ಮೆಟ್ರೋ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ: ಹೀಗಾದರೆ ಕಾಮಗಾರಿ ನಿಗದಿತ ಅವಧಿಗೆ ಪೂರ್ಣ ಕಷ್ಟ
ಕೋವಿಡ್ ಸಂಕಷ್ಟದ ಕಳೆದು ಎರಡು ವರ್ಷವಾದರೂ ಬಿಎಂಆರ್‌ಸಿಎಲ್ ಮೆಟ್ರೋ ಕಾಮಗಾರಿಗೆ ಈಗಲೂ ಕಾರ್ಮಿಕರ ಅಭಾವ ಎದುರಿಸುತ್ತಿದೆ. ಪ್ರಯಾಣ ವೆಚ್ಚ ಕೊಟ್ಟರೂ ಉತ್ತರ ಭಾರತದ ಕಾರ್ಮಿಕರು ಈ ಕಡೆ ಬರುತ್ತಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಾರೆ.
ಬೆಂಗಳೂರು (ಮೇ.29): ಕೋವಿಡ್ ಸಂಕಷ್ಟದ ಕಳೆದು ಎರಡು ವರ್ಷವಾದರೂ ಬಿಎಂಆರ್‌ಸಿಎಲ್ ಮೆಟ್ರೋ ಕಾಮಗಾರಿಗೆ ಈಗಲೂ ಕಾರ್ಮಿಕರ ಅಭಾವ ಎದುರಿಸುತ್ತಿದೆ. ಪ್ರಯಾಣ ವೆಚ್ಚ ಕೊಟ್ಟರೂ ಉತ್ತರ ಭಾರತದ ಕಾರ್ಮಿಕರು ಈ ಕಡೆ ಬರುತ್ತಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಾರೆ. ಹೌದು. ‘ನಮ್ಮ ಮೆಟ್ರೋ’ ಕಟ್ಟುವವರಿಲ್ಲದೆ ಕುಂಠಿತವಾಗುತ್ತಿದೆ! ವರ್ಷಾಂತ್ಯಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸುವ ಗುರಿ ಹೊಂದಿರುವ ಹಳದಿ ಮಾರ್ಗವಾದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗ ಸೇರಿದಂತೆ 2025ಕ್ಕೆ ಪೂರ್ಣಗೊಳಿಸುವ ಉದ್ದೇಶದಿಂದ ನಡೆದಿರುವ ರೇಷ್ಮೆ ಕೇಂದ್ರದಿಂದ- ಕೆ.ಆರ್.ಪುರ, ಕೆ.ಆರ್.ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಕಾರ್ಮಿಕರ ಕೊರತೆ ಎದುರಿಸುತ್ತಿದೆ. ನಿಗದಿತ ವೇಳೆಗೆ ಕಾರ್ಮಿಕರು ಲಭ್ಯವಾಗದಿದ್ದರೆ ಯೋಜನೆ ವಿಳಂಬವಾಗಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ.
ನೂರಾರು ಕಾರ್ಮಿಕರ ಕೊರತೆ: ನಗರದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಸುಮಾರು 300 ಬಡಗಿಗಳು, 400 ಬಾರ್ ಬೆಂಡರ್, 200 ಮೇಸ್ತ್ರಿಗಳ ಅಭಾವ ಎದುರಾಗಿದೆ. ಈ ಕುಶಲ ಕಾರ್ಮಿಕರು ಸಿಗದ ಕಾರಣ ಗುತ್ತಿಗೆದಾರರ ಕಂಪನಿ ಎನ್‌ಸಿಸಿ ಸೇರಿ ಇತರೆ ಕಂಪನಿಗಳಿಗೆ ಸಮಸ್ಯೆಯಾಗಿದೆ. ಯು-ಗರ್ಡರ್, ಪಿಯರ್ ಕ್ಯಾಪ್‌ಗಳು ಅಥವಾ ಪೈಲ್ ಕ್ಯಾಪ್, ಸ್ಟೀಲ್ ಚೌಕಟ್ಟನ್ನು ನಿರ್ಮಿಸಲು ಕಾರ್ಮಿಕರೆ ಇಲ್ಲದ ಪರಿಸ್ಥಿತಿಯಿದೆ.
ಚಾಲಕರಹಿತ ‘ನಮ್ಮ ಮೆಟ್ರೋ’ ನಿರ್ವಹಣೆಗೆ ಬೈಯಪ್ಪನಹಳ್ಳಿ ಡಿಪೋ ಬಳಿ ಹೊಸ ಕೇಂದ್ರ ನಿರ್ಮಾಣ
ಪ್ರಯಾಣ ವೆಚ್ಚ ಕೊಟ್ಟರೂ ಬರುತ್ತಿಲ್ಲ: ಕೋವಿಡ್‌ಗೆ ಮೊದಲು ಕಾರ್ಮಿಕರು ತಾವಾಗೇ ಕೆಲಸಕ್ಕೆ ಬರುತ್ತಿದ್ದರು. ಆದರೆ, ಇದೀಗ ಉತ್ತರ ಭಾರತದ ಕೆಲವೆಡೆ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ಅಲ್ಲಿಗೆ ಹೋಗುತ್ತಿದ್ದಾರೆ. ಕಾರ್ಮಿಕರಿಗೆ ಹೋಗಿ ಬರುವ ರೈಲು ಪ್ರಯಾಣದ ಖರ್ಚನ್ನು ಗುತ್ತಿಗೆದಾರರು ನೀಡಲು ಸಿದ್ಧವಿದ್ದರೂ ಈ ಕಡೆ ಕಾರ್ಮಿಕರು ಬರುತ್ತಿಲ್ಲ ಎನ್ನಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಜಾರ್ಖಂಡ್, ಓರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಕಾರ್ಮಿಕರು ಬಂದರೆ ಕಾಮಗಾರಿ ಸುಲಲಿತವಾಗಲಿದೆ. ಇಲ್ಲದಿದ್ದರೆ ಕಾಮಗಾರಿಗಳು ಕುಂಠಿತವಾಗುವ ಎಲ್ಲ ಲಕ್ಷಣಗಳಿವೆ.
