ಹೆಬ್ಬಾರ್ ನಿಮ್ಮ ಫೋನ್ ಸ್ವಿಚ್ ಆಫ್ ಬರ್ತಿದೆ; ಟಿವಿ ನೋಡ್ತಿದ್ರೆ ಬಂದು ಮೈತ್ರಿ ಅಭ್ಯರ್ಥಿಗೆ ಮತ ಹಾಕಿ: ಬಿಜೆಪಿ ಮನವಿ
ಶಾಸಕ ಶಿವರಾಮ್ ಹೆಬ್ಬಾರ್ ಅವರ ಫೋನ್ ಸ್ವಿಚ್ಡ್ ಆಫ್ ಆಗಿದೆ. ಒಂದು ವೇಳೆ ನೀವು ಟಿವಿ ನೋಡುತ್ತಿದ್ದರೆ ಬಂದು ಮೈತ್ರಿ ಅಭ್ಯರ್ಥಿಗೆ ಮತಹಾಕಿ ಎಂದು ಬಿಜೆಪಿ ಮುಖಂಡರಿಂದ ಮನವಿ ಮಾಡಲಾಗಿದೆ.
ಬೆಂಗಳೂರು (ಫೆ.27): ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಈಗಾಗಲೇ 222 ಮತಗಳು ಚಲಾವಣೆಯಾಗಿದ್ದು, ಈಗ ಒಬ್ಬ ಶಾಸಕ ಶಿವರಾಮ್ ಹೆಬ್ಬಾರ್ ಮಾತ್ರ ಮತ ಚಲಾವಣೆ ಬಾಕಿಯಿದೆ. ಈಗ ಶಾಸಕ ಶಿವರಾಮ್ ಹೆಬ್ಬಾರ್ ಅವರ ಫೋನ್ ಸ್ವಿಚ್ಡ್ ಆಫ್ ಆಗಿದೆ. ಒಂದು ವೇಳೆ ನೀವು ಟಿವಿ ನೋಡುತ್ತಿದ್ದರೆ ಬಂದು ಮೈತ್ರಿ ಅಭ್ಯರ್ಥಿಗೆ ಮತಹಾಕಿ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಸಭಾ ಚುನಾವಣೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವರಾಮ್ ಹೆಬ್ಬಾರ್ ಅವರ ಫೋನ್ ನಂಬರ್ ಸ್ವಿಚ್ಡ್ ಆಫ್ ಬರ್ತಿದೆ. ನಾವು ಈಗಲೂ ಕರೆ ಮಾಡಿದ್ರು ಅವರ ಫೋನ್ ನಂಬರ್ ಸ್ವಿಚ್ ಆಫ್ ಅಂತಲೇ ಬರ್ತಿದೆ. ಒಂದು ವೇಳೆ ನೀವೇನಾದರೂ ಟಿವಿ ನೋಡುತ್ತಿದ್ದರೆ, ನಾನು ನಿಮಗೆ ಮನವಿ ಮಾಡಿಕೊಳ್ಳುತ್ತೇನೆ. ಕೂಡಲೇ ನೀವು ಬಂದು ಮೈತ್ರಿ ಅಭ್ಯರ್ಥಿಗೆ ಮತ ಹಾಕಿ. ಈಗಾಗಲೇ ಒಬ್ಬರು ನಮ್ಮ ಪಕ್ಷದ ವಿರುದ್ಧ ಮತ ಹಾಕಿದ್ದಾರೆ. ನೀವು ಮೈತ್ರಿ ಅಭ್ಯರ್ಥಿ ಗೆ ಮತ ಹಾಕಿ ಎಂದು ಬೇಡಿಕೊಂಡಿದ್ದಾರೆ.
ಬಿಜೆಪಿ ವಿಪ್‌ನಿಂದ ಏನಾಗುತ್ತೆ? ವಜಾಕ್ಕೂ ಮುನ್ನವೇ ರಾಜೀನಾಮೆ ಕೊಡುವರೇ ಎಸ್.ಟಿ. ಸೋಮಶೇಖರ್!
ಮತದಾನದಿಂದ ದೂರ ಉಳಿಯುವರೇ ಶಿವರಾಮ್ ಹೆಬ್ಬಾರ್?
ಶಾಸಕ ಶಿವರಾಮ ಹೆಬ್ಬಾರ್ ಅವರು ಮೇಲ್ನೋಟಕ್ಕೆ ಮತದಾನದಿಂದ ದೂರ ಉಳಿಯಲಿದ್ದಾರೆ ಎಂಬಂತೆ ಕಂಡುಬರುತ್ತಿದೆ. ಕಾರಣ ರಾಜ್ಯಸಭಾ ಚುನಾವಣಾ ಮತದಾನ ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ಆದರೆ, ಈಗಾಗಲೇ 3 ಗಂಟೆ ಸಮಯವಾಗಿದ್ದು, ಈಗಲೂ ಶಿವರಾಮ್ ಹೆಬ್ಬಾರ್ ಅವರು ವಿಧಾನಸಭಾ ಅಂಗಳಕ್ಕೆ ಮತದಾನಕ್ಕಾಗಿ ಬಂದಿಲ್ಲ. ಆದ್ದರಿಂದ ಅವರು ಮತದಾನದಿಂದ ದೂರ ಉಳಿಯಲಿದ್ದಾರೆ ಎಂಬ ಸಾಧ್ಯತೆಯೇ ಹೆಚ್ಚಾಗಿದೆ. ಮತ್ತೊಂದೆಡೆ ಈಗಾಗಲೇ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿ ವಿಪ್ ಉಲ್ಲಂಘಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಬಿಜೆಪಿ ನಾಯಕರು ವಿಧಾನಸಭಾ ಸ್ಪೀಕರ್‌ಗೆ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅಡ್ಡ ಮತದಾನ ಹಾಕಿ ಪಕ್ಷದಿಂದ ವಿಪ್ ಉಲ್ಲಂಘನೆ ಮಾಡುವ ಬದಲು ಮತದಾನದಿಂದಲೇ ದೂರ ಉಳಿಯುವ ನಿರ್ಧಾರ ಮಾಡಲಿದ್ದಾರೆಯೇ ಎಂಬುದು ಸ್ಪಷ್ಟವಾಗಿ ಗೋಚರ ಆಗುತ್ತಿದೆ.
ವಿಪ್ ಎಂದರೇನು?
ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್ ಅನ್ನು ಅಸ್ತ್ರದಂತೆ ಬಳಸಬಹುದು. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ. ಪಕ್ಷದ ಮುಖ್ಯ ಸಚೇತಕರು ವಿಪ್ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.
ರಾಜ್ಯಸಭೆ ಚುನಾವಣೆ ಬಿಜೆಪಿಗೆ ಮೊದಲ ಗೆಲುವು, ಮೈತ್ರಿ ನಾಯಕರ ಸಂಭ್ರಮ
ಪಕ್ಷದ 'ಬಿ' ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ. ಈಗ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ. ಹೀಗಾಗಿ, ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದರಿಂದ ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದು ಮಾಡಬಹುದು. ಇನ್ನು ವಿಪ್ ಜಾರಿಯ ನಂತರ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಕಸ ಸ್ಥಾನದಿಂದ ಎಸ್.ಟಿ. ಸೋಮಶೇಖರ್ ಅವರನ್ನು ವಜಾ ಮಾಡಿದರೆ, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.