಕಾರಿ ಆಡಳಿತ ಉತ್ತರಕ್ಕೆ ಬಂದಂತಾಗಲಿದೆ’ ಎಂದು ಸಲಹೆ ನೀಡಿದ್ದರು. ಈಗ ಸರ್ಕಾರವೇನೊ ಉತ್ತರಕ್ಕೆ ಬಂದಿದೆ. ಆದರೆ, ಇಲ್ಲಿನ ಸಮಸ್ಯೆಗಳ ಬಗ್ಗೆ ತಲಸ್ಪರ್ಶಿ ಚರ್ಚೆಯಾಗಿಲ್ಲ. ನಾವು ಈ ಸಮಸ್ಯೆಗಳನ್ನು ನೀಗಿಸಿಯೇ ತೀರುತ್ತೇವೆ ಎನ್ನುವ ರಾಜಕೀಯ ಇಚ್ಛಾಶಕ್ತಿಯನ್ನು ಅಧಿಕಾರ ನಡೆಸಿದ ಯಾವುದೇ ಸರ್ಕಾರ ಪ್ರದರ್ಶಿಸಿಲ್ಲ ಎನ್ನುವುದು ಅಷ್ಟೇ ಸತ್ಯ.

ಒಗ್ಗೂಡದ ನಾಯಕರು:

2016ರ ಅಧಿವೇಶನದ ವೇಳೆ ಇದೇ ರೀತಿ ಉತ್ತರದ ಸಮಸ್ಯೆಗಳು ದಾಂಗುಡಿ ಇಟ್ಟಾಗ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಉತ್ತರದ ವಿವಿಧ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿ, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸಿದ್ದರು. ಆದರೆ, ‘ಪಕ್ಷ ರಾಜಕೀಯದ ಅತಂತ್ರ ರಾಜಕಾರಣ’ ಈ ಒಗ್ಗಟ್ಟಿನ ಧ್ವನಿಗೆ ಅವಕಾಶ ನೀಡಲಿಲ್ಲ. ಹಾಗಾಗಿ, ಪ್ರತಿ ಅಧಿವೇಶನದಲ್ಲಿ ಕೊನೆಯ ಎರಡು ದಿನ ಉತ್ತರದ ಸಮಸ್ಯೆಗಳ ಚರ್ಚೆಗೆ ಮೀಸಲಿಟ್ಟರೂ ಅದು ತೌಡು ಕುಟ್ಟುವ ಪ್ರಕ್ರಿಯೆ ಎನಿಸಿದೆ.

ಬೆಳಗಾವಿಯ ಹಿರಿಯ ರಾಜಕಾರಣಿ ಉಮೇಶ ಕತ್ತಿಯವರು ಈ ರಾಜಕೀಯ ಹಿನ್ನಡೆಗೆ ಬೇಸತ್ತು ಆಗಾಗ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿದ್ದರು. ಅದನ್ನು ಕೂಡ ಯಾರೂ ಗಂಭೀರವಾಗಿ ಪರಿಗಣಿಸದೇ ಅಪಹಾಸ್ಯ ಮಾಡುತ್ತಿದ್ದರು. ನಾಡಿನ ಐಕ್ಯತೆ ಮುರಿಯುವ ಯತ್ನವೆಂದು ಆಕ್ಷೇಪಿಸುತ್ತಿದ್ದರು. ಇಂತವರಿಗೆ ಪ್ರಾದೇಶಿಕ ಅನ್ಯಾಯ, ಅಸಮಾನತೆ ನೀಗಿಸುವುದಕ್ಕಿಂತ ಹುಸಿ ಐಕ್ಯತೆಯಲ್ಲಿ ಉತ್ತರದ ನ್ಯಾಯವನ್ನು ಬಲಿ ಕೊಡುವುದೆ ಮುಖ್ಯವಾಗಿರುತ್ತಿತ್ತು.

