ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 15 ದಿನ ಕಳೆದಿಲ್ಲ, ಆಗಲೇ ಇವರಿಗೆ ಅಧಿಕಾರದ ಮದ ಏರಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಶಾಸಕ ಎಸ್‌.ಆರ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದ್ದಾರೆ.

ಪೀಣ್ಯ ದಾಸರಹಳ್ಳಿ (ಮೇ.29): ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 15 ದಿನ ಕಳೆದಿಲ್ಲ, ಆಗಲೇ ಇವರಿಗೆ ಅಧಿಕಾರದ ಮದ ಏರಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಶಾಸಕ ಎಸ್‌.ಆರ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹುಲ್ಲೇಗೌಡನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನ ಮಹೋತ್ಸವದಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್‌ ಸರ್ಕಾರ ಗೋ ಹತ್ಯೆ ನಿಷೇಧ, ಮತಾಂತರ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್‌ ಪಕ್ಷದವರು ಸಂವಿಧಾನವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. 

ಇನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 15 ದಿನಗಳು ಮಾತ್ರ ಆಗಿದೆ. ಈಗಾಗಲೇ ಅವರಿಗೆ ಅಧಿಕಾರದ ಮದ ಏರಿದೆ ಎಂದು ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು. ನೂರು ದೇವಾಲಯಗಳನ್ನು ಕಟ್ಟುವ ಬದಲು ಹಳೆಯ ದೇವಾಲಯ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ ದೇವಾಲಯದ ಜೀರ್ಣೋದ್ಧಾರಕ್ಕೆ ಸಮಿತಿ, ದಾನಿಗಳು ಹಾಗೂ ಸ್ಥಳೀಯರ ಸಹಕಾರ ಶ್ಲಾಘನೀಯ. ದೇವಸ್ಥಾನಗಳು ಶ್ರದ್ಧಾ ಭಕ್ತಿಯ ಪ್ರತೀಕವಾಗಿದ್ದು, ಎಲ್ಲ ಕಡೆಯೂ ದೇವರಿದ್ದಾನೆ. ಆದರೆ, ಅದರ ಅನುಭವ ಪಡೆಯುವ ಕಾರ್ಯ ನಮ್ಮಿಂದಾಗಬೇಕು. ಹಾಲು ಹಾಗೂ ಬೆಂಕಿ ನಡುವೆ ಪಾತ್ರೆಯಿದ್ದಂತೆ ನಮ್ಮ ಹಾಗೂ ದೇವರ ನಡುವೆ ಭಕ್ತಿಯಿದೆ. ಇಂತಹ ಭಕ್ತಿ ಸ್ವರೂಪದ ದೇವಾಲಯಗಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲ ಗ್ರಾಮಸ್ಥರ ಮೇಲಿದೆ ಎಂದರು.

ರಾಜ್ಯ ಸರ್ಕಾರದ ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಪ್ರಕಟ: ಯಾವ ಸಚಿವರಿಗೆ ಯಾವ ಖಾತೆ ಗೊತ್ತಾ?

ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೊಡ್ಮನೆ ವೆಂಕಟೇಶ್‌ ಮಾತನಾಡಿ, ಆಂಜನೇಯ ದೇವಸ್ಥಾನ ಪುರಾತನವಾದದ್ದು. ನಕ್ಷೆಯಿಂದ ಕಕ್ಷೆಗೆ ರಾಕೆಟ್‌ ಉಡಾವಣೆ ಸಂದರ್ಭದಲ್ಲಿಯೂ ವಿಜ್ಞಾನಿಗಳು ನಮ್ಮ ಶ್ರಮವನ್ನು ಸಾರ್ಥಕಗೊಳಿಸು ದೇವರೆ ಎಂದು ಪ್ರಾರ್ಥಿಸುತ್ತಾರೆ ಎಂದು ತಿಳಿಸಿದರು. ಹಿರಿಯ ನಾಗರಿಕರು, ದಾನಿಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮತ್ತು ಖಜಾಂಚಿ ವಿಜಯಕುಮಾರ್‌, ಸದಸ್ಯರಾದ ರಾಮಯ್ಯ, ಮುಕುಂದಪ್ಪ, ಜನಾರ್ದನ್‌, ಸತ್ಯವತಿ, ಮುನಿರಾಜು, ರಾಮಣ್ಣ ಅರ್ಚಕರಾದ ನಾಗರಾಜು ಶರ್ಮ, ರಂಗನಾಥ್‌, ಊರಿನ ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು.

