ಬೆಂಗಳೂರು[ಜು.10]: ರಾಜ್ಯ ರಾಜಕಾರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಶಾಸಕರು ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದರೆ, ಮತ್ತೊಂದೆಡೆ ದೋಸ್ತಿ ನಾಯಕರು ಅತೃಪ್ತ ಶಾಸಕರ ಮನವೊಲಿಸಲು ಮುಂದಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ 'ಕಾನೂನು ಹಾಗೂ ವ್ಯಾಕರಣ ಮೇಷ್ಟ್ರ' ಟ್ವೀಟ್ ವಾರ್ ಕೂಡಾ ಜೋರಾಗಿದೆ.

ಹೌದು ನಿನ್ನೆಯಷ್ಟೇ ಅತೃಪ್ತ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದು ಸಾಧ್ಯವಾ? ಎಂಬ ಪ್ರಶ್ನೆಗಳೂ ಉದ್ಭವಿಸಿದ್ದವು. ಹೀಗಿರುವಾಗಲೇ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡುತ್ತಾ 'ವ್ಯಾಕರಣ ಮೇಸ್ಟ್ರೇ... ಆ ಕೆಲವು ಶಾಸಕರು ರಾಜಿನಾಮೆ ನೀಡಿರುವುದು ತಮ್ಮ ಶಾಸಕ ಸ್ಥಾನಕ್ಕೆ, ತಮ್ಮ ಪಕ್ಷಕ್ಕಲ್ಲ(ಕಾಂಗ್ರೆಸಿ ಗಲ್ಲ).  ಇದು ಹೇಗೆ ಪಕ್ಷಾಂತರ ವಿರೋಧಿ ಕಾಯ್ದೆ (Anti-defection law)  ಉಲ್ಲಂಘನೆ ಆಗುತ್ತದೆ?ಅವರ ವಿರುದ್ಧ ಯಾವುದೇ ಕ್ರಮ ಸಾಧ್ಯವೇ?' ಎಂದು ಸಿದ್ದರಾಮಯ್ಯರಿಗೆ ಕಿಚಾಯಿಸಿದ್ದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸದ್ಯ ಈ ಪ್ರಶ್ನೆಗೆ ಟ್ವೀಟ್ ಮೂಲಕ ಉತ್ತರಿಸಿರುವ 'ವ್ಯಾಕರಣ ಮೇಷ್ಟ್ರು' ಸಿದ್ದರಾಮಯ್ಯ 'ಕಾನೂನಿನ ಮೇಷ್ಟ್ರೇ, @nimmasuresh ಶಾಸಕರು ತಮ್ಮ ಪಕ್ಷದ ವಿರುದ್ಧ ಬಹಿರಂಗವಾಗಿ  ಮಾತನಾಡಿದರೆ ಇಲ್ಲವೇ ಇನ್ನೊಂದು ಪಕ್ಷ ಸೇರಿದರೆ, ಅದನ್ನು ರಾಜೀನಾಮೆ ಎಂದು ತೀರ್ಮಾನಿಸಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ‌ಕೈಗೊಳ್ಳಬಹುದು ಎಂದು ನ್ಯಾಯಾಲಯದ ತೀರ್ಪುಗಳು ಹೇಳಿವೆ. ಸ್ವಲ್ಪ ಓದಿಕೊಳ್ಳಿ.' ಎಂದಿದ್ದಾರೆ. ಅಲ್ಲದೇ ಇಂತಹ ಸಾಧ್ಯತೆಗಳಿವೆ ಎಂದು ತಿಳಿಸುವ ವಿಚಾರವನ್ನು ಮಾರ್ಕ್ ಮಾಡಿ ಫೋಟೋ ಶೇರ್ ಮಾಡಿದ್ದಾರೆ.

'ವ್ಯಾಕರಣ ಮೇಷ್ಟ್ರಿ'ಗೆ ಸುರೇಶ್ ಕುಮಾರ್ ಕಾನೂನು ಪಾಠ!

ಸದ್ಯ ಇಬ್ಬರು 'ಮೇಷ್ಟ್ರ' ನಡುವಿನ ಈ ಟ್ವೀಟ್ ವಾರ್ ಮುಂದುವರೆಯುತ್ತಾ ಅಥವಾ ಇಲ್ಲಿಗೇ ನಿಲ್ಲುತ್ತಾ ಕಾದು ನೋಡಬೇಕು. ಅಂದ ಹಾಗೆ ಅಧಿವೇಶನ ಹಾಗೂ ಸಂದರ್ಭ ಸಿಕ್ಕಾಗೆಲ್ಲಾ ಕನ್ನಡ ವ್ಯಾಕರಣದ ಪಾಠ ಮಾಡಿ 'ವ್ಯಾಕರಣ ಮೇಷ್ಟ್ರು' ಎಂದೇ ಫೇಮಸ್ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಪ್ರವೇಶಕ್ಕೂ ಮೊದಲು ವಕೀಲರಾಗಿದ್ದರು ಎಂಬುವುದು ಉಲ್ಲೇಖನೀಯ.

ಸದಾ+ಆನಂದ=ಸದಾನಂದ: ಕನ್ನಡ ವ್ಯಾಕರಣ ಪಠಿಸಿದ ಸಿದ್ದರಾಮಯ್ಯ

ಶ್ರೀರಾಮುಲುಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಸಿದ್ದರಾಮಯ್ಯ