ನವೆಂಬರ್‌ನಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ತಾನು ಯಾವುದೇ ಬಣಕ್ಕೆ ಸೇರಿಲ್ಲ, ಕಾಂಗ್ರೆಸ್ ಬಣಕ್ಕೆ ಸೇರಿದವನು ಎಂದ ಅವರು, ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸಲಿದೆ ಮತ್ತು ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.

ರಾಮನಗರ (ನ.22): ನವೆಂಬರ್‌ನಲ್ಲಿ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಓನ್ಲಿ ಶಾಂತಿ. ನಿಮಗೆ ಏನೇ ಮಾಹಿತಿ ಬೇಕಿದ್ದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕೇಳಿ ಪಡೆದುಕೊಳ್ಳಿ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು, ಏಕೆ ದೆಹಲಿಗೆ ಹೋಗಿದ್ದಾರೋ ಗೊತ್ತಿಲ್ಲ. ಅಲ್ಲಿ ಏನೇನು ಆಗಿದಿಯೋ ಅದೂ ಗೊತ್ತಿಲ್ಲ. ನಾಯಕತ್ವ ಬದಲಾವಣೆ ಹಾಗೂ ದಲಿತ ಸಚಿವರು ಸಭೆ ಮಾಡಿರುವುದು ಸಹ ನನಗೆ ಗೊತ್ತಿಲ್ಲ. 4 ಜನ ಊಟಕ್ಕೆ ಸೇರಿಕೊಂಡರೆ ಅದರ ಬಗ್ಗೆ ಮಾತನಾಡಲು ಆಗುತ್ತದೆಯೇ ಎಂದರು.

ನಾನು ಯಾವ ಬಣವೂ ಅಲ್ಲ, ಕಾಂಗ್ರೆಸ್ ಬಣ. ಹತ್ತಾರು ಹಿರಿಯ ನಾಯಕರು ಇರುವುದರಿಂದ ಕಾಂಗ್ರೆಸ್ ಸದೃಢವಾಗಿದೆ. ಸರ್ಕಾರದಲ್ಲಿ ಯಾರೂ ಗೊಂದಲ ಮಾಡಿಕೊಳ್ಳಬಾರದು. ಎಲ್ಲವನ್ನೂ ಹೈಕಮಾಂಡ್ ತೀರ್ಮಾನಕ್ಕೆ ಬಿಡಬೇಕು ಎಂದರು.

ಬಿಜೆಪಿಯಲ್ಲೇ ನಾಲ್ಕೈದು ಬಣಗಳು:

ಬಿಜೆಪಿಯಲ್ಲಿ ನಾಲ್ಕೈದು ಬಣಗಳಿದ್ದು, ಅಲ್ಲಿ ವಿಜಯೇಂದ್ರ ನಾಯಕತ್ವವನ್ನು ಯಾರೂ ಒಪ್ಪುತ್ತಿಲ್ಲ. ನಮ್ಮಲ್ಲಿ ಕಾಂಗ್ರೆಸ್ ಬಣ ಮಾತ್ರ ಇದೆ.

ಐದು ವರ್ಷ ಕಾಂಗ್ರೆಸ್ ಅಧಿಕಾರ ನಡೆಸುತ್ತೆ:

ಸರ್ಕಾರದಲ್ಲಿ ಎರಡನೇ ಇನಿಂಗ್ಸ್ ಅಂತಾ ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ ಮಾಡಲಿದೆ. ಸಿದ್ದರಾಮಯ್ಯನವರೆ 5 ವರ್ಷ ಸಿಎಂ ಆಗಿರುತ್ತಾರಾ ಎಂಬುದರ ಬಗ್ಗೆಯೂ ನನಗೆ ಗೊತ್ತಿಲ್ಲ. 5 ವರ್ಷವೂ ಸರ್ಕಾರ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.