ಬೆಂಗಳೂರು[ಫೆ.04]: ಸಚಿವ ಸಂಪುಟ ವಿಸ್ತರಣೆಗೆ ಗುರುವಾರದ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವ ವಿಷಯ ಕಗ್ಗಂಟಾಗಿ ಪರಿಣಮಿಸತೊಡಗಿದೆ.

ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ ಗೆದ್ದ ಶಾಸಕರಿಗೆ ಕ್ಷೇತ್ರದ ಜನರು ಉಗಿಯುತ್ತಾರೆ. ಬೇಕಾದರೆ ಯೋಗೇಶ್ವರ್‌ಗೆ ರಾಜ್ಯಸಭೆ ಅಥವಾ ವಿಧಾನಪರಿಷತ್‌ ಸದಸ್ಯತ್ವ ನೀಡಲಿ, ನಮ್ಮದೇನೂ ವಿರೋಧವಿಲ್ಲ ಎಂದು ಬಿಜೆಪಿ ಶಾಸಕ ರಾಜುಗೌಡ ನೇರವಾಗಿ ಹೇಳುವ ಮೂಲಕ ಹಲವು ಶಾಸಕರ ಅಭಿಪ್ರಾಯ ಹೊರಹಾಕಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೂಡ ಇದನ್ನು ಬೆಂಬಲಿಸಿದ್ದಾರೆ.

ಆದರೆ, ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕೇವಲ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಥವಾ ಪಕ್ಷದ ರಾಜ್ಯ ನಾಯಕರ ಅಭಿಪ್ರಾಯವಲ್ಲ. ಬದಲಿಗೆ ಪಕ್ಷದ ವರಿಷ್ಠರ ಒತ್ತಾಸೆಯೂ ಇದೆ ಎಂದು ತಿಳಿದುಬಂದಿದೆ.

17 ಶಾಸಕರನ್ನು ಬಿಜೆಪಿ ಹಣ ಕೊಟ್ಟು ಖರೀದಿಸಿರುವುದಕ್ಕೆ ಸಾಕ್ಷಿ ಕೊಟ್ಟ ಸಿದ್ದರಾಮಯ್ಯ

ಆರಂಭದಲ್ಲಿ ಬಿಜೆಪಿ ಸರ್ಕಾರ ರಚನೆಗೂ ಮುನ್ನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಪಕ್ಷಕ್ಕೆ ಕರೆತರುವ ಪ್ರಕ್ರಿಯೆ ಆರಂಭಿಸಿದವರಲ್ಲಿ ಯೋಗೇಶ್ವರ್‌ ಕೂಡ ಪ್ರಮುಖರು. ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಗೊಂಡಿದ್ದ ಶಾಸಕರನ್ನು ಮನವೊಲಿಸಿ ಬಿಜೆಪಿಯತ್ತ ಸೆಳೆಯುವುದರಲ್ಲಿ ಯೋಗೇಶ್ವರ್‌ ಪಾತ್ರವೂ ಮುಖ್ಯವಾದದ್ದು ಎಂಬುದನ್ನು ಪರಿಗಣಿಸಿಯೇ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಿಂದೆಯೇ ಭರವಸೆ ನೀಡಿದ್ದರು ಎನ್ನಲಾಗಿದೆ.

ಇದೀಗ ಅರ್ಹ ಶಾಸಕರ ಜೊತೆ ಯೋಗೇಶ್ವರ್‌ ಅವರನ್ನೂ ಸಚಿವರನ್ನಾಗಿ ಮಾಡುವ ಬಗ್ಗೆ ಯಡಿಯೂರಪ್ಪ ಅವರು ಕಾರ್ಯತತ್ಪರರಾದ ಬೆನ್ನಲ್ಲೇ ಒಕ್ಕಲಿಗ ಸಮುದಾಯದ ಕೆಲವು ಸಚಿವರು ತೆರೆಮರೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅಂತಿಮವಾಗಿ ಯೋಗೇಶ್ವರ್‌ ಅವರು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಾವು ಸರ್ಕಾರ ರಚನೆಗೆ ಮಾಡಿದ ಪ್ರಯತ್ನ ಮತ್ತು ಮುಂದೆ ಸಚಿವರಾದ ನಂತರ ರಾಮನಗರ, ಮಂಡ್ಯ, ಹಾಸನ ಮತ್ತಿತರ ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಬಲಗೊಳಿಸುವ ಬಗ್ಗೆ ತಮ್ಮ ಯೋಜನೆಯನ್ನು ಮುಂದಿಟ್ಟರು. ಇದಕ್ಕೆ ವರಿಷ್ಠರು ಸಮ್ಮತಿ ಸೂಚಿಸಿ ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ಸಿನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌ ಮತ್ತು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ರಾಜಕೀಯ ಹೋರಾಟ ನಡೆಸಲು ಯೋಗೇಶ್ವರ್‌ ಸಮರ್ಥರಾಗಬಹುದು ಎಂಬ ನಿರೀಕ್ಷೆಯೂ ವರಿಷ್ಠರಲ್ಲಿದೆ. ಹೀಗಾಗಿಯೇ ಸಚಿವರನ್ನಾಗಿ ಮಾಡುವುದರ ಜೊತೆಗೆ ಪ್ರಮುಖ ಖಾತೆಗಳಲ್ಲಿ ಒಂದಾಗಿರುವ ಗೃಹ ಖಾತೆಯನ್ನು ನೀಡುವ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣೆಯಲ್ಲಿ ಸೋತಿರುವ ಯೋಗೇಶ್ವರ್‌ ಅವರನ್ನು ಸಚಿವರನ್ನಾಗಿ ಮಾಡುವುದಲ್ಲದೆ ಪ್ರಮುಖ ಖಾತೆ ನೀಡುವ ಸುಳಿವನ್ನು ಅರಿತುಕೊಂಡ ಒಕ್ಕಲಿಗ ಸಮುದಾಯದ ಕೆಲವು ಸಚಿವರು ವರಿಷ್ಠರ ಕೃಪೆಯಿಂದ ತಮಗಿಂತ ಪ್ರಬಲವಾಗಿ ಬೆಳೆಯಬಹುದು ಎಂಬ ಕಾರಣದಿಂದ ಪಕ್ಷದ ಕೆಲವು ಶಾಸಕರ ಮೂಲಕ ವಿರೋಧ ವ್ಯಕ್ತವಾಗುವಂತೆ ಮಾಡುತ್ತಿದ್ದಾರೆ ಎಂಬ ಆರೋಪ ಯೋಗೇಶ್ವರ್‌ ಆಪ್ತರಿಂದ ಕೇಳಿಬಂದಿದೆ.