ಜನರ ಋುಣ ಎಂದಿಗೂ ಮರೆಯಲಾರೆ: ನಾಲ್ಕನೇ ಬಾರಿ ಶಾಸಕನಾಗಿ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದ ಬೊಮ್ಮನಹಳ್ಳಿ ಮಹಾ ಜನತೆಯ ಋುಣವನ್ನು ಎಂದಿಗೂ ಮರೆಯಲಾರೆ ಎಂದು ಶಾಸಕ ಎಂ.ಸತೀಶ್‌ ರೆಡ್ಡಿ ಹೇಳಿದರು. ಭಾನುವಾರ ಎಚ್‌.ಎಸ್‌.ಆರ್‌. ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ‘ಕೃತಜ್ಞತಾ ಸಮಾರಂಭ’ದಲ್ಲಿ ಮಾತನಾಡಿದ ಶಾಸಕರು, ಮಳೆಗಾಲ ಬಂದರೆ ಸಾಕು ಎಚ್‌.ಎಸ್‌.ಆರ್‌. ಬಡಾವಣೆಯಿಂದ ಸಾರಕ್ಕಿ ಕೆರೆಯ ವರೆಗೆ ಸುಮಾರು 48 ಕಡೆಗಳಲ್ಲಿ ನೆರೆ ಸಂಭವಿಸುತ್ತಿತ್ತು. ಇದೀಗ ಬೊಮ್ಮನಹಳ್ಳಿ ಪ್ರದೇಶ ನೆರೆಯಿಂದ ಮುಕ್ತವಾಗಿದೆ. 

ಐದು ವರ್ಷಗಳ ಸಮಯವನ್ನು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೀಸಲಿಡುತ್ತೇನೆ ಎಂದು ಜನತೆಗೆ ಭರವಸೆ ನೀಡಿದರು. ಸೋತ ಕಾಂಗ್ರೆಸ್‌ ಅಭ್ಯರ್ಥಿ ಅಭಿವೃದ್ಧಿಗೆ ಅಡ್ಡಿಪಡಿಸುವ ಹತಾಶೆಯ ಮಾತುಗಳನ್ನಾಡಿದ್ದಾರೆ, ಇದಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು. ಶಾಸಕನಾಗಿ ಶಾಸನ ಸಭೆಯಲ್ಲಿ ಕ್ಷೇತ್ರ ಮತ್ತು ರಾಜ್ಯದ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಾಗೆಯೇ ರಾಜ್ಯದ ಜನರಿಗೆ ‘ಗ್ಯಾರೆಂಟಿ’ ಆಶ್ವಾಸನೆ ನೀಡಿರುವ ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆಯಬೇಕೆಂದು ಒತ್ತಾಯಿಸಿದರು.

ಮೆಟ್ರೋ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ: ಹೀಗಾದರೆ ಕಾಮಗಾರಿ ನಿಗದಿತ ಅವಧಿಗೆ ಪೂರ್ಣ ಕಷ್ಟ

ಇದೇ ವೇಳೆ ಮಾತನಾಡಿದ ಶಾಸಕ ಆರ್‌.ಅಶೋಕ್‌, ಕಾಂಗ್ರೆಸ್‌ ಗ್ಯಾರಂಟಿಯೇನೋ ನೀಡಿದೆ. ಆದರೆ ಇದೀಗ ಷರತ್ತುಗಳನ್ನು ಹಾಕಲು ಮುಂದಾಗಿದೆ. ಹೆಣ್ಣುಮಕ್ಕಳೇ, ದಯಮಾಡಿ ಯಾರೂ ಬಸ್‌ನಲ್ಲಿ ಪ್ರಯಾಣಿಸಲು ಟಿಕೆಟ್‌ ಪಡೆಯಬೇಡಿ. ವಿದ್ಯುತ್‌ ಬಿಲ್‌ ಕಟ್ಟಬೇಡಿ. ಅವರೇ ಆಡಿರುವ ಮಾತುಗಳ ಆಡಿಯೋವನ್ನು ತೋರಿಸಿ ಎಂದು ಸಲಹೆ ನೀಡಿದರು. ಗೆಲುವಿಗೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.