ಅದೆಷ್ಟು ದಿನ ಕೇಳುವುದು?:

ಕೃಷ್ಣೆಯ ಕಣ್ಣೀರು:

ರಾಷ್ಟ್ರದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಆಲಮಟ್ಟಿ ಯೋಜನೆ (ಕೃಷ್ಣಾ ಮೇಲ್ದಂಡೆ ಯೋಜನೆ) ಆರಂಭವಾಗಿ ಅರ್ಧ ಶತಮಾನ ಕಳೆಯುತ್ತ ಬಂದಿದೆ. ಆದರೆ, ಇನ್ನೂ ಎರಡನೇ ಹಂತ, ಮೂರನೇ ಹಂತ, ಭೂಸ್ವಾಧೀನ, ಪರಿಹಾರ ನೀಡಿಕೆ... ಇತ್ಯಾದಿ ಮಾತುಗಳು ಕೇಳಿ ಬರುತ್ತಿದೆಯೇ ಹೊರತು, ಇಡೀ ಯೋಜನೆಯನ್ನು ಪೂರ್ಣಗೊಳಿಸಿ ರಾಜ್ಯದ ನೀರಿನ ಪಾಲನ್ನು ದಕ್ಕಿಸಿಕೊಳ್ಳುವುದರ ಜತೆಗೆ ಕೃಷ್ಣೆಯ ಮಕ್ಕಳ ಜಮೀನಿಗೆ ನೀರುಣಿಸುತ್ತೇವೆ ಎನ್ನುವ ಇಚ್ಚಾಶಕ್ತಿಯನ್ನು ಯಾರೂ ತೋರುತ್ತಿಲ್ಲ. ಪ್ರತಿವರ್ಷದ ಬಜೆಟ್‌ನಲ್ಲಿ ಒಂದಿಷ್ಟು ಹಣ ಇಟ್ಟು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದುದರಿಂದ ಆ ಪುಡಿಗಾಸು ಈ ಬೃಹತ್‌ ಯೋಜನೆಗೆ ಅರೆಕಾಸಿನ ಮಜ್ಜಿಗೆ ಆಗುತ್ತಿದೆ.

ಮಹದಾಯಿ ಮರುಕ:

ಬಾದಾಮಿಯ ಬಿ.ಎಂ.ಹೊರಕೇರಿ ಅವರು 80ರ ದಶಕದಲ್ಲಿ ಕನಸು ಕಂಡಿದ್ದ ಯೋಜನೆ ಮಹದಾಯಿ. ಮಹದಾಯಿ ಕಣಿವೆಯ ನೀರನ್ನು ಕಳಸಾ-ಬಂಡೂರಿ ಹಳ್ಳಗಳ ಮೂಲಕ ಮಲಪ್ರಭೆಗೆ ಕೂಡಿಸುವ ತಿರುವು ಯೋಜನೆ ಐದು ದಶಕಗಳಿಂದ ನನೆಗುದಿಗೆ ಬಿದ್ದಿದೆ. ಈ ಮಹದಾಯಿ ಹೋರಾಟ ಹಲವು ನಾಯಕರನ್ನು ಸೃಷ್ಟಿಸಿ ಅವರಿಗೆ ರಾಜಕೀಯ ನೆಲೆ ಕಲ್ಪಿಸಿದೆ. ಹೀಗೆ ರಾಜಕೀಯ ಲಾಭ ಪಡೆದ ಶಾಸಕ, ಸಚಿವ, ಸಂಸದ, ಮುಖ್ಯಮಂತ್ರಿಗಳು ಹೋರಾಟದ ವೇಳೆ ರಕ್ತದಲ್ಲಿ ಪತ್ರ ಬರೆದು, ಎಂಥ ತ್ಯಾಗಕ್ಕೂ ಸಿದ್ಧ ಎಂದು ಕೂಗಿ, ಕೂಗಿ ಹೇಳಿದ್ದರು. ಮುಂದೆ ನಿರ್ಣಾಯಕ ಸ್ಥಾನದಲ್ಲಿ ತಾವೇ ಕುಳಿತು ಅಧಿಕಾರ ನಡೆಸುವಾಗ ಮತ್ತೊಬ್ಬರೆಡೆ ಬೆರಳು ತೋರಿಸಿದರೆ ವಿನಃ ಮಹದಾಯಿಗಾಗಿ ತಮ್ಮ ಬದ್ಧತೆ ತೋರಿದ ಒಬ್ಬನೆ ಒಬ್ಬ ನಾಯಕ ಉತ್ತರದಲ್ಲಿ ಸಿಗುತ್ತಿಲ್ಲ. ಚುನಾವಣೆ ಬಂದಾಗಲೆಲ್ಲ ಕಳಸಾ-ಬಂಡೂರಿ ಅನುಷ್ಠಾನ, ಮಹದಾಯಿ ನಮ್ಮ ಹಕ್ಕು ಎನ್ನುವ ಹಳೆಯ ಘೋಷಣೆಗಳ ತುತ್ತೂರಿ ತಪ್ಪದೇ ಮೊಳಗುತ್ತದೆ.

