ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ತಡವಾಗುತ್ತಿದೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ನನ್ನ ಕೈಯಲ್ಲಿಲ್ಲ. ಈ ಕುರಿತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಹುಬ್ಬಳ್ಳಿ (ನ.08): ಸಾರಿಗೆ ನೌಕರರ ವೇತನ ಪರಿಷ್ಕರಣೆ ನನ್ನ ಕೈಯಲ್ಲಿಲ್ಲ. ಈ ಕುರಿತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ತಡವಾಗುತ್ತಿದೆ. 1-1-2023ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು. ಅದು ಆಗದ ಕಾರಣ ತಾಂತ್ರಿಕ ದೋಷವಾಗಿ ಸಮಸ್ಯೆಯಾಗಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು

ಶಕ್ತಿ ಯೋಜನೆಯಡಿ ಈ ವರೆಗೆ 593 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ₹15200 ಕೋಟಿ ಖರ್ಚು ಮಾಡಲಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹2 ಸಾವಿರ ಕೋಟಿ ಹಾಗೂ ಹೊಸ ಬಸ್ ಖರೀದಿಗೆ ₹800 ಕೋಟಿ ನೀಡಲಾಗಿದೆ ಎಂದರು. ಸಾರಿಗೆ ಸಂಸ್ಥೆಯಲ್ಲಿ 2016ರಲ್ಲಿ ನೇಮಕಾತಿ ಆಗದೆ ಸಿಬ್ಬಂದಿ ಕೊರತೆಯಿಂದ ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಹೊರ ಗುತ್ತಿಗೆಗೆ ಕಡಿವಾಣವಾಗಲಿದೆ ಎಂದರು. ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು ಕಾಂಗ್ರೆಸ್ ಸಹಿ ಸಂಗ್ರಹ ಅಭಿಯಾನ ಮಾಡುತ್ತಿದೆ. ನನ್ನ ಕ್ಷೇತ್ರದಲ್ಲಿ 50 ಸಾವಿರ ಜನರ ಸಹಿ ಸಂಗ್ರಹವಾಗಿದೆ ಎಂದು ಸಚಿವರು ಹೇಳಿದರು.

ಎಲೆಕ್ಟ್ರಿಕ್‌ ಬಸ್‌ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ

ಎಲೆಕ್ಟ್ರಿಕ್‌ ಬಸ್‌ ಚಾಲಕರ ನಡವಳಿಕೆಯಿಂದ ಬಿಎಂಟಿಸಿ ಸೇವೆಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿ ಇವಿ ಬಸ್‌ಗಳಿಗೆ ಖಾಸಗಿ ಚಾಲಕರನ್ನು ನೇಮಿಸುವ ವ್ಯವಸ್ಥೆ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ರಾಮಲಿಂಗಾರೆಡ್ಡಿ ನಿರ್ಧರಿಸಿದ್ದಾರೆ. ವೇತನ, ಭತ್ಯೆ ಹೆಚ್ಚಳ, ಬೋನಸ್‌ ನೀಡುವುದು ಸೇರಿದಂತೆ ವಿವಿಧ ಕಾರಣ ನೀಡಿ ಖಾಸಗಿ ಸಂಸ್ಥೆಯಿಂದ ನೇಮಕವಾಗಿರುವ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಎರಡು ದಿನದಿಂದ 140ಕ್ಕೂ ಹೆಚ್ಚಿನ ಎಲೆಕ್ಟ್ರಿಕ್‌ ವಾಹನಗಳು ಡಿಪೋಗಳಲ್ಲೇ ನಿಂತಿದ್ದು, ಕಾರ್ಯಾಚರಣೆಗೊಂಡಿಲ್ಲ.

ಅಲ್ಲದೆ, ಸಮಸ್ಯೆ ಬಗೆಹರಿಸುವಂತೆ ಖಾಸಗಿ ಸಂಸ್ಥೆಗಳಿಗೆ ಬಿಎಂಟಿಸಿ ಸೂಚನೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ಅಧಿಕಾರಿಗಳು, ಬಿಎಂಟಿಸಿಗೆ ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಮಾದರಿಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲಾಗುತ್ತಿದೆ. ಅದರಂತೆ ಬಸ್‌ಗಳನ್ನು ಪೂರೈಸುವ ಸಂಸ್ಥೆಯೇ ಅವುಗಳನ್ನು ನಿರ್ವಹಣೆ ಮಾಡಲಿದೆ ಹಾಗೂ ಅವುಗಳಿಗೆ ಚಾಲಕರನ್ನು ನೇಮಿಸಲಿದೆ. ಈ ವ್ಯವಸ್ಥೆಯು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ವಿವರಿಸಿದರು. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನಾಧರಿಸಿ ರಾಮಲಿಂಗಾರೆಡ್ಡಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.