ಮೈಸೂರು: ವಿಜಯೇಂದ್ರ ಪರ ನಿರಂತರ ಜೈಕಾರ, ಮುಜುಗರಕ್ಕೆ ಒಳಗಾದ ಸೋಮಣ್ಣ
* ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ
* ವಿಜಯೇಂದ್ರ ಮತ್ತು ಸೋಮಣ್ಣ ಅವರಿಗೆ ಘೋಷಣೆ ಕೂಗಿ ಮುಜುಗರ ತರಬೇಡಿ
* ಸಮಾಜದ ಎರಡು ಕಣ್ಣುಗಳು ಈ ಇಬ್ಬರು ನಾಯಕರು
ಮೈಸೂರು(ಜೂ.08): ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ್ದಕ್ಕೆ ಅತೃಪ್ತಿಗೊಂಡಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಗರು ವಸತಿ ಸಚಿವ ವಿ.ಸೋಮಣ್ಣ ಭಾಷಣದ ವೇಳೆ ಜೋರಾಗಿ ಜೈಕಾರದ ಘೋಷಣೆ ಮೊಳಗಿಸಿದ ಪರಿಣಾಮ ಬಾರಿ ಮುಜುಗರಕ್ಕೆ ಒಳಗಾದರು.
ಜೈಕಾರದ ಘೋಷಣೆಯ ನಡುವೆ ಬೆಂಬಲಿಗರ ಬಾಯಿ ಮುಚ್ಚಿಸಲು ಆಕ್ರೋಶದಿಂದ ಮಾತನಾಡಿದ ಅವರು, ಆರಂಭದಿಂದ ಕೊನೆಯ ತನಕಮೊಳಗಿದ ಘೋಷಣೆಗೆ ಕಿವಿಗೊಡದೆ ತಮ್ಮ ಮಾತನ್ನು ಮುಂದುವರಿಸುವ ಮೂಲಕ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು.
ಸಿದ್ದು- ಬಿಎಸ್‌ವೈ ಭೇಟಿ ವಿಡಿಯೋ ಬಹಿರಂಗ ಯಾವ ಸಂದೇಶಕ್ಕಾಗಿ?: ಎಚ್‌ಡಿಕೆ
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಸಂಬಂಧ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಗಳ ವೀರಶೈವ- ಲಿಂಗಾಯತ ಪ್ರಮುಖರು, ಪದವೀಧರರ ಸಭೆಯಲ್ಲಿ ಅವರು ಮಾತನಾಡಿದರು. ಈ ಸಭೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗಮಿಸಿದ್ದರಿಂದ ಸಭಾಂಗಣದ ಒಳಗೆ ಮತ್ತು ಹೊರಗೆ ಜನಸ್ತೋಮ ಕಿಕ್ಕಿರಿದು ನೆರೆದಿತ್ತು. ವಿಜಯೇಂದ್ರ ಅವರ ಜೈಕಾರದ ಘೋಷಣೆ ಕೂಗಲು ದೂರದೂರಿನಿಂದ ಬಂದಿದ್ದರು.
ಈ ಮಾಹಿತಿ ಅರಿತಿದ್ದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ, ವಿಜಯೇಂದ್ರ ಮತ್ತು ವಿ. ಸೋಮಣ್ಣ ಅವರಿಗೆ ಘೋಷಣೆ ಕೂಗಿ ಮುಜುಗರ ತರಬೇಡಿ ಎಂದು ಎಚ್ಚರಿಸಿದರು. ಸಮಾಜದ ಎರಡು ಕಣ್ಣುಗಳು ಈ ಇಬ್ಬರು ನಾಯಕರು. ಇಬ್ಬರಿಗೂ ಪ್ರತ್ಯೇಕ ಘೋಷಣೆ ಬೇಡ. ಪದವೀಧರರ ಚುನಾವಣೆ ಇರುವುದರಿಂದ ತಪ್ಪು ಸಂದೇಶ ಹೋಗುವುದು ಬೇಡ ಎಂದು ಮನವಿ ಮಾಡಿದರು. ಆದರೆ, ಮೊದಲಿಗೆ ವಿಜಯೇಂದ್ರ ಅವರ ಪರವಾಗಿ ಘೋಷಣೆ ಮೊಳಗಿಸಿದ ಅಭಿಮಾನಿಗಳ ಕೂಗು ಮುಗಿಲು ಮುಟ್ಟಿತು. ನಂತರ ಬಂದ ಸಚಿವ ವಿ.ಸೋಮಣ್ಣ ಪರವಾಗಿಯೂ ಜೈಕಾರ ಕೇಳಿಬಂತು.