ಸಂತೋಷಜಿ ನಿಮ್ಮ ಪಕ್ಷ ಸರಿ ಮಾಡಿಕೊಳ್ಳಿ, ಕಾಂಗ್ರೆಸ್ ಪಕ್ಷದ ಯೋಚನೆ ನಿಮಗ್ಯಾಕೆ?: ತಿಮ್ಮಾಪೂರ
ಬಿ.ಎಲ್.ಸಂತೋಷ ಅವರ ವರ್ತನೆ, ಅವರು ರಾಜ್ಯದ ಆಡಳಿತದಲ್ಲಿ ಕೈ ಹಾಕಿದ್ದಕ್ಕೇ ಕರ್ನಾಟಕದ ಲಿಂಗಾಯತ ನಾಯಕರು ಸಿಡಿದೆದ್ದಿದ್ದಾರೆ. ಪಾಪ, ಲಿಂಗಾಯತರನ್ನು ಸಮಾಧಾನ ಮಾಡೋದು ಬಿಟ್ಟು, ಕಾಂಗ್ರೆಸ್ಸಿಗರನ್ನು ನೋಡುತ್ತಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ
ಬಾಗಲಕೋಟೆ(ಸೆ.06): ಬಿ.ಎಲ್.ಸಂತೋಷಜಿ ನಿಮ್ಮ ಪಕ್ಷ ಸರಿ ಮಾಡಿಕೊಳ್ಳಪಾ. ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಕ್ಕೆ ಜನ ನಿಮ್ಮನ್ನ ಮನೆಗೆ ಕಳಿಸಿದ್ದಾರೆ. ಲಿಂಗಾಯತರೆಲ್ಲಾ ಬಿಜೆಪಿ ಬಿಟ್ಟು ಹೊರಟಿದ್ದಾರೆ. ಅದನ್ನ ಸರಿ ಮೊದಲು ಮಾಡಿಕೋ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಸಚಿವ ಅವರು, ಬಿ.ಎಲ್.ಸಂತೋಷಜಿ, ಕಾಂಗ್ರೆಸ್ಸಿನ ಯೋಚನೆ ನಿಮಗ್ಯಾಕೆ? ಮೊದಲು ವಿಪಕ್ಷ ನಾಯಕನ ಆಯ್ಕೆ ಮಾಡು, ಎಲ್ಲ ಜಾತಿಯವರನ್ನು ಒಗ್ಗೂಡಿಸಿಕೊಂಡು ಹೋಗು. ಒಂದೇ ಜಾತಿಯವರನ್ನು ಇಟ್ಟುಕೊಂಡು ಹೋಗಬೇಡ. ಬಿ.ಎಲ್.ಸಂತೋಷಜಿ, ಎಲ್ಲ ಸಮಾಜದರವರನ್ನ ಒಗ್ಗೂಡಿಸಿ ಕೊಂಡು ಹೋಗು ಎಂದು ಹೇಳಿದರು.
ಬಾಗಲಕೋಟೆ- ಕುಡಚಿ, ಗದಗ- ವಾಡಿ ರೈಲ್ವೆ ಮಾರ್ಗದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಎಂ.ಬಿ. ಪಾಟೀಲ
ಕಾಂಗ್ರೆಸ್ಸಿನ 45 ಜನ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್.ಸಂತೋಷ ಹೇಳಿಕೆ ಕುರಿತಾಗಿಯೇ ಮಾತನಾಡಿ ಸಚಿವರು, ಬಿ.ಎಲ್.ಸಂತೋಷ ಅವರ ವರ್ತನೆ, ಅವರು ರಾಜ್ಯದ ಆಡಳಿತದಲ್ಲಿ ಕೈ ಹಾಕಿದ್ದಕ್ಕೇ ಕರ್ನಾಟಕದ ಲಿಂಗಾಯತ ನಾಯಕರು ಸಿಡಿದೆದ್ದಿದ್ದಾರೆ. ಪಾಪ, ಲಿಂಗಾಯತರನ್ನು ಸಮಾಧಾನ ಮಾಡೋದು ಬಿಟ್ಟು, ಕಾಂಗ್ರೆಸ್ಸಿಗರನ್ನು ನೋಡುತ್ತಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆ. ಇಂತಹ ಕೆಲಸ ಮಾಡಲು ಹೋಗಬೇಡಿ. ನಿನ್ನದೇ ಹಣೆಬರಹ ಹೀಂಗೆ ಇದೆ. ನಮ್ಮ ಕಾಂಗ್ರೆಸ್ಸಿಗರು ನಿಮ್ಮ ಜೊತೆ ಬರ್ತಾರಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನಿಂದ ಯಾರೂ ಹೋಗಲ್ಲ. ಅಲ್ಲಿಂದ ಬರೋರ ಎಣಿಕೆ ಮಾಡಿ ಬರುವ ದಿನಗಳಲ್ಲಿ ಹೇಳುತ್ತೇನೆ ಎಂದರು.
ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಪ್ರದೀಪ ಶೆಟ್ಟರ್ ಹೇಳಿಕೆ ಹೇಳಿಕೆಗೆ ಉತ್ತರಿಸಿದ ಸಚಿವರು, ಲಿಂಗಾಯತರಿಗೆ ಅನ್ಯಾಯವಾಗಿದೆ. ಅದನ್ನು ಸರಿಮಾಡಿಕೊಳ್ಳಿ ಅಂತ ಹೇಳುತ್ತಿದ್ದಾರೆ. ಬಿಜೆಪಿಯವರೇ ನಮಗೆ ಅನ್ಯಾಯ ಮಾಡ್ತಿದ್ದೀರಿ. ನಾವು ಇಷ್ಟು ದಿನ ಬಿಜೆಪಿ ಸಪೋರ್ಟ್ ಮಾಡಿದಿವಿ. ನಮಗೇಕೆ ಅನ್ಯಾಯ ಅಂತ ಕೇಳ್ತಿದ್ದಾರೆ. ಸರಿ ಮಾಡಿಕೊಳ್ಳೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಭಾರತ ಮಾತಾಕಿ ಜೈ ಅಂತೇವೆ, ಆದ್ರೆ ಇಂಡಿಯಾ ಮಾತಾಕಿ ಜೈ ಎನ್ನೊಲ್ಲ: ಕೆ.ಎಸ್. ಈಶ್ವರಪ್ಪ ಆಕ್ರೋಶ
ಧರ್ಮ ಸ್ವೀಕಾರ ಮಾಡಲು ಇಲ್ಲಿ ಸ್ವತಂತ್ರ ಇದೆ:
ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಸಚಿವರು, ಅದೇನಾಗಿದೆ, ನನಗೆ ಗೊತ್ತಿಲ್ಲ. ತಮಿಳುನಾಡು ಗಮನದಲ್ಲಿರಿಸಿ ಮಾತನಾಡಿರಬಹುದು. ನನಗೆ ಗೊತ್ತಿಲ್ಲ. ಇದರಲ್ಲಿ ಪಕ್ಷದ ನಿಲುವು ಏನಿರೋದಿಲ್ಲ. ಈ ದೇಶದಲ್ಲಿ ಅವರವರ ಧರ್ಮ ಅವರವರ ಆಚರಣೆಗೆ ಬಿಟ್ಟಿದ್ದು. ನಾವು ಪಕ್ಷದ ವತಿಯಿಂದ ನೀ ಆ ಧರ್ಮ, ಈ ಧರ್ಮದಲ್ಲಿರು ಅಂತ ಹೇಳೋದಲ್ಲ.ಅದನ್ನು ಧರ್ಮಾಧಿಕಾರಿಗಳು, ಪೀಠಾಧಿಕಾರಿಗಳು ಮಾಡ್ತಾರೆ. ಆದರೆ ಧರ್ಮ ಸ್ವೀಕಾರ ಮಾಡಲು ಇಲ್ಲಿ ಸ್ವತಂತ್ರ ಇದೆ.ಅದನ್ನು ಎಲ್ಲರೂ ಮಾಡಬೇಕು ಎಂದು ಸಚಿವರು ತಿಳಿಸಿದರು.
ಮಾಲ್‌ನಲ್ಲಿ ಮದ್ಯ ಮಾರಾಟ ಸದ್ಯಕ್ಕೆ ಚರ್ಚೆ ಇಲ್ಲ
ಮಾಲ್‌ನಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಇಲ್ಲ. ಸದ್ಯ ಅಂತಹ ಪ್ರಶ್ನೆ ಏನಿಲ್ಲಾ. ಚರ್ಚೆಗೆ ಕುಳಿತಾಗ ಅದೊಂದು ವಿಷಯ ಬಂದಿತ್ತು. ಮಾಡಬೇಕೋ, ಬಿಡಬೇಕೋ ಅನ್ನೋದು ಚರ್ಚೆ ಹಂತದಲ್ಲಿದೆ. ಇದನ್ನು ಜಾರಿಗೊಳಿಸಬೇಕೆನ್ನುವ ವಿಚಾರ ಇಲ್ಲ. ಇದು ಬಹಳ ಪ್ರಿಮ್ಯಾಚ್ಯೂರ್ , ಇನ್ನೂ ಚರ್ಚೆ ಹಂತದಲ್ಲಿಯೇ ಇದೆ.