ಚಲ್ಲಘಟ್ಟಡಿಪೋ ಸಮಸ್ಯೆ ಇತ್ಯರ್ಥ: ಚಲ್ಲಘಟ್ಟ ಡಿಪೋ ನಿರ್ಮಾಣ ಸಂಬಂಧ ಬಿಎಂಆರ್‌ಸಿಎಲ್ ಎದುರಿಸುತ್ತಿದ್ದ ಎರಡು ಭೂಸ್ವಾದೀನ ಪ್ರಕರಣಗಳ ಸಮಸ್ಯೆ ಇತ್ಯರ್ಥವಾಗಿದೆ. ಈ ಡಿಪೋ ನಗರದ ಹೊರವಲಯ ಸಂಪರ್ಕಿಸಲಿರುವ ಮೆಟ್ರೋ ಮಾರ್ಗದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸದ್ಯ ನೇರಳೆ ಮಾರ್ಗದ ರೈಲುಗಳು ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಕೊನೆಗೊಳ್ಳುತ್ತಿವೆ. ಚಲ್ಲಘಟ್ಟಡಿಪೋ ಪೂರ್ಣಗೊಂಡ ಬಳಿಕ ಬಹುತೇಕ ರೈಲುಗಳು ಇಲ್ಲಿಗೆ ಸ್ಥಳಾಂತರವಾಗಲಿವೆ. ನಗರದ ಹೊರ ವರ್ತುಲ ರಸ್ತೆ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗಗಳಿಗೆ ಇಲ್ಲಿಂದಲೇ ರೈಲುಗಳು ಹೊರಡಲಿವೆ. ಪ್ರಸ್ತುತ ಇಲ್ಲಿ .499.41 ಕೋಟಿ ಡಿಪೋ ಹಾಗೂ ವರ್ಕ್ಶಾಪ್ ನಿರ್ಮಾಣ ಕಾಮಗಾರಿ ನಡೆದಿದೆ.
ನಮ್ಮ ಮೆಟ್ರೋಗೆ ಪ್ರಯಾಣಿಕರ ಸಂಖ್ಯೆ ಏರಿಕೆ: 6 ಕೋಟಿ ಹೆಚ್ಚು ಆದಾಯ
ಒಟ್ಟಾರೆ ಇಲ್ಲಿ 45 ಎಕರೆಯನ್ನು ಬಿಎಂಆರ್‌ಸಿಎಲ್ ಭೂಸ್ವಾದೀನ ಮಾಡಿದೆ. ಈಚೆಗೆ ನೈಋುತ್ಯ ರೈಲ್ವೇ ಇಲಾಖೆ ಒಡೆತನದ 1,612 ಚದರ ಮೀಟರ್ ಭೂಸ್ವಾದೀನ ಮಾಡಿಕೊಳ್ಳಲು ಬಿಎಂಆರ್‌ಸಿಲ್ ಮುಂದಾಗಿತ್ತು. ಆದರೆ, ರೈಲ್ವೇ ಇಲಾಖೆ ಈ ಪ್ರದೇಶಕ್ಕೆ ಹೊಂದಿಕೊಂಡಿರುವ 960 ಚ.ಮೀ. ಜಾಗವನ್ನೂ ತೆಗೆದುಕೊಳ್ಳಲು ಹೇಳಿತ್ತು. ಆರಂಭದಲ್ಲಿ ಇದಕ್ಕೆ ಸಂಸ್ಥೆ ಒಪ್ಪಿರಲಿಲ್ಲ. ಇದೀಗ ಹೆಚ್ಚುವರಿ ಸ್ಥಳವನ್ನೂ ಹಸ್ತಾಂತರ ಮಾಡಿಕೊಳ್ಳಲು ಒಪ್ಪಿದ ಹಿನ್ನೆಲೆಯಲ್ಲಿ ಈ ಸಮಸ್ಯೆ ಪರಿಹಾರವಾಗಿದೆ. ಇದರ ಜೊತೆಗೆ ಡಿಪೋ ಮಧ್ಯದಲ್ಲಿ ರೈತರೊಬ್ಬರು ಬಿಎಂಆರ್‌ಸಿಎಲ್‌ಗೆ ಭೂಮಿ ನೀಡುವ ಕುರಿತು ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದ ಇಲ್ಲಿ ಕಾಮಗಾರಿ ಮುಂದುವರಿಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.