ಮೈತ್ರಿ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಯೋಗೇಶ್ವರ್‌ಗಿಲ್ಲ ಟಿಕೆಟ್!

ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರ ವಿರೋಧದ ಹಿನ್ನೆಲೆಯಲ್ಲಿ ಯೋಗೇಶ್ವರ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿಲುವಿನಿಂದ ಹಿಂದೆ ಸರಿಯುತ್ತಾರಾ ಅಥವಾ ಏನಾದರೂ ಆಗಲಿ ಯೋಗೇಶ್ವರ್‌ ಅವರು ಸಂಪುಟದಲ್ಲಿ ಇರಲಿ ಎಂಬ ನಿರ್ಧಾರ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು.

ಬಿಜೆಪಿ ಒಲವು ಯಾಕೆ?

- ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿದವರನ್ನು ಬಿಜೆಪಿಗೆ ಸೆಳೆಯುವಲ್ಲಿ ಯೋಗೇಶ್ವರ್‌ ಪಾತ್ರ ಪ್ರಮುಖ

- ಒಕ್ಕಲಿಗರ ಪ್ರಾಬಲ್ಯ ಇರುವ ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಪಕ್ಷವನ್ನು ಬಲಗೊಳಿಸುವ ಬಗ್ಗೆ ಯೋಗೇಶ್ವರ್‌ ಭರವಸೆ

- ಈ ಪ್ರದೇಶದ ಪ್ರಭಾವಿಗಳಾದ ಡಿಕೆಶಿ, ಎಚ್‌ಡಿಕೆ ಅವರನ್ನು ಎದುರಿಸಲು ಯೋಗೇಶ್ವರ್‌ರಿಂದ ಸಾಧ್ಯ ಎಂದು ವರಿಷ್ಠರ ಲೆಕ್ಕಾಚಾರ

- ಹೀಗಾಗಿಯೇ, ಚುನಾವಣೆಯಲ್ಲಿ ಸೋತಿದ್ದರೂ ಸಚಿವ ಸ್ಥಾನ ನೀಡಿ ಅತಿ ಪ್ರಮುಖವಾದ ಗೃಹ ಖಾತೆಯನ್ನೂ ನೀಡಲು ಚಿಂತನೆ

ಶಾಸಕರ ವಿರೋಧವೇಕೆ?

- ಯೋಗೇಶ್ವರ್‌ ಚುನಾವಣೆ ಸೋತಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡುವುದೇಕೆ? ಹಾಗಿದ್ದರೆ, ಎಂಟಿಬಿ, ವಿಶ್ವನಾಥ್‌ಗೂ ಕೊಡಲಿ

- ಸೋತವರಿಗೆ ಕೊಟ್ಟರೆ ಗೆದ್ದ ಶಾಸಕರನ್ನು ‘ನೀವು ಗೆದ್ದು ಏನು ಪ್ರಯೋಜನೆ’ ಎಂದು ಅವರ ಕ್ಷೇತ್ರದ ಜನರು ಉಗಿಯುತ್ತಾರೆ

- ಹಿಂದಿನ ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ 17 ಜನರ ಬಗ್ಗೆ ನಮಗೆ ಗೌರವವಿದೆ

- ಅವರಲ್ಲಿ ಯಾರು ಸಚಿವರಾದರೂ ನಮಗೆ ಬೇಸರವಿಲ್ಲ: ಬಿಜೆಪಿ ಶಾಸಕರಾದ ರಾಜುಗೌಡ, ರೇಣುಕಾಚಾರ್ಯ ಅವರ ವಾದ

ಗೆಲವು ನಮ್ಮದೇ, ಮಂತ್ರಿಯೂ ನಾನೇ: ವಿಶ್ವನಾಥ್‌