ನೆರೆಸಂತ್ರಸ್ತರು:

2008, 2009, 2011, 2016, 2018 ಈ ಐದು ವರ್ಷ ಭಾರೀ ಮಳೆಗೆ ಉತ್ತರದ ತುಂಗಭದ್ರಾ, ವರದಾ, ಕುಮುದ್ವತಿ, ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ, ಮಲಪ್ರಭೆ, ಘಟಪ್ರಭೆ, ಕೃಷ್ಣೆ, ದೋಣಿ, ಭೀಮಾ ನದಿಗಳು ಉಕ್ಕೇರಿ ಅಪಾರ ಪ್ರಮಾಣದ ಆಸ್ತಿ, ಪ್ರಾಣ ಹಾನಿಯಾಯಿತು. ಊರಿಗೆ ಊರೇ ಜಲಾವೃತಗೊಂಡು ಹಳ್ಳಿಗರು ಮನೆ, ಮಠ ಕಳೆದುಕೊಂಡರು. ಜಾನುವಾರುಗಳು ನೀರುಪಾಲಾದವು. ಹೊಲದಲ್ಲಿನ ಬೆಳೆ ಕೊಚ್ಚಿಹೋಯಿತು. ನಿರಾಶ್ರಿತರ ಕೇಂದ್ರಗಳಲ್ಲಿ ಲಕ್ಷ, ಲಕ್ಷ ಜನ ಆಸರೆ ಪಡೆದು ಸರ್ಕಾರದ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದರು. ಶಾಶ್ವತ ಪರಿಹಾರಕ್ಕಾಗಿ ಇಂದಿಗೂ ಎದುರು ನೋಡುತ್ತಿದ್ದಾರೆ. ನವಗ್ರಾಮಗಳು ಬಳಕೆಯಾಗದೇ ಹಾಳುಬಿದ್ದಿವೆ. ಮತ್ತೆ ಹ್ರವಾಹ ಬಂದರೆ ಏನು ಮಾಡುವುದು? ಎನ್ನುವ ಆತಂಕದಲ್ಲಿದ್ದಾರೆ ಈ ನೆರೆ ಸಂತ್ರಸ್ತರು. ಹೀಗೆ ಉಕ್ಕೇರುವ ಹಳ್ಳ-ಹೊಳೆಗಳ ಅತಿಕ್ರಮಣ ತೆರವು, ಹೂಳು ತೆಗೆಸುವುದೇ ಈ ಪ್ರವಾಹ ಸಮಸ್ಯೆಗೆ ಉತ್ತರ ಎಂದು ಹಲವು ತಜ್ಞರು ಸಲಹೆ ನೀಡಿದ್ದರೂ ಸರ್ಕಾರ ಇನ್ನೂ ಈ ಹಳ್ಳ-ಹೊಳೆಗಳ ಸರಿಯಾದ ಸರ್ವೇ ಕಾರ್ಯವನ್ನೇ ಮುಗಿಸಿಲ್ಲ.

ಅಧಿಕಾರ ವಿಕೇಂದ್ರೀಕರಣ:

ಬೆಳಗಾವಿಯಲ್ಲಿ ನಾನೂರು ಕೋಟಿಗೂ ಹೆಚ್ಚು ವ್ಯಯಿಸಿ ನಿರ್ಮಿಸಿರುವ ಸುವರ್ಣ ವಿಧಾನಸೌಧಕ್ಕೆ ಉತ್ತರ ಭಾಗಕ್ಕೆ ಸಂಬಂಧಿಸಿದ ಕೈಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲನಿಗಮ, ಸಕ್ಕರೆ ನಿರ್ದೇಶನಾಲಯ ಸೇರಿದಂತೆ ಹತ್ತಾರು ನಿಗಮ, ವಿವಿಧ ಇಲಾಖೆಗಳ ಪ್ರಾದೇಶಿಕ ಕಚೇರಿಗಳನ್ನು ವರ್ಗಾಯಿಸಬೇಕು ಎಂದು ಈ ಸೌಧ ನಿರ್ಮಾಣವಾದಂದಿನಿಂದ ಒತ್ತಾಯಗಳು ಕೇಳಿ ಬರುತ್ತಿವೆ. ಆದರೂ, ಐಎಎಸ್‌ ಆಡಳಿತಶಾಯಿ ಕೈಗೊಂಬೆ ಆಗಿರುವ ಸರ್ಕಾರ ಈ ಕುರಿತು ಅಷ್ಟಾಗಿ ಸ್ಪಂದಿಸುತ್ತಿಲ್ಲ. ಇಷ್ಟು ದೊಡ್ಡ ಸೌಧ ವರ್ಷಕ್ಕೆ ಎರಡು ವಾರ ಅಧಿವೇಶನಕ್ಕಷ್ಟೇ ಸೀಮಿತವಾಗಿದ್ದು, ಉಳಿದ ಇಡೀ ವರ್ಷ ಖಾಲಿ ಬಿದ್ದಿರುತ್ತದೆ. ಹೀಗೆ ಖಾಲಿ ಇರುವ ಸೌಧವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಸರ್ಕಾರ ಕೋಟಿ, ಕೋಟಿ ಹಣವನ್ನು ನಿರ್ವಹಣಾ ವೆಚ್ಚವಾಗಿ ಭರಿಸುತ್ತಿದೆ. ಹೀಗಿದ್ದೂ, ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲು ಸರ್ಕಾರ ಏಕೆ ಮನಸ್ಸು ಮಾಡುತ್ತಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಗುಳೆ ಹೋಗುವಿಕೆ:

ಬರಗಾಲಕ್ಕೆ ಬೇಸತ್ತು ಉತ್ತರ ಕರ್ನಾಟಕದ ಜನತೆ ಉದ್ಯೋಗ ಅರಸಿ ದೂರದ ಬೆಂಗಳೂರು, ಮಂಗಳೂರು, ನೆರೆಯ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಗೆ ವಲಸೆ (ಗುಳೆ) ಹೋಗುತ್ತಿರುವುದು ಈ ಭಾಗದ ಬಹು ದೊಡ್ಡ ಸಮಸ್ಯೆ. ಹೀಗೆ ಗುಳೆ ಹೋಗುವ ಕುಟುಂಬಗಳು ತಮ್ಮೊಂದಿಗೆ ಓದುವ ಮಕ್ಕಳನ್ನು ಕರೆದೊಯ್ಯುತ್ತಿರುವುದರಿಂದ ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಪಾಲಕರೊಂದಿಗೆ ಬಾಲ ಕಾರ್ಮಿಕರಾಗಿ ದುಡಿಯುತ್ತಾರೆ. ಮುಂದೆ ಖಾಯಂ ವಲಸಿಗರಾಗಿ ಅಲ್ಲಲ್ಲಿ ಉಳಿದುಕೊಳ್ಳುತ್ತಾರೆ. ಹೀಗಾಗಿ, ಗುಳೆ ಹೋಗುವವರ ಸಮೀಕ್ಷೆ ನಡೆಯಬೇಕು.

ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಎಲ್ಲರ ಕೈಗೂ ಕೆಲಸ ನೀಡುವುದಿಲ್ಲ. ಬದಲಾಗಿ ಅಲ್ಲಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವರಿಗೆ ಉದ್ಯೋಗ ನೀಡಬೇಕು. ಅವರ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಸ್ವಾವಲಂಬಿ ಮಾಡಬೇಕು. ನಾಲ್ಕಾರು ದಶಕಗಳಿಂದ ಗೋವಾ, ಮಹಾರಾಷ್ಟ್ರದಲ್ಲಿ ವಲಸಿಗರಾಗಿ ನೆಲೆಸಿ, ಅತಂತ್ರ ಸ್ಥಿತಿ ಎದುರಿಸುತ್ತಿರುವ ವಲಸಿಗರನ್ನು ಪುನಃ ವಾಪಸ್‌ ಕರೆಸಿಕೊಳ್ಳಬೇಕು ಎನ್ನುವ ಸಂಗತಿ ಹಲವು ಬಾರಿ ಸದನದಲ್ಲೂ ಪ್ರಸ್ತಾಪವಾಗಿದೆ. ಆದರೂ, ಅದನ್ನು ಕಾರ್ಯರೂಪಕ್ಕೆ ತರಲು ಯಾರೂ ಕಿಂಚಿತ್‌ ಪ್ರಯತ್ನ ನಡೆಸಿಲ್ಲ ಎನ್ನುವುದು ವಿಷಾದದ ಸಂಗತಿ.

ಪ್ರತಿಭಾ ವಲಸೆ:

ಉತ್ತರ ಕರ್ನಾಟಕದ ಇಂಜಿನಿಯರಿಂಗ್‌, ಎಂಬಿಎ ಮುಂತಾದ ವೃತ್ತಿಪರ ಕೋರ್ಸ ಓದಿದ ಪ್ರತಿಭಾವಂತರು ತಮ್ಮ ವಿದ್ಯೆಗೆ ಅನುಗುಣವಾಗಿ ಕೆಲಸ ಪಡೆಯಲು ಬೆಂಗಳೂರು, ಮುಂಬೈ, ಪುಣೆ, ದೆಹಲಿ, ಚೆನ್ನೈ ಮಹಾನಗರಗಳನ್ನು ಅವಲಂಬಿಸುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಬೃಹತ್‌ ಉದ್ದಿಮೆಗಳು, ಐಟಿ ಕಂಪನಿಗಳನ್ನು ಈ ಭಾಗದಲ್ಲಿ ಸ್ಥಾಪಿಸುವಂತಾಗಬೇಕು. ಹುಬ್ಬಳ್ಳಿಯಲ್ಲಿ ತಲೆಯೆತ್ತಿರುವ ಇನ್ಫೋಸಿಸ್‌ ಐಟಿ ಕಂಪನಿ ಶೀಘ್ರ ಕಾರ್ಯಾರಂಭ ಮಾಡಲಿ ಎನ್ನುವ ಕೂಗು ಕೂಡ ಹಳೆಯದೇ ಆಗಿದ್ದರೂ ಈ ಅಧಿವೇಶನದ ಸಂದರ್ಭದಲ್ಲಿ ಹೊಸದಾಗಿ ಮೊಳಗುತ್ತಿದೆ.

- ಈ ಭಾಗದ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳು ವಿಫಲ

- ಕೃಷ್ಣೆ, ಮಹದಾಯಿ ಯೋಜನೆಗಳಿಗೆ ಇಲ್ಲ ಸೂಕ್ತ ಕಾಯಕಲ್ಪ, ಔದ್ಯಮಿಕ ಪ್ರಗತಿಯೂ ಇಲ್ಲ

- ರಾಜಕಾರಣಿಗಳಲ್ಲಿ ಸಮಸ್ಯೆಗಳನ್ನು ನೀಗಿಸಿಯೇ ತೀರುತ್ತೇವೆ ಎಂಬ ಇಚ್ಛಾಶಕ್ತಿ ಕೊರತೆ

- ರಾಜಕಾರಣಿಗಳ ಧೋರಣೆ ಬಗ್ಗೆ ಉ. ಕರ್ನಾಟಕದ ಸಂಘ, ಸಂಸ್ಥೆಗಳು, ಜನರಿಗೆ ಬೇಸರ

- ಹೀಗಾಗಿ ಈ ಸಲವೂ ಹತ್ತಾರು ಸಂಘಟನೆಗಳಿಂದ ಬೆಳಗಾವಿ ಸೌಧದ ಎದುರು ಪ್ರತಿಭಟನೆ