ಬಿಜೆಪಿ ನಾಯಕರು ‘ಲಾಲ್‌ಬಾಗ್ ಉಳಿಸಿ’ ಹೆಸರಲ್ಲಿ ನಾಟಕವಾಡುತ್ತಿದ್ದಾರೆ. ನಾಟಕ ಬಿಟ್ಟು ಸುರಂಗ ಪ್ರವೇಶ ಮತ್ತು ನಿರ್ಗಮನಕ್ಕೆ ಪರ್ಯಾಯ ಜಾಗವನ್ನು ಸೂಚಿಸುವ ಧೈರ್ಯ ಮಾಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ನ.04): ಸುರಂಗ ರಸ್ತೆ ವಿರೋಧಿಸುವುದಕ್ಕಾಗಿ ಬಿಜೆಪಿ ನಾಯಕರು ‘ಲಾಲ್‌ಬಾಗ್ ಉಳಿಸಿ’ ಹೆಸರಲ್ಲಿ ನಾಟಕವಾಡುತ್ತಿದ್ದಾರೆ. ನಾಟಕ ಬಿಟ್ಟು ಸುರಂಗ ಪ್ರವೇಶ ಮತ್ತು ನಿರ್ಗಮನಕ್ಕೆ ಪರ್ಯಾಯ ಜಾಗವನ್ನು ಸೂಚಿಸುವ ಧೈರ್ಯ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಸುರಂಗ ವಿರೋಧಿಸಿ ಬಿಜೆಪಿ ನಾಯಕರು ನಡೆಸುತ್ತಿರುವ ಸಹಿ ಸಂಗ್ರಹ ಹೋರಾಟವನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಟೀಕಿಸಿರುವ ಅವರು, ಬಿಜೆಪಿ ನಾಯಕರು ಲಾಲ್‌ಬಾಗ್ ಉಳಿಸಿ ಎಂದು ನಾಟಕವಾಡುತ್ತಿದ್ದಾರೆ. ಲಾಲ್‌ಬಾಗ್ ಬಗ್ಗೆ ನಿಮ್ಮದು ಕಾಳಜಿಯೋ, ರಾಜಕೀಯವೋ? ಲಾಲ್‌ಬಾಗ್ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಯೋಜನೆ ರದ್ದುಪಡಿಸಲು ಹಠ ಹಿಡಿಯುವ ಬದಲು, ಸುರಂಗದ ಪ್ರವೇಶ ಮತ್ತು ನಿರ್ಗಮನಕ್ಕೆ ಪರ್ಯಾಯ ಜಾಗ ಸೂಚಿಸುವ ಧೈರ್ಯ ತೋರಿ. ಅದನ್ನು ಬಿಟ್ಟು, ಜನರ ದಾರಿ ತಪ್ಪಿಸುವ ರಾಜಕೀಯ ಗಿಮಿಕ್ ಏಕೆ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರಿಗೆ ಸುರಂಗವೇ ಮದ್ದು ಎಂದಿದ್ದರು.
ಈಗೇಕೆ ಬಿಜೆಪಿಯವರ ಈ ಯೂ-ಟರ್ನ್?: ಕರ್ನಾಟಕದಲ್ಲಿ ಪರಿಸರ ಪಾಠ ಹೇಳುವ ನೀವು, ನಿಮ್ಮದೇ ಸರ್ಕಾರಗಳು ಬೇರೆ ರಾಜ್ಯಗಳಲ್ಲಿ ಮಾಡಿದ್ದೇನು? ಹಿಮಾಚಲ ಪ್ರದೇಶದ ‘ಅಟಲ್ ಸುರಂಗ’ ನಿಮ್ಮ ಹೆಮ್ಮೆಯ ಸಾಧನೆ ಎಂದು ಹೇಳಿಕೊಳ್ಳುತ್ತೀರಿ. ಅರುಣಾಚಲ ಪ್ರದೇಶದ ‘ಸೇಲಾ ಸುರಂಗ’ ನಿಮ್ಮ ಪಕ್ಷದ ಪ್ರಧಾನಿಗಳೇ ಉದ್ಘಾಟಿಸಿದ್ದು. ‘ಕಾಶ್ಮೀರದ ಸುರಂಗಗಳ’ ಅಭಿವೃದ್ಧಿಯ ಹರಿಕಾರರು ಎಂದು ನೀವೇ ಬೆನ್ನು ತಟ್ಟಿಕೊಳ್ಳುತ್ತೀರಿ. ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿಯಾಗುವ ಸುರಂಗ, ಬೆಂಗಳೂರಿನಲ್ಲಿ ಮಾತ್ರ ಪರಿಸರ ವಿರೋಧಿಯಾಗುವುದೇ? ಬೆಂಗಳೂರಿನ ಜನತೆಗೆ ಬೇಕಿರುವುದು ಸಂಚಾರ ದಟ್ಟಣೆಯಿಂದ ಮುಕ್ತಿ, ನಿಮ್ಮ ರಾಜಕೀಯ ಅಡ್ಡಿ ಆತಂಕಗಳಲ್ಲ ಎಂದು ಹೇಳಿದ್ದಾರೆ.
ಇ-ಬಸ್ ಪೂರೈಕೆ ಸಂಸ್ಥೆಗೆ ಕಠಿಣ ನಿಯಮ ರೂಪಿಸಿ
ಕೇಂದ್ರ ಸರ್ಕಾರದ ಸೂಚನೆಯಂತೆ ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್ (ಜಿಸಿಸಿ) ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಗೆ ಪಡೆಯಲಾಗಿರುವ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ಕೊರತೆಯಿಂದ ನಿಗಮದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಜಿಸಿಸಿ ಅಡಿಯಲ್ಲಿ ಬಸ್ ಪೂರೈಕೆ ಮತ್ತು ನಿರ್ವಹಣೆಗೆ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಫೇಮ್ ಯೋಜನೆ ಅಡಿಯಲ್ಲಿ ನಗರ ಸಾರಿಗೆಗಳಿಗಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆಯಲಾಗುತ್ತಿದೆ.
ಅವುಗಳನ್ನು ಜಿಸಿಸಿ ಮಾದರಿಯಲ್ಲಿ ಪಡೆಯಲಾಗುತ್ತಿದ್ದು, ಬಸ್‌ಗಳ ನಿರ್ವಹಣೆ, ಚಾಲಕರ ನೇಮಕ ಎಲ್ಲವೂ ಬಸ್ ಪೂರೈಸುವ ಖಾಸಗಿ ಸಂಸ್ಥೆಯ ಜವಾಬ್ದಾರಿಯಾಗಿದೆ. ಬಿಎಂಟಿಸಿಯಲ್ಲಿ ಸದ್ಯ 1,644 ಎಲೆಕ್ಟ್ರಿಕ್ ಬಸ್‌ಗಳು ಸೇವೆ ನೀಡುತ್ತಿವೆ. ಆದರೆ, ಆ ಬಸ್‌ಗಳು ಪದೇಪದೆ ಕೆಟ್ಟು ನಿಲ್ಲುತ್ತಿವೆ ಹಾಗೂ ಅದರ ಚಾಲಕರು ಬಸ್ ಪೂರೈಸಿದ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಬಿಎಂಟಿಸಿ ಬಸ್ ಸೇವೆ ನೀಡುವಲ್ಲಿಯೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಎಲೆಕ್ಟ್ರಿಕ್ ಬಸ್ ನಿರ್ವಹಣೆ ಕುರಿತಂತೆ ಖಾಸಗಿ ಸಂಸ್ಥೆಗಳಿಗೆ ಕಠಿಣ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
