ಬಿಜೆಪಿ ವಿಪ್‌ನಿಂದ ಏನಾಗುತ್ತೆ? ವಜಾಕ್ಕೂ ಮುನ್ನವೇ ರಾಜೀನಾಮೆ ಕೊಡುವರೇ ಎಸ್.ಟಿ. ಸೋಮಶೇಖರ್!
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದ ನಂತರವೂ ಅಡ್ಡಮತದಾನ ಮಾಡಿದ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ವಜಾಗೊಳಿಸುವ ಸಾಧ್ಯತೆಯಿದೆ.
ಬೆಂಗಳೂರು (ಫೆ.27): ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಬಿಜೆಪಿ ತನ್ನ 66 ಶಾಸಕರಿಗೆ ನಿನ್ನೆಯೇ ವಿಪ್ ಜಾರಿ ಮಾಡಿದ್ದರೂ ಶಾಸಕ ಎಸ್.ಟಿ. ಸೋಮಶೇಖರ್ ಬಿಜೆಪಿಯವರಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ ಮತವನ್ನು ಹಾಕಿದ್ದಾರೆ. ಇದರಿಂದ ವಿಪ್ ಉಲ್ಲಂಘನೆಯಾಗಿದ್ದು, ಬಿಜೆಪಿ ಶಾಸಕ ಸ್ಥಾನದಿಂದ ವಜಾಗೊಳಿಸುವ ಮುನ್ನವೇ ಅವರೇ ರಾಜಿನಾಮೆ ನೀಡುವರೇ ಎಂಬ ಅನುಮಾನವೂ ಎದುರಾಗಿದೆ.
ಹೌದು, ರಾಜ್ಯ ಸಭಾ ಚುನಾವಣೆಗೆ ಕರ್ನಾಟಕದಲ್ಲಿ ಭಾರಿ ಕಾವು ಎದ್ದಿತ್ತು. ಕಾರಣ ನಾಲ್ವರು ಅಭ್ಯರ್ಥಿಗಳು ಸುಲಭವಾಗಿ ಗೆಲ್ಲಬಹುದಾಗಿದ್ದು, ಇನ್ನೊಬ್ಬ ಅಭ್ಯರ್ಥಿ ಗೆಲುವು ಸಾಧಿಸುವುದು ಭಾರಿ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ತಮ್ಮ ಶಾಸಕರು ಅಡ್ಡ ಮತನಾದ ಮಾಡದಂತೆ ಭಾರಿ ಜಾಗ್ರತೆವಹಿಸಿದ್ದರು. ಜೊತೆಗೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದ್ದವು. ಆದರೆ, ಈ ವಿಪ್ ಜಾರಿಯನ್ನೂ ಉಲ್ಲಂಘಿಸಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡಮತದಾನ ಮಾಡಿದ್ದಾರೆ.
ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಹಾಕಿ ಬಿಜೆಪಿಗೆ ಶಾಕ್ ಕೊಟ್ಟ ಎಸ್ ಟಿ ಸೋಮಶೇಖರ್
ವಿಪ್ ಎಂದರೇನು?
ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್ ಅನ್ನು ಅಸ್ತ್ರದಂತೆ ಬಳಸಬಹುದು. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ. ಪಕ್ಷದ ಮುಖ್ಯ ಸಚೇತಕರು ವಿಪ್ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.
ಪಕ್ಷದ 'ಬಿ' ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ. ಈಗ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ. ಹೀಗಾಗಿ, ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದರಿಂದ ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದು ಮಾಡಬಹುದು. ಇನ್ನು ವಿಪ್ ಜಾರಿಯ ನಂತರ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಕಸ ಸ್ಥಾನದಿಂದ ಎಸ್.ಟಿ. ಸೋಮಶೇಖರ್ ಅವರನ್ನು ವಜಾ ಮಾಡಿದರೆ, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.
ವಜಾಗೊಳಿಸುವ ಮುನ್ನವೇ ರಾಜಿನಾಮೆ ಸಲ್ಲಿಕೆ ಸಾಧ್ಯತೆ:
ಇನ್ನು ಬಿಜೆಪಿ ವಿಪ್ ಜಾರಿ ಮಾಡಿದ ನಂತರವೂ ಅಡ್ಡ ಮತದಾನ ಮಾಡಿದ ಶಾಸಕ ಎಸ್.ಟಿ. ಸೋಮಶೇಖರ್ ಅವರು ತಮ್ಮನ್ನು ಬಿಜೆಪಿ ವಜಾಗೊಳಿಸುವ ಮುನ್ನವೇ ತಾವೇ ಸ್ವತಃ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ತಾವು ಪಕ್ಷಾಂತರ ನಿಷೇಧ ಕಾಯ್ದೆಯಡಿ ವಜಾಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಲೇ ಕಾಂಗ್ರೆಸ್ ಗೆ ಮತ ಹಾಕಿದ ಜನಾರ್ಧನ ರೆಡ್ಡಿ!
ಬಿಜೆಪಿ ವಿಪ್ ಜಾರಿಯಿಂದ ಏನೂ ಮಾಡೋಕೆ ಆಗೋದಿಲ್ಲ:
ವಿಪ್ ಜಾರಿಯ ಬಗ್ಗೆ ಮಾತನಾಡಿದ ಶಾಸಕ ಎ. ಎಸ್. ಪೊನ್ನಣ್ಣ ಅವರು, ಇದು ಒಪನ್ ಬ್ಯಾಲಟ್ ಆಗಿದೆ. ಇಲ್ಲಿ ವಿಪ್ ಜಾರಿ ಮಾಡೋಕೆ ಆಗೋದಿಲ್ಲ. ಇಂಥವರಿಗೆ ಹಾಕಿ ಎಂದು ಮನವಿ ಮಾಡಬಹುದು ಅಷ್ಟೇ. ಕಡ್ಡಾಯ ಮಾಡಲು ಬರೋದಿಲ್ಲ. ಅಡ್ಡ ಮತದಾನದಿಂದ ಶಾಸಕರಿಗೆ ಯಾವುದೇ ಸಮಸ್ಯೆ ಆಗಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಹಲವು ಉದಾಹರಣೆಗಳಿವೆ. ಕುಷ್ವಂತ್ ಸಿಂಗ್ ಪ್ರಕರಣದಲ್ಲಿ ಉಲ್ಲೇಖವಾಗಿದೆ. ಇಲ್ಲಿ ಚಿಹ್ನೆ ಸಹ ಇರೋದಿಲ್ಲ. ಇದು ಪಕ್ಷಾಧರಿತ ಚುನಾವಣಾ ಅಲ್ಲ. ಅನರ್ಹತೆ ಆಗಲಿ ಪಕ್ಷಾಂತರ ನಿಷೇಧ ಕಾಯಿದೆ ಆಗಲಿ ಅನ್ವಯಿಸೋದಿಲ್ಲ ಎಂದು ಹೇಳಿದ್ದಾರೆ.