740 ಕೋಟಿ ವೆಚ್ಚದಲ್ಲಿ ವಿ.ವಿ.ಸಾಗರ ನೀರಾವರಿ ಯೋಜನೆ ಆಧುನೀಕರಣಕ್ಕೆ ಚಿಂತನೆ: ಸಚಿವ ಡಿ.ಸುಧಾಕರ್

ಮಧ್ಯ ಕರ್ನಾಟಕದ‌ ಜನರ ಅಕ್ಷಯ ಪಾತ್ರೆ ಎಂದು ಹೆಸರಾಗಿರುವ ವಿವಿ ಸಾಗರ ಜಲಾಶಯದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿದೆ. ವಾಣಿ ವಿಲಾಸ ಸಾಗರ ಡ್ಯಾಂ ಅನ್ನು ಆಧುನೀಕರಣ ಮಾಡುವ ಮೂಲಕ ರೈತರಿಗೆ ನೀರಾವರಿ ಅನುಕೂಲಕ್ಕೆ ಚಿಂತನೆ ನಡೆಯುತ್ತಿದೆ. 

Thinking about modernization of VV Sagar Irrigation Project at a cost of 740 crores Says Minister D Sudhakar gvd

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.17): ಮಧ್ಯ ಕರ್ನಾಟಕದ‌ ಜನರ ಅಕ್ಷಯ ಪಾತ್ರೆ ಎಂದು ಹೆಸರಾಗಿರುವ ವಿವಿ ಸಾಗರ ಜಲಾಶಯದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿದೆ. ವಾಣಿ ವಿಲಾಸ ಸಾಗರ ಡ್ಯಾಂ ಅನ್ನು ಆಧುನೀಕರಣ ಮಾಡುವ ಮೂಲಕ ರೈತರಿಗೆ ನೀರಾವರಿ ಅನುಕೂಲಕ್ಕೆ ಚಿಂತನೆ ನಡೆಯುತ್ತಿದೆ. ಅಷ್ಟಕ್ಕೂ ಉಸ್ತುವಾರಿ ಸಚಿವರು ಹಾಗೂ ಕೇಂದ್ರ ಮಂತ್ರಿಗಳು ಏನೆಲ್ಲಾ‌ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನೋದ್ರ ಕಂಪ್ಲೀಟ್ ವರದಿ ಇಲ್ಲಿದೆ. ವಿವಿ ಸಾಗರ ಜಲಾಶಯದ ಆಧುನೀಕರಣ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸ್ತಿರೋ ಕೋಟೆನಾಡಿನ ಸಚಿವದ್ವಯರು. 

ಒಬ್ಬರು ಕೇಂದ್ರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಖಾತೆಯ ಸಚಿವ ಎ ನಾರಾಯಣಸ್ವಾಮಿ, ಮತ್ತೊಬ್ಬರು ರಾಜ್ಯ ಸರ್ಕಾರದ ಸಾಂಖ್ಯಿಕ ಖಾತೆಯ ಡಿ.ಸುಧಾಕರ್,  ಏಷಿಯನ್ ಅಭಿವೃದ್ಧಿ ಬ್ಯಾಂಕ್ ಮೂಲಕ 740 ಕೋಟಿ ರೂ. ವೆಚ್ಚದಲ್ಲಿ ವಾಣಿವಿಲಾಸ ಸಾಗರ ಜಲಾಶಯ, ನಾಲೆಗಳ ಆಧುನೀಕರಣ, ಹನಿ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದರಿಂದ ಪ್ರಸ್ತುತ 29 ಸಾವಿರ ಎಕರೆ ಪ್ರದೇಶಕ್ಕೆ ದೊರಕುತ್ತಿರುವ ನೀರಾವರಿ ಸೌಲಭ್ಯ 45 ಸಾವಿರ ಎಕರೆ ಪ್ರದೇಶಕ್ಕೆ ಏರಿಕೆಯಾಗಲಿದೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

3 ತಿಂಗಳಲ್ಲೇ ಸಿದ್ದು ಸರ್ಕಾರದ ವರ್ಚಸ್ಸು ಕಡಿಮೆ: ಶಾಸಕ ವಿಜಯೇಂದ್ರ ಟೀಕೆ

ರಾಜ್ಯದ ಅತ್ಯಂತ ಹಳೆಯದಾದ, ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯವನ್ನು ಕೇಂದ್ರ ಪುರಸ್ಕೃತ ಸಪೋರ್ಟ್ ಫಾರ್ ಇರಿಗೇಷನ್ ಮಾಡ್ರನೈಜೇಷನ್ ಪ್ರೋಗ್ರಾಮ್ (ಎಸ್‍ಐಎಮ್‍ಪಿ) ಅಡಿ ಕೈಗೊಳ್ಳಲು ರಾಜ್ಯ ಸರ್ಕಾರ ಗುರುತಿಸಿದ್ದು, ಕೇಂದ್ರ ಜಲ ಆಯೋಗವು ಈ ಯೋಜನೆಯನ್ನು ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕ್ ಅನುದಾನದಡಿ ನಿರ್ವಹಿಸಲಿದೆ. ಇದರಡಿ 115 ವರ್ಷಗಳಷ್ಟು ಹಳೆಯದಾದ ವಾಣಿವಿಲಾಸ ಸಾಗರ ಅಣೆಕಟ್ಟಿನ ದುರಸ್ಥಿ ಹಾಗೂ ನಾಲಾಗಳ ಆಧುನೀಕರಣ ಕೈಗೊಳ್ಳಲಾಗುವುದು.  ಕಾಲುವೆ ನೀರಾವರಿ ಬದಲಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲಾಗುವುದು. 

ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಗಳನ್ನು ನಿರ್ಮಿಸಲಾಗುವುದು.  ಜಲಾಶಯದ ಹಿನ್ನೀರಿನಲ್ಲಿ ಜಲಕ್ರೀಡೆ ಅಭಿವೃದ್ಧಿಗೊಳಿಸಲು ಕೂಡ ಚಿಂತಿಸಲಾಗಿದೆ ಎಂದರು. ಇನ್ನೂ ಈ‌ ಕುರಿತು ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ವಾಣಿವಿಲಾಸ ಸಾಗರ ಜಲಾಶಯದಲ್ಲಿ ಈಗಿರುವ ಸೋರುವಿಕೆಯನ್ನು ತಡೆಯುವುದರ ಜೊತೆಗೆ, ಕಾಲುವೆ ನೀರಾವರಿಯಲ್ಲಿ ನೀರು ಪೋಲಾಗುವುದನ್ನು ತಡೆಯಲು, ಮಾನವ ಚಾಲಿತ ಗೇಟ್‍ಗಳ ಬದಲಿಗೆ ಕೇಂದ್ರಿಕೃತ ಸ್ವಯಂಚಾಲನ ನಿರ್ವಹಣೆ ವ್ಯವಸ್ಥೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. 

ವಾಣಿವಿಲಾಸ ಸಾಗರ ನೀರಾವರಿ ಯೋಜನೆ ಆಧುನೀಕರಣಕ್ಕೆ ರೂ.740 ಕೋಟಿಯನ್ನು ಏಷಿಯನ್ ಅಭಿವೃದ್ಧಿ ಬ್ಯಾಂಕ್ ಮಂಜೂರಾತಿ ನೀಡಿದೆ. ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಜಲಾಶಯ ಹಾಗೂ ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಯೋಜನೆಯನ್ನು ಯಶಸ್ವಿಯಾಗಿ ಜಾರಿಮಾಡಲು ತಜ್ಞರ ಸಲಹೆ ಪಡೆಯಲಾಗುತ್ತಿದೆ.  ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕ್‍ನ ಟೀಮ್ ಲೀಡರ್, ನೀರಾವರಿ ಆಧುನೀಕರಣ ವಿಶೇಷ ತಜ್ಞ ಲಂಡನ್‍ನ ಡೇನಿಯಲ್ ರೆನಾಲ್ಟ್ ಯೋಜನೆಯ ಕಾರ್ಯಸೂಚಿ ಸಿದ್ದಪಡಿಸಲಿದ್ದಾರೆ. ಕೃಷಿ ಹಾಗೂ ಕೇಂದ್ರ ಜಲ ಆಯೋಗ ತಜ್ಞರು ಭೇಟಿ ನೀಡಿ ವಿವರವಾಗಿ ಅಧ್ಯಯನ ಮಾಡುತ್ತಿದ್ದಾರೆ. 

ಗೃಹಜ್ಯೋತಿಯಿಂದ ಗ್ರಾಹಕರ ಆರ್ಥಿಕ ಹೊರೆ ತಪ್ಪಿದೆ: ಸಚಿವ ಡಿ.ಸುಧಾಕರ್‌

ಯೋಜನೆಯಲ್ಲಿ ಹೆಚ್ಚಿನದಾಗಿ ಸೇರಿಸಬೇಕಾದ ಅಂಶಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ನಾನು ಸಲಹೆ ನೀಡಿದ್ದೇವೆ. ನೀರು ಪೋಲಾಗುವುದನ್ನು ತಡೆಯುವುದು. ಹನಿ ನೀರಾವರಿ ಪದ್ದತಿ ಅಳವಡಿಕೆ ಹಾಗೂ ಅಂತರ್ಜಲ ವೃದ್ಧಿಯ ಪ್ರಮುಖ ಮೂರು ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಯೋಜನೆ ರೂಪಿಸಲಾಗುತ್ತಿದೆ, ಅಲ್ಲದೆ ಬೆಳೆ ಪದ್ಧತಿ ನಿಗದಿಯ ಬಗ್ಗೆಯೂ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಒಟ್ಟಿನಲ್ಲಿ ಮೈಸೂರಿನ‌ ರಾಜ ಮಾತೆ ಕಟ್ಟಿಸಿದ ಇತಿಹಾಸ ಇರುವ ವಿವಿ ಸಾಗರ ಡ್ಯಾಂ ಉನ್ನತೀಕರಣಕ್ಕೆ ಎರಡು ಸರ್ಕಾರಗಳ ಸಚಿವರು ಮುಂದಾಗಿರೋದು ಸ್ವಾಗತಾರ್ಹ. ಇದು ಕೇವಲ ಆಶ್ವಾಸನೆ ಆಗಿ ಉಳಿಯದೇ ಬೇಗ ಕಾರ್ಯ ರೂಪಕ್ಕೆ ಬರಲಿ ಎಂಬುದು ಜಿಲ್ಲೆಯ ರೈತರ ಕಳಕಳಿ.

Latest Videos
Follow Us:
Download App:
  • android
  • ios