ಪ್ರಧಾನಿ ಮೋದಿಯವರ 10 ವರ್ಷದ ಸಾಧನೆ ಶೂನ್ಯ: ಸಚಿವ ಸಂತೋಷ್ ಲಾಡ್
ದೇಶದಲ್ಲಿ 10 ವರ್ಷಗಳಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದ್ದು, ಏನೇ ಉದ್ಘಾಟನೆ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತ್ರ ಬಿಂಬಿಸಲಾಗುತ್ತಿದೆ. ದೇಶ ಹಳ್ಳ ಹಿಡಿದು ಹೋಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು.
ಹುಬ್ಬಳ್ಳಿ (ಫೆ.19): ಸುಪ್ರಿಂಕೋರ್ಟ್ ಹೇಳಿರುವ ಜಾಗದಲ್ಲಿ ರಾಮ ಮಂದಿರ ಕಟ್ಟಿಲ್ಲ, ರಾಮ ಮಂದಿರ ಕಟ್ಟಿರುವ ಜಾಗ ಸರಿಯಾಗಿಲ್ಲ. ಬೇರೆ ಜಾಗದಲ್ಲಿ, ಅದು ಕೇವಲ ಶೇ. 40ರಷ್ಟು ಮಾತ್ರ ಮಂದಿರ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು. ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ರಾಮ ಮಂದಿರ ನಿರ್ಮಾಣ ಮಾಡಿದರೆ ಬಡತನ ನಿರ್ಮೂಲನೆಯಾಗುವುದಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕೆ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಮಂದಿರ ಕಟ್ಟಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕಟ್ಟಿರುವ ಜಾಗ ಸರಿ ಇಲ್ಲ ಎಂದರು.
ಸರ್ವಾಧಿಕಾರಿ ಧೋರಣೆ: ದೇಶದಲ್ಲಿ 10 ವರ್ಷಗಳಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದ್ದು, ಏನೇ ಉದ್ಘಾಟನೆ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತ್ರ ಬಿಂಬಿಸಲಾಗುತ್ತಿದೆ. ದೇಶ ಹಳ್ಳ ಹಿಡಿದು ಹೋಗಿದೆ, ಹತ್ತು ವರ್ಷಗಳಲ್ಲಿ ಬಡವರಿಗೆ ಅನುಕೂಲವಾಗುವಂತಹ ಒಂದೇ ಒಂದು ಕಾರ್ಯಕ್ರಮವಾಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಿದೆಯಾ? ಮೋದಿ ಅವರ 10 ವರ್ಷದ ಸಾಧನೆ ಶೂನ್ಯವಾಗಿದೆ ಎಂದು ಆರೋಪಿಸಿದರು.
ಯುಗಾದಿ ನಂತರ ರಾಜ್ಯದಲ್ಲಿ ಧಾರ್ಮಿಕ ಮುಖಂಡನ ಸಾವಾಗಲಿದ್ದು, ಒಳ್ಳೆಯ ಮಳೆ-ಬೆಳೆಯಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ!
ಯಾವ ಹಿಂದೂಗಳಿಗೂ ಲಾಭವಾಗಿಲ್ಲ: ಬಿಜೆಪಿಯವರು ಚುನಾವಣೆ ಬಂದಾಗ ಒಂದು ಅಜೆಂಡಾ ಸೆಟ್ ಮಾಡುತ್ತಾರೆ, ಈಗ ರಾಮ ಮಂದಿರದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ರಾಮ- ರಹೀಮ್, ಪಾಕಿಸ್ತಾನ, ಅಪಘಾನಿಸ್ತಾನ ಹೆಸರಿನ ಮೂಲಕ ಜನರನ್ನು ಹುಚ್ಚು ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದರು. ಈಗ ಹಿಂದುತ್ವ ಮತ್ತು ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಂದ ಯಾವ ಹಿಂದೂಗಳಿಗೂ ಲಾಭವಾಗಿಲ್ಲ. ಇದಕ್ಕೆಲ್ಲ ಅಂತ್ಯವಿದೆ, ದೇವರು ಇದ್ದಾನೆ ಎಂದು ನುಡಿದರು.
ಬಿಜೆಪಿಯಿಂದ ಜನರಿಗೆ ಮೋಸ: ನಿತೀಶ್ ಕುಮಾರ ಹಾಗೂ ಕಮಲನಾಥ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿರುವುದರಿಂದ ಯಾವುದೇ ಲಾಭವಿಲ್ಲ. ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಏನೂ ಮಾಡಿಲ್ಲ, ನಮ್ಮ ಗ್ಯಾರಂಟಿ ಯೋಜನೆ ನೋಡಿ ಜನರು ಮತ ಹಾಕಿದರೆ ಬಿಜೆಪಿಯವರು ಗೆಲ್ಲುವುದಿಲ್ಲ. ಗ್ಯಾರಂಟಿ ತಪ್ಪಿಸಲು ರಾಮ, ರಹೀಮ್ ಬರುತ್ತಾರೆ. ಅಭಿವೃದ್ಧಿ ವಿಚಾರದ ಮೇಲೆ ಹೋದರೆ ಬಿಜೆಪಿ ಗೆಲ್ಲುವುದಿಲ್ಲ. ಬರುವ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಜನರಿಗೆ ಮೋಸ ಮಾಡಿ ಮತಗಳನ್ನು ತೆಗೆದುಕೊಳ್ಳುತ್ತಾರೆ ಎಂದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯಾರೂ ಹಿಂದೇಟು ಹಾಕುತ್ತಿಲ್ಲ: ಗೃಹ ಸಚಿವ ಪರಮೇಶ್ವರ್
ಬಿಜೆಪಿಯವರೇ ಕೇಳಿ: ನನಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲ. ನರೇಂದ್ರ ಮೋದಿ ಅವರು ಟಿವಿಯಲ್ಲಿ ಬರಲಾರದೆ ಮತ ಕೇಳಲಿ. ಅವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ವೇಳೆ ಮಾತನಾಡಿರುವ ವಿಡಿಯೋಗಳಿವೆ. ಅದನ್ನು ಬಿಜೆಪಿಯವರು ಕೇಳಬೇಕು. ನಾವು ತೆರಿಗೆ ಪಾಲು ಕೇಳಿದರೆ ಸುಳ್ಳುರಾಮಯ್ಯ ಎನ್ನುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ರೈತರ ಆದಾಯ ದುಪ್ಪಟ್ಟು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಮಾತಾಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 3 ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ ಎಂದರೆ, ಮೋದಿ ಅವರು 4 ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.