ಬೆಂಗಳೂರು(ಅ.09):  ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌ ಕರೆ ಮೇರೆಗೆ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಮುಂಬೈಗೆ ತೆರಳಿ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

ಗುರುವಾರ ದಿಢೀರನೆ ಮುಂಬೈಗೆ ತೆರಳಿದ ಜಾರಕಿಹೊಳಿ ಅವರು ಫಡ್ನವಿಸ್‌ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಇತ್ತೀಚೆಗಷ್ಟೇ ಜಾರಕಿಹೊಳಿ ಮತ್ತು ಫಡ್ನವಿಸ್‌ ಅವರ ಭೇಟಿ ನಡೆದಿತ್ತು. ಇದೀಗ ಎರಡನೆಯ ಬಾರಿ ಭೇಟಿ ಮಾಡಿದರು. ಮಾತುಕತೆ ವಿವರಗಳು ಬಹಿರಂಗಗೊಳ್ಳದಿದ್ದರೂ ಮಹಾರಾಷ್ಟ್ರದ ರಾಜಕಾರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ ಎನ್ನಲಾಗಿದೆ.

ದೇವೇಂದ್ರ ಫಡ್ನವಿಸ್ -ಜಾರಕಿಹೊಳಿ‌ ಭೇಟಿ: ಶಿವಸೇನಾ,ಕಾಂಗ್ರೆಸ್ ವಲಯದಲ್ಲಿ ನಡುಕ ಶುರು

ಬೆಳಗಾವಿ ಜಿಲ್ಲೆಯವರಾದ ರಮೇಶ್‌ ಜಾರಕಿಹೊಳಿ ಅವರಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಉತ್ತಮ ಸಂಪರ್ಕವಿದೆ. ಹೀಗಾಗಿ, ಅಲ್ಲಿ ಮುಂದಿನ ದಿನಗಳಲ್ಲಿ ಈಗಿರುವ ಶಿವಸೇನೆ-ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಪರ್ಯಾಯವಾಗಿ ಬಿಜೆಪಿ ಸರ್ಕಾರ ರಚಿಸುವ ಸಂಬಂಧ ಸಮಾಲೋಚನೆ ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ.