ಬೆಂಗಳೂರು(ಫೆ.04): ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬುದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಅದೆಲ್ಲ ಮುಗಿದ ಅಧ್ಯಾಯವಾಗಿದೆ. ನಮಗೆ ಅಧಿಕಾರ ಕೊಡುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಚಿವ ವಿ.ಸೋಮಣ್ಣ ಅವರೊಡನೆ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ಸಚಿವ ಸ್ಥಾನ ಕೊಡುವುದು, ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟವಿಚಾರವಾಗಿದೆ. ನಾನು ಮಂತ್ರಿ ಸ್ಥಾನ ಕೊಡಿ ಅಂತ ಮುಖ್ಯಮಂತ್ರಿಗಳಿಗೆ ಕೇಳಿಲ್ಲ. ಮುಂದೆಯೂ ಆ ಬಗ್ಗೆ ಮಾತನಾಡುವುದಿಲ್ಲ. ಮುಖ್ಯಮಂತ್ರಿಗಳಿಗೆ ಎಲ್ಲವೂ ಗೊತ್ತಿದೆ. ಯಾರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

ಸಂಪುಟ ವಿಸ್ತರಣೆ: ಹಳ್ಳಿಹಕ್ಕಿಗೆ ಮದ್ದು ಕೊಟ್ಟ BSY, ಮೀಟಿಂಗ್ ಸಕ್ಸಸ್

ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬುದರ ಕುರಿತು ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಅದಕ್ಕೆ ಕ್ರಿಯೆ-ಪ್ರತಿಕ್ರಿಯೆ ಬಂದಿದೆ. ಮುಂದಿನ ದಿನಗಳಲ್ಲಿ ನಮಗೆ ಅವಕಾಶ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಹಳ್ಳಿ ಹಕ್ಕಿಗೆ ಒಳ್ಳೆ ದಿನ-ಸೋಮಣ್ಣ:

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಅವರು, ವಿಶ್ವನಾಥ್‌ ಅವರು ಹಿರಿಯ ರಾಜಕಾರಣಿ. ಅವರಿಗೆ ಸಚಿವ ಸ್ಥಾನ ಎಂಬುದು ಮುಖ್ಯವೂ ಅಲ್ಲ ಗೌಣವೂ ಅಲ್ಲ ಎಂದರು. ಮುಂದಿನ ದಿನಗಳಲ್ಲಿ ಹಳ್ಳಿ ಹಕ್ಕಿ (ವಿಶ್ವನಾಥ್‌)ಗೂ ಒಳ್ಳೆಯ ದಿನಗಳು ಬರಲಿವೆ. ಸ್ವತಂತ್ರವಾಗಿ ಹಾರಾಡುವ ದಿನಗಳು ದೂರವಿಲ್ಲ ಎಂದು ಹೇಳಿದರು.