ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯಾರೂ ಹಿಂದೇಟು ಹಾಕುತ್ತಿಲ್ಲ: ಗೃಹ ಸಚಿವ ಪರಮೇಶ್ವರ್
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ. ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇಲ್ಲ, ಯಾರೂ ಸ್ಪರ್ಧೆಗೆ ಹಿಂದೇಟು ಹಾಕುತ್ತಿಲ್ಲ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಹಾವೇರಿ (ಫೆ.19): ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ. ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇಲ್ಲ, ಯಾರೂ ಸ್ಪರ್ಧೆಗೆ ಹಿಂದೇಟು ಹಾಕುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ವಿಪಕ್ಷದವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅದಕ್ಕೆ ಹಗಲುಗನಸು ಅಂತಾರೆ, ಅವರು ಕನಸು ಕಾಣಲಿ, ನಾವು ಆಡಳಿತ ಮಾಡ್ತಾ ಇರುತ್ತೇವೆ ಎಂದರು.
ಕೋರ್ಟ್ ಆದೇಶ ಮಾಡಿದ ಜಾಗ ಬಿಟ್ಟು ಬೇರೆ ಕಡೆ ರಾಮಮಂದಿರ ನಿರ್ಮಾಣ ಮಾಡಿದ್ದಾರೆ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಲಾಡ್ ಹೇಳಿಕೆಯನ್ನು ಆರೋಪ ಎಂದು ಏಕೆ ಅಂತೀರಿ, ಸಂತೋಷ್ ಲಾಡ್ ವಸ್ತುಸ್ಥಿತಿ ಹೇಳಿದ್ದಾರೆ. ಅದನ್ನು ಆರೋಪ ಎನ್ನುವುದು ಸರಿಯಲ್ಲ ಎಂದರು. ಅಲ್ಪಸಂಖ್ಯಾತರಿಗೆ ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರವಿದೆ ಎಂದ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟಾಂಗ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅನೇಕ ಜನ ಈ ದೇಶದ ಮೂಲ ನಿವಾಸಿಗಳ ಬಗ್ಗೆ ಮಾತನಾಡಿದ್ದಾರೆ.
ದಲಿತರು, ಹಿಂದುಳಿದವರು, ಮೂಲನಿವಾಸಿಗಳು ಅಂತ ವ್ಯಾಖ್ಯಾನ ಮಾಡಿದ್ದಾರೆ. ಯಾವ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆಯೋ ಅವರನ್ನು ಹಿಂದುಳಿದವರು ಎನ್ನುತ್ತೇವೆ. ಈ ದೇಶದಲ್ಲಿ ಶೇ. 16ರಿಂದ ಶೇ. 18 ಅಲ್ಪಸಂಖ್ಯಾತರಿದ್ದಾರೆ. ಸಂವಿಧಾನದ ಆಶಯಗಳಂತೆ ಅವಕಾಶಗಳು ಸಿಗಬೇಕು. ಅದೇ ಕಾಂಗ್ರೆಸ್ ನೀತಿ. 1885ರಲ್ಲಿ ಮಾಡಿದ ನಮ್ಮ ನೀತಿಗಳು ಇನ್ನೂ ಬದಲಾಗಿಲ್ಲ, ಅಲ್ಪಸಂಖ್ಯಾತರಿಗೆ ನಾವು ಹೆಚ್ಚಿನ ಪ್ರೋತ್ಸಾಹ ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಅದನ್ನೇ ಮಾಡಿದರೆ ಒಳ್ಳೆಯದು ಎಂದರು.
ತುಂಗಭದ್ರಾ, ವರದಾ ನದಿಗೆ ಬ್ಯಾರೇಜ್ ಕಟ್ಟಿಕೊಡಿ: ಸಚಿವ ಶಿವಾನಂದ ಪಾಟೀಲ್
ಶಿರಾಳಕೊಪ್ಪದ ಬಸ್‌ನಲ್ಲಿ ಸ್ಪೋಟ ವಿಚಾರಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಹಾನಗಲ್ ಗ್ಯಾಂಗ್‌ರೇಪ್ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸದನಲ್ಲಿಯೂ ಚರ್ಚೆ ಆಗಿದೆ. ಉತ್ತರ ಕೊಡುತ್ತೇನೆ. ಪೊಲೀಸರು ತನಿಖೆ ಮಾಡಿ ಕ್ರಮಕೈಗೊಳ್ಳುತ್ತಾರೆ ಎಂದರು. ಕಾಂಗ್ರೆಸ್‌ನಲ್ಲಿ ಡಿಸಿಎಂ ಹುದ್ದೆ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ಗೊತ್ತಿರದೇ ಇರುವುದು ಏನಿಲ್ಲ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಿರಬೇಕು ಎಂದರು.