Asianet Suvarna News Asianet Suvarna News

ಗ್ಯಾರಂಟಿ ಜಾರಿಯಿಂದ ದುಡಿಯುವ ವರ್ಗ ಕಣ್ಮರೆ: ಚಂದ್ರಪ್ಪ

ನನಗೆ ಡಾಕ್ಟರೇಟ್‌ ಗೌರವ ಸಿಗುತ್ತದೆಂದು ಆಸೆಪಟ್ಟು ಕೆಲಸ ಮಾಡಿದವನಲ್ಲ. ಸಿಕ್ಕಿರುವ ಅವಕಾಶವನ್ನು ಸಾರ್ವಜನಿಕರಿಗೆ ಧಾರೆ ಎರೆಯುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳ ಬೇಕೆಂಬ ಜಾಯಮಾನ ನನ್ನದು: ಶಾಸಕ ಡಾ.ಎಂ.ಚಂದ್ರಪ್ಪ 

MLA Dr M Chandrappa Talks over Congress Guarantee grg
Author
First Published Aug 17, 2023, 10:45 PM IST

ಹೊಳಲ್ಕೆರೆ(ಆ.17):  ಶ್ರಮಿಕ ಸಂಸ್ಕೃತಿ ಪ್ರತಿಪಾದಕ ಬಸವಣ್ಣನವರು ಕಾಯಕವೇ ಕೈಲಾಸ ಎನ್ನುವ ಸಂದೇಶ ನೀಡಿದ್ದರು. ಈಗಿನ ಕಾಂಗ್ರೆಸ್‌ ಸರ್ಕಾರದ ಐದು ಉಚಿತ ಗ್ಯಾರಂಟಿಗಳ ಜಾರಿಗೆ ತಂದಿರುವುದರಿಂದ ದುಡಿಯುವ ವರ್ಗ ಕಣ್ಮರೆಯಾಗುತ್ತಾ ಎಂಬ ಆತಂಕ ಮೂಡಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಹೊಳಲ್ಕೆರೆ ಶಾಖೆ ಹಾಗೂ ಮನೋರಂಜನಾ ವಿಭಾಗದ ಸಂಯೋಜನೆಯೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಗ್ಯಾರಂಟಿಗಳ ಪ್ರತಿಫಲನ ಇನ್ನಾರು ತಿಂಗಳಲ್ಲಿ ಗೊತ್ತಾಗಲಿದೆ ಎಂದರು.

740 ಕೋಟಿ ವೆಚ್ಚದಲ್ಲಿ ವಿ.ವಿ.ಸಾಗರ ನೀರಾವರಿ ಯೋಜನೆ ಆಧುನೀಕರಣಕ್ಕೆ ಚಿಂತನೆ: ಸಚಿವ ಡಿ.ಸುಧಾಕರ್

ನನಗೆ ಡಾಕ್ಟರೇಟ್‌ ಗೌರವ ಸಿಗುತ್ತದೆಂದು ಆಸೆಪಟ್ಟು ಕೆಲಸ ಮಾಡಿದವನಲ್ಲ. ಸಿಕ್ಕಿರುವ ಅವಕಾಶವನ್ನು ಸಾರ್ವಜನಿಕರಿಗೆ ಧಾರೆ ಎರೆಯುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳ ಬೇಕೆಂಬ ಜಾಯಮಾನ ನನ್ನದು. ಹದಿನಾರು ವರ್ಷದ ಕೆಳಗೆ ಇಲ್ಲಿ ಇಕ್ಕಟ್ಟಾದ ರಸ್ತೆಯಿದ್ದುದನ್ನು ನೋಡಿ ಸಿಮೆಂಟ್‌ ರಸ್ತೆ ಮಾಡಿಸಿದೆ. ಇನ್ನೂ ಗಟ್ಟಿಮುಟ್ಟಾಗಿದೆ. ಎರಡು ಎಕರೆಯಲ್ಲಿ ದೊಡ್ಡ ಕೊಚ್ಚೆಗುಂಡಿಯಿತ್ತು. ಇಡೀ ಊರಿನ ಗಲೀಜೆಲ್ಲಾ ಬಂದು ಸೇರುತ್ತಿತ್ತು. ಗುಂಡಿ ಮುಚ್ಚಿಸಿ ಆರು ಕೋಟಿ ರು. ಖರ್ಚು ಮಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಮೂರ್ನಾಲ್ಕು ಅಂತಸ್ತಿನ ಹಾಸ್ಟೆಲ್‌ ಕಟ್ಟಿಸಿದ್ದೇನೆ ಎಂದರು.

ಹೊಳಲ್ಕೆರೆ ಪಟ್ಟಣದಲ್ಲಿರುವ ಚಿಕ್ಕಕೆರೆ ಕಲುಷಿತವಾಗಿತ್ತು. ಅದನ್ನು ಶುದ್ಧೀಕರಿಸಿದ್ದೇನೆ. ಅಧಿಕಾರ ನೀಡಿದ ಜನರಿಗೆ ಏನು ಮಾಡಿದರೆ ಒಳ್ಳೆಯದು ಎನ್ನುವ ಆಲೋಚನೆಯಿಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಬ್ರಿಟಿಷರ ಕಾಲದ ಹಳೆ ಕಟ್ಟಡಗಳನ್ನು ಕೆಡವಿ ಶಾಲೆಗಳನ್ನು ಕಟ್ಟಿಸಿದ್ದೇನೆ. ಎಂ.ಎಂ.ಪ್ರೌಢಶಾಲೆ ಮೇಲೆ ಬಳ್ಳಾರಿ ಜಾಲಿ ಗಿಡ ಬೆಳೆದಿತ್ತು. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಸಕರ ಅನುದಾನದಲ್ಲಿ ಉಚಿತವಾಗಿ ಬಸ್‌ ಬಿಟ್ಟು ಡ್ರೈವರ್‌, ಕಂಡಕ್ಟರ್‌ಗೆ ಸಂಬಳ ಕೊಡುತ್ತಿದ್ದೇನೆ ಎಂದರು.

ಕವಾಡಿಗರಹಟ್ಟಿ ಪ್ರಕರಣ: ಕುಡಿಯುವ ನೀರಿನ ಕುರಿತು ಜಿಲ್ಲಾಡಳಿತದಿಂದ ವಿಶೇಷ ಜಾಗೃತಿ

510 ಕೋಟಿ ರು. ಖರ್ಚು ಮಾಡಿ ತಾಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ಧ ಫಿಲ್ಟರ್‌ ನೀರು ಕೊಡುತ್ತಿದ್ದೇನೆ. ಉತ್ತಮ ಸ್ಟೇಡಿಯಂ, ಮಿನಿ ವಿಧಾನಸೌದ, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ. ಒಳ್ಳೆಯದು ಮಾಡಲು ಆಗದಿದ್ದರೂ ಯಾರಿಗೂ ಕೆಟ್ಟದ್ದನ್ನು ಬಯಸಬಾರದು. ಮತ್ತೊಬ್ಬರಿಗೆ ಬೇಸರವಾಗದಂತೆ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎನ್ನುವ ಮನೋಭಾವನೆ ನನ್ನದು ಎಂದು ಚಂದ್ರಪ್ಪ ಹೇಳಿದರು..

ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಚ್‌.ಶಿವಲಿಂಗಪ್ಪ, ಬಿ.ಮಲ್ಲೇಶಪ್ಪ, ಚಂದ್ರಶೇಖರ್‌ ತಾಳ್ಯ, ಸಂಧ್ಯಾ ಶಂಕರ್‌, ಜಿ.ಎಸ್‌.ನಾಗರಾಜ್‌ರಾವ್‌, ಬಸವರಾಜ್‌, ಡಿ.ಗೋಪಾಲಪ್ಪ, ಪುರಸಭೆ ಮಾಜಿ ಅಧ್ಯಕ್ಷ ಆರ್‌.ಎ.ಅಶೋಕ್‌, ಮಲ್ಲಿಕಾರ್ಜುನ್‌, ಬಸವರಾಜ್‌ ಯಾದವ್‌, ಮಾರುತೇಶ್‌ ಈ ಸಂದರ್ಭದಲ್ಲಿದ್ದರು.

Follow Us:
Download App:
  • android
  • ios