ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ: ಸಚಿವ ರಾಜಣ್ಣ ಅಸಮಾಧಾನ
ಜೆಡಿಎಸ್‌ನ ಮಾಜಿ ಶಾಸಕರಾದ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬಹಿರಂಗವಾಗಿಯೇ ಅಸಮಾಧಾನ, ವಿರೋಧ ವ್ಯಕ್ತಪಡಿಸಿದ ಸಚಿವ ಕೆ.ಎನ್.ರಾಜಣ್ಣ
ಹಾಸನ(ನ.16): ಕಾಂಗ್ರೆಸ್ ಪಕ್ಷ ಒಂದು ರೀತಿ ಸಮುದ್ರ ಇದ್ದಂತೆ. ಸಮುದ್ರಕ್ಕೆ ಗಂಗಾ ಮಾತೆಯಂತಹ ಪವಿತ್ರವಾದ ಜಲನೂ ಬರುತ್ತೆ. ಪಕ್ಕದಲ್ಲಿರುವ ಚರಂಡಿ ನೀರು ಸೇರುತ್ತದೆ. ಸಮುದ್ರದಲ್ಲಿ ವಿಷನೂ ಇದೆ, ಅಮೃತನೂ ಇದೆ. ವಿಷ ಸಿಗೋರಿಗೆ ವಿಷ ಸಿಗುತ್ತೆ, ಅಮೃತ ಸಿಗೋರಿಗೆ ಅಮೃತ ಸಿಗುತ್ತೆ. ನಮ್ಮ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಮುಖಂಡರನ್ನು ಸಂಪರ್ಕ ಮಾಡದೆ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿರುವುದಕ್ಕೆ ನಮ್ಮೆಲ್ಲರಿಗೂ ಅಸಮಾಧಾನ ಇದೆ ಇದೆ ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಬುಧವಾರ ಹಾಸನಾಂಬ ಜಾತ್ರೋತ್ಸವಕ್ಕೆ ತೆರೆ ಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ನ ಮಾಜಿ ಶಾಸಕರಾದ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬಹಿರಂಗವಾಗಿಯೇ ಅಸಮಾಧಾನ, ವಿರೋಧ ವ್ಯಕ್ತಪಡಿಸಿದರು. ಈ ವಿಚಾರವನ್ನು ನಾನು ಮಾಧ್ಯಮದ ಮೂಲಕ ತಿಳಿದುಕೊಳ್ಳುವಂತಾಯಿತು. ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಸಲೀಂ ಅಹಮದ್ ಅವರು ಫೋನ್ ಮಾಡಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಇದ್ದು, ಅಧ್ಯಕ್ಷರು ಬರುವುದಕ್ಕೆ ಹೇಳಿದ್ದಾರೆ ಬನ್ನಿ ಅಂದ್ರು. ಆಯ್ತು ಅಂದಿದ್ದು, ನನಗೆ ಬೇರೆ ಕಾರ್ಯಕ್ರಮ ಇತ್ತು ಬಂದಿದ್ದೀನಿ ಎಂದು ಹೇಳಿದ್ದೇನೆ. ಈ ಬಗ್ಗೆ ನನ್ನ ಜೊತೆಯೂ ಚರ್ಚೆ ಮಾಡಿಲ್ಲ, ನಮ್ಮ ಜಿಲ್ಲೆ ಮುಖಂಡರ ಜೊತೆನೂ ಚರ್ಚೆ ಮಾಡಿಲ್ಲ. ಪರಮೇಶ್ವರ್ ಆಗಲಿ, ನನಗಾಗಲಿ, ನಮ್ಮ ಜಿಲ್ಲೆಯ ಶಾಸಕರುಗಳಾಗಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ ಯಾರೂ ಕೂಡ ಬಂದು ಈ ರೀತಿ ಇದೆ, ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ, ಬೇಡವಾ ಅಂತ ಕೇಳಲೇ ಇಲ್ಲಾ. ಸೇರಿಸಿಕೊಂಡಿದ್ದರೆ ಸಂತೋಷ, ನಮಗೇನು ಅಸಮಾಧಾನ ಇಲ್ಲ. ನಮ್ಮ ಜಿಲ್ಲೆ ರಾಜಕಾರಣ ಏನೇ ಇದ್ದರೂ ಎಂತಹ ಸಂದರ್ಭ ಬಂದರೂ ನಿಭಾಯಿಸುವ ಶಕ್ತಿಯನ್ನು ನಮ್ಮ ಜಿಲ್ಲೆಯ ಜನ ಕೊಟ್ಟಿದ್ದಾರೆ.
2023ರ ಹಾಸನಾಂಬ ಜಾತ್ರಾ ಮಹೋತ್ಸವ ಸಂಪನ್ನ: ದೀಪ ಹಚ್ಚಿ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು
ಪರಮೇಶ್ವರ್‌ಗೂ