ಬಿಜೆಪಿಯವರಿಗೆ ಮತಗಳವು ಹೊಸದಲ್ಲ. 2014ರಿಂದಲೇ ಮತಗಳವು ಪ್ರಾರಂಭವಾಗಿದೆ, ನಂತರದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯವರು ಮತಗಳವು ಕುತಂತ್ರ ನಡೆಸಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ನ.07): ಬಿಜೆಪಿಯವರಿಗೆ ಮತಗಳವು ಹೊಸದಲ್ಲ. 2014ರಿಂದಲೇ ಮತಗಳವು ಪ್ರಾರಂಭವಾಗಿದೆ, ನಂತರದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯವರು ಮತಗಳವು ಕುತಂತ್ರ ನಡೆಸಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಹರ್ಯಾಣ ವಿಧಾನಸಭಾ ಚುನಾವಣೆ ಮತಗಳವು ಬಗ್ಗೆ ರಾಹುಲ್‌ ಗಾಂಧಿ ಅವರ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ಇದು ಹೊಸದೇನಲ್ಲ. 2014ರ ನಂತರ ದೇಶದ ಎಲ್ಲ ಚುನಾವಣೆಗಳಲ್ಲೂ ಅವರು ತಮ್ಮ ಕುತಂತ್ರ ಮಾಡಿದ್ದಾರೆ.

ಆದರೆ, ಇದು ನಮ್ಮ ಗಮನಕ್ಕೆ ಬಂದಿದ್ದು ಮಹಾರಾಷ್ಟ್ರ ಚುನಾವಣೆಯಲ್ಲಿ. ಅಲ್ಲಿ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟಕ್ಕೆ ಹೆಚ್ಚು ಸ್ಥಾನ ಬಂದಿದ್ದು ನೋಡಿ ವಿಧಾನಸಭೆ ಚುನಾವಣೆಯಲ್ಲಿ ಮತಗಳವು ಮಾಡಿದರು. ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸಬೇಕಾದ ಕೇಂದ್ರ ಚುನಾವಣಾ ಆಯೋಗದವರು ಬಿಜೆಪಿ ಜೊತೆ ಶಾಮೀಲಾಗಿ ವ್ಯವಸ್ಥಿತವಾಗಿ ಇಂತಹ ಅಕ್ರಮ ಮಾಡಿದ್ದಾರೆ ಅನಿಸುತ್ತಿದೆ ಎಂದು ಆರೋಪಿಸಿದರು.

ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಅವ್ಯವಸ್ಥೆ ಸರಿಪಡಿಸಿ

ಮೆಜೆಸ್ಟಿಕ್‌ನ ಕೆಎಸ್ಸಾರ್ಟಿಸಿ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಯಾಣಿಕರಿಂದ ಕೇಳಿ ಬಂದ ದೂರುಗಳಿಗೆ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಬಸ್‌ ನಿಲ್ದಾಣಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್‌ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ಮೀಸಲಿರುವ ಪ್ರದೇಶ ಸಮತಟ್ಟಾಗಿರದ ಕಾರಣ ಮಳೆ ಬಂದಾಗ ನೀರು ನಿಂತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ಸಾರಿಗೆ ಸಚಿವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಸಮಸ್ಯೆ ಬಗೆಹರಿಸಲು ಸೂಕ್ತ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶಿಸಿದ್ದರು.

ಭೇಟಿಯ ವೇಳೆ ಸದ್ಯ ಪೂರ್ಣಗೊಂಡಿರುವ ಮೊದಲ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಇನ್ನೂ ಎರಡು ಸ್ಥಳಗಳಲ್ಲಿ ಉಂಟಾಗುವ ಮಳೆ ಹಾನಿ ಪರಿಸ್ಥಿತಿ ನಿವಾರಿಸಲು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು. ಬಸ್‌ ನಿಲ್ದಾಣದ ಎಲ್ಲ ಟರ್ಮಿನಲ್‌ಗಳನ್ನು ಪರಿವೀಕ್ಷಣೆ ಮಾಡಿ, ಪ್ರಯಾಣಿಕರೊಂದಿಗೆ ಚರ್ಚಿಸಿದರು. ಪ್ರಯಾಣಿಕರು ಮತ್ತು ನಿಗಮದ ಸಿಬ್ಬಂದಿಗೆ ಕುಡಿಯುವ ನೀರು, ವಿದ್ಯುತ್‌ ದೀಪ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. ಬಸ್‌ ನಿಲ್ದಾಣದಲ್ಲಿನ ಖಾಲಿ ಮಳಿಗೆಗಳನ್ನು ನೋಡಿ, ಯಾವುದೇ ವಾಣಿಜ್ಯ ಮಳಿಗೆಯೂ ಖಾಲಿ ಬಿಡದೆ ವ್ಯಾಪಾರಿಗಳಿಗೆ ನೀಡಲು ಕ್ರಮವಹಿಸುವಂತೆ ತಿಳಿಸಿದ ರಾಮಲಿಂಗಾರೆಡ್ಡಿ, ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಕಟ್ಟಡಗಳ ಮೇಲೆ ಬೆಳೆದಿರುವ ಗಿಡಗಳನ್ನು ತೆರವು ಮಾಡಿ ಸ್ವಚ್ಛಗೊಳಿಸುವಂತೆ ನಿರ್ದೇಶಿಸಿದರು.