ಬೆಂಗಳೂರು, [ಅ.26]: ವಿಧಾನಸಭೆ ಅಧಿವೇಶನದ ನಡೆಯುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಸುರೇಶ್ ಕುಮಾರ್ ಅವರು ದಿನಕ್ಕೊಂದು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಡಿಕೆಶಿಗೆ ಅದ್ಧೂರಿ ಸ್ವಾಗತ, ತಡಬಡಾಯಿಸಿದ ರಶ್ಮಿಕಾ; ಅ.26ರ ಟಾಪ್ 10 ಸುದ್ದಿ!

ಮೊನ್ನೇ ಅಷ್ಟೇ ಟ್ವೀಟ್ ಮಾಡಿ 'ಓ ದೇವರೇ ರಾಜ್ಯದ  ಪ್ರತಿಪಕ್ಷದ ನಾಯಕರು ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿಯಾದರೂ ಮಾನ್ಯ ಸಭಾಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸದಂತೆ ಬುದ್ದಿ ಕೊಡು' ಎಂದಿದ್ದರು. ಇದಕ್ಕೆ ಇಂದು [ಶನಿವಾರ]  ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಸ್ಪೀಕರ್‌ಗೆ ಏಕವಚನದಲ್ಲಿ ಮಾತನಾಡಿಲ್ಲ, ಅವಹೇಳನಕಾರಿಯಾಗಿ ಮಾತನಾಡಿಲ್ಲ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ಗೊತ್ತಿದೆ ಎಂದರು.

ಕಾನೂನು ಮೇಷ್ಟ್ರಿಗೆ ವ್ಯಾಕರಣ ಮೇಷ್ಟ್ರ ಸಂವಿಧಾನ ಪಾಠ!

ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಸುರೇಶ್ ಕುಮಾರ್, ಸಿದ್ದರಾಮಯ್ಯನವರೇ! ನಿಮಗಿಂತ ಚಿಕ್ಕವರಾಗಿರುವ ರಾಹುಲ್ ಗಾಂಧಿಯವರಿಗೆ ಯಾವತ್ತಾದರೂ  ಏಕವಚನ ಬಳಸಿದ್ದೀರಾ? ಎಂದು ಪ್ರಶ್ನೆ ಹಾಕುವ ಮೂಲಕ ಪರೋಕ್ಷವಾಗಿ ಕಾಲೆಳೆದಿದ್ದಾರೆ. 

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಪ್ರತಿಯಾಗಿ ಸುರೇಶ್ ಕುಮಾರ್ ಈ ಟ್ವೀಟ್ ಬಾಣ ಬಿಟ್ಟಿದ್ದಾರೆ. 

ಅಷ್ಟೇ ಅಲ್ಲದೇ ಶನಿವಾರ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದಲ್ಲಿ ಮಧ್ಯಮಗಳೊಂದಿಗೆ  ಸಿದ್ದರಾಮಯ್ಯ ಸ್ಪೀಕರ್ ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ವ್ಯಾಕರಣ ಮೇಷ್ಟ್ರು, ಆದರೂ ಕೂಡ ಅವರಿಗೆ ವ್ಯಾಕರಣ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಆದ ಪ್ರವಾಹ ಹಿನ್ನೆಲೆಯಲ್ಲಿ ಮೂರು ದಿನಗಳ ಅಧಿವೇಶನ ನಡೆದಿತ್ತು. ಈ ಅಧಿವೇಶನದಲ್ಲಿ  ಮಾತನಾಡಲು ಅವಕಾಶ ಕೊಟ್ಟಿಲ್ಲವೆಂದು ಗರಂ ಆದ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆಗೆ ಏಕವಚನದಲ್ಲಿ ಬೈದಿದ್ದಾರೆ ಎನ್ನಲಾಗಿದೆ.

ಹೀಗೆ ಸಿದ್ದರಾಮಯ್ಯ ಹಾಗೂ ಸುರೇಶ್ ಕುಮಾರ್ ನಡುವೆ ವಾಕ್ ಸಮರ ಶುರುವಾಗಿದ್ದು, ಎಲ್ಲಿಗೆ ಬಂದು ನಿಲ್ಲುತ್ತೇ ಎನ್ನುವುದನ್ನು ಕಾದುನೋಡಬೇಕಿದೆ.