ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಲ್ಲಿ ಬೇಸರ ತರಿಸಿವೆ: ಶಾಸಕ ಜಿ.ಡಿ.ಹರೀಶ್ ಗೌಡ
ದಿನಕ್ಕೆ ಸತತ 20 ಗಂಟೆಗಳ ಕಾಲ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ದುಡಿಯುತ್ತಿರುವ ಮಹಾನ್ ನೇತಾರ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗುವುದನ್ನು ಯಾರು ತಪ್ಪಿಸಲಾಗದು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ಹುಣಸೂರು (ಏ.13): ದಿನಕ್ಕೆ ಸತತ 20 ಗಂಟೆಗಳ ಕಾಲ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ದುಡಿಯುತ್ತಿರುವ ಮಹಾನ್ ನೇತಾರ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗುವುದನ್ನು ಯಾರು ತಪ್ಪಿಸಲಾಗದು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು. ಪಟ್ಟಣದ ಆದಿನಾರಾಯಣ ಶೆಟ್ಟಿ ಕನ್ವೆನ್ಷನ್ ಹಾಲ್ ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಕಸಬಾ ಹೋಬಳಿ ಮತ್ತು ಪಟ್ಟಣ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಮತದಾರರಲ್ಲಿ ಮತಯಾಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎನ್.ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಗಳಿಸುವ ಮೂಲಕ ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೈಸೂರು ಮಹಾರಾಜರ ಕುಡಿ ಯದುವೀರ್ ಅವರ ಸರಳ ಸಜ್ಜನಿಕೆಯ ನಡೆ ಅವರ ಕುರಿತಾಗಿ ಮಾತನಾಡುತ್ತಿದ್ದ ಟೀಕಾಕಾರಿಗೆ ಉತ್ತರವಾಗಿದೆ. ಯದುವಂಶದ ರಾಜರ ಕೊಡುಗೆ ಅನನ್ಯ. ರಾಜ್ಯದ ಇಂದಿನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಲ್ಲಿ ಬೇಸರ ತರಿಸಿವೆ. ರಸ್ತೆಯ ಗುಂಡಿಯನ್ನು ಮಣ್ಣುಹಾಕಿ ಮುಚ್ಚಲೂ ಕೂಡ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ದೂರಿದರು.
ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕಳೆದ 65 ವರ್ಷ ಕಾಂಗ್ರೆಸ್ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಹತ್ತು ಪಟ್ಟು ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದೆ. 40 ವಂದೇ ಭಾರತ್ ರೈಲು, ಸಾವಿರಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು, 700ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ಹೀಗೆ ಮೋದೀಜಿಯವರ ಅಭಿವೃದ್ಧಿಕಾರ್ಯಗಳು ಮನೆಮಾತಾಗಿವೆ ಎಂದರು. ಮುಖಂಡರಾದ ನಿಂಗರಾಜ ಮಲ್ಲಾಡಿ, ಶಿವಶೇಖರ್ ಮಾತನಾಡಿದರು. ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ನಗರಮಂಡಲ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ನಾರಾಯಣ, ತಾಲೂಕು ಅಧ್ಯಕ್ಷ ಕಾಂತರಾಜು, ನಿಕಟಪೂರ್ವ ಅಧ್ಯಕ್ಷ ನಾಗಣ್ಣಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ಇದ್ದರು.
ಯಾಕೆ ಮತ್ತೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಹೇಳಿ?: ಸಿಎಂ ಸಿದ್ದರಾಮಯ್ಯ
ಕ್ರಮಸಂಖ್ಯೆ ಒಂದನ್ನು ಒತ್ತಿ: ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಈ ಬಾರಿ ಚುನಾವಣೆಗೆ 18 ಮಂದಿ ಸ್ಪರ್ಧಿಸಿದ್ದು, ನಿಮ್ಮ ಮತಗಟ್ಟೆಯಲ್ಲಿ ಎರಡು ಎಲೆಕ್ಟ್ರಾನಿಕ್ ಮತಯಂತ್ರಗಳಿರುತ್ತವೆ. ನೀವು ಮತಯಂತ್ರದಲ್ಲಿನ ಕ್ರಮ ಸಂಖ್ಯೆ 1ರ ಗುರುತಿನ ಕಮಲದ ಹೂವಿಗೆ ಮತ ಚಲಾಯಿಸಬೇಕು, ಬೇರೆ ಕಡೆ ನೋಡಬೇಡಿ. ಕಮಲಕ್ಕೆ ಮತ ನೀಡುವ ಮೂಲಕ ಮಹಾರಾಜರನ್ನು ಗೆಲ್ಲಿಸಬೇಕು. ಆ ಮೂಲಕ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣವೆಂದು ಕೋರಿದಾಗ ಸಭೆಯಲ್ಲಿ ಎಲ್ಲರೂ ಹೋ ಎಂದು ಕೂಗಿ ಒಪ್ಪಿಗೆ ನೀಡಿದ್ದು ವಿಶೇಷವಾಗಿತ್ತು.