Asianet Suvarna News Asianet Suvarna News

ಮಂತ್ರಿಗಿರಿಗೆ ಕಲ್ಯಾಣ ಕರ್ನಾಟಕ ಶಾಸಕರ ಪಟ್ಟು

ಹೈದರಾಬಾದ್ ಕರ್ನಾಟಕಕ್ಕೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ. ಇದು ಮುಖ್ಯಮಂತ್ರಿ ಪಾಲಿಗೆ ಬಿಸಿ ತುಪ್ಪವಾಗುವ ಸಾಧ್ಯತೆಯಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

MLAs from Hyderabad Karnataka demanding portfolios in BS Yediyurapa led BJP government
Author
Bengaluru, First Published Feb 4, 2020, 10:11 AM IST

ಬೆಂಗಳೂರು(ಫೆ.04): ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೂ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಆಡಳಿತಾರೂಢ ಬಿಜೆಪಿಯಲ್ಲಿ ಬಲವಾಗಿ ಕೇಳಿಬಂದಿದ್ದು, ಈ ಸಂಬಂಧ ಒತ್ತಾಯಿಸಲು ಸೋಮವಾರ ಆ ಭಾಗದ ಶಾಸಕರು ಸಭೆ ಸೇರಿ ಚರ್ಚೆ ನಡೆಸಿದರು.

ಶಾಸಕರ ಭವನದಲ್ಲಿ ಕಲಬುರಗಿ ಜಿಲ್ಲೆ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ್‌ ಅವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಯಾದಗಿರಿ ಜಿಲ್ಲೆ ಸುರಪುರದ ಶಾಸಕ ರಾಜುಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಅಲ್ಲದೆ, ಇತರ ಭಾಗಗಳ ಕೆಲವು ಶಾಸಕರೂ ಉಪಸ್ಥಿತರಿದ್ದರು.

ಸಭೆಯ ನಂತರ ಮಾತನಾಡಿದ ರಾಜುಗೌಡ, ಈ ಹಿಂದೆಯೂ ಹೈದರಾಬಾದ್‌ ಕರ್ನಾಟಕಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಕೇಳಿದ್ದೇವೆ. ಈಗಲೂ ಅದೇ ಬೇಡಿಕೆ ಇಟ್ಟುಕೊಂಡು ಶಾಸಕರೆಲ್ಲಾ ಸಭೆ ನಡೆಸಿದ್ದೇವೆ. ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ಹದಿನೇಳು ಜನರಲ್ಲಿ ಎಲ್ಲರನ್ನೂ ಸಚಿವರನ್ನಾಗಿ ಮಾಡಿದರೆ ನಮಗೇನೂ ಅಭ್ಯಂತರ ಇಲ್ಲ. ಆದರೆ 10:3 ಅನುಪಾತದಲ್ಲಿ ಸಚಿವ ಸಂಪುಟ ವಿಸ್ತರಣೆ ಎನ್ನುವ ಮಾತಿಗೆ ನಮಗೂ ಒಂದು ಅವಕಾಶ ಕೊಡಲಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದು ರಾಜುಗೌಡ ಹೇಳಿದರು.

ಮಂತ್ರಿಗಿರಿ ಬಗ್ಗೆ ಮಾತಾಡಲ್ಲ: ವಿಶ್ವನಾಥ್‌

ಬಿಜೆಪಿ ಬಾವುಟ ಹಿಡಿದು ಮೋದಿ ಪರ ಕೆಲಸ ಮಾಡುತ್ತೇವೆ. ಈ ಹಿಂದೆಯೇ ನಾವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮ್ಮ ಭಾಗಕ್ಕೆ ಸಚಿವ ಸ್ಥಾನ ನೀಡಲು ಮನವಿ ಸಲ್ಲಿಸಿದ್ದೇವೆ. ಇವತ್ತು ಕೆಲವು ಶಾಸಕರು ಸಭೆ ಸೇರಿದ್ದೇವೆ. ಮಂಗಳವಾರವೂ ಕೆಲವರು ಬರುತ್ತಾರೆ. ಎಲ್ಲ ಶಾಸಕರು ಸೇರಿ ಚರ್ಚೆ ಮಾಡುತ್ತೇವೆ. ನಮ್ಮ ಭಾಗಕ್ಕೆ ಸಚಿವ ಸ್ಥಾನ ನೀಡುವಂತೆ ಸಿಎಂ ಮತ್ತು ರಾಜ್ಯಾಧ್ಯಕ್ಷರಿಗೆ ಮತ್ತೆ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

ಸಂವಿಧಾನದ 371ಜೆ ಅಡಿಯಲ್ಲಿ ಕೂಡಾ ರಾಜಕೀಯ ಪ್ರಾತಿನಿಧ್ಯ ಕೊಡಬೇಕೆಂದಿದೆ. ಗೆದ್ದವರಿಗೆ ಸಚಿವ ಸ್ಥಾನ ಕೊಡಿ. ಜಾತಿವಾರು ಹಾಗೂ ಪ್ರಾಂತ್ಯವಾರು ಕೆಲವರಿಗೆ ಹೆಚ್ಚು ಕೊಡಲಾಗಿದೆ. ಕರಾವಳಿ, ಮೈಸೂರು, ಕಲ್ಯಾಣ ಕರ್ನಾಟಕಕ್ಕೆ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲಾಯಿಸಿದ ಮಾತ್ರಕ್ಕೆ ನಮ್ಮ ಹಣೆಬರಹ ಬದಲಾಗುವುದಿಲ್ಲ. ಇದು ಕೇವಲ ರಾಜುಗೌಡನ ಧ್ವನಿ ಅಲ್ಲ, ನಮ್ಮ ಎಲ್ಲಾ ಶಾಸಕರ ಧ್ವನಿ ಎಂದು ಆಗ್ರಹಿಸಿದರು.

ಸಂಪುಟ ಸರ್ಕಸ್: ಈಗ ಯೋಗೇಶ್ವರ್‌ ಕಗ್ಗಂಟು!

ನಾವು ಜನರಿಂದಲೂ ಬೈಸಿಕೊಳ್ಳಬೇಕು. ಇತ್ತ ಮುಖ್ಯಮಂತ್ರಿಗಳಿಂದಲೂ ಏನೂ ಸಿಗುತ್ತಿಲ್ಲ. ನಾವು ಏನೇ ಮಾಡಿದರೂ ಪಕ್ಷದ ಚೌಕಟ್ಟಿನಲ್ಲೇ ಮಾಡುತ್ತೇವೆ. ನಾವು ಯಡಿಯೂರಪ್ಪ ಅವರನ್ನು ಕೇಳದೆ ಇನ್ಯಾರನ್ನು ಕೇಳಬೇಕು? ಹೈದರಾಬಾದ್‌ ಕರ್ನಾಟಕದ ಯಾರಿಗೆ ಸಚಿವ ಸ್ಥಾನ ನೀಡಿದರೂ ಉಳಿದವರು ನಾವು ವಿರೋಧಿಸುವುದಿಲ್ಲ ಎಂದು ರಾಜುಗೌಡ ಹೇಳಿದರು.

ಪ್ರಾದೇಶಿಕ ಅಸಮತೋಲನ ಸರಿಪಡಿಸಿ: ರೇಣುಕಾಚಾರ್ಯ

ಸಚಿವ ಸಂಪುಟ ಕೇವಲ ಒಂದೇ ಪ್ರದೇಶಕ್ಕೆ ಮಾತ್ರ ಸಿಮೀತವಾಗಬಾರದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಮಾತ್ರವಲ್ಲ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಶಾಸಕರಿಗೂ ಅನ್ಯಾಯವಾಗಿದೆ. ಸಚಿವ ಸಂಪುಟ ಕೇವಲ ಒಂದು ಜಿಲ್ಲೆಗೆ ಅಥವಾ ಪ್ರದೇಶಕ್ಕೆ ಸೀಮಿತವಾಗಬಾರದು. ಕೂಡಲೇ ಈ ಅಸಮತೋಲನ ಸರಿಪಡಿಸಿ ಪ್ರಾದೇಶಿಕವಾರು ಅಧಿಕಾರ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೂ ಮಾನ್ಯತೆ ಸಿಗಬೇಕು ಎಂದು ಆ ಭಾಗದ ಶಾಸಕರ ಒತ್ತಾಯವು ನ್ಯಾಯಯುತವಾಗಿದೆ. ದಾವಣಗೆರೆ ವಾಣಿಜ್ಯ ನಗರವಾಗಿದ್ದು, ಆ ಜಿಲ್ಲೆಯನ್ನೂ ಕಡೆಗಣಿಸಬಾರದು. ಈ ಅಸಮತೋಲನ ಸರಿಪಡಿಸುವಂತೆ ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕರಿಗೆ ಮನವಿ ಮಾಡಲಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೇಣುಕಾಚಾರ್ಯ, ನಾವು ಮುಖ್ಯಮಂತ್ರಿಗಳ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿಲ್ಲ. ಆದರೆ ಅಧಿಕಾರ ಹಂಚಿಕೆಯಲ್ಲಿನ ತಾರತಮ್ಯ ನಿವಾರಣೆಗೆ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲು ಶಾಸಕರು ಸಭೆ ಸೇರಿದ್ದೆವು ಎಂದು ಸ್ಪಷ್ಟಪಡಿಸಿದರು.
 

Follow Us:
Download App:
  • android
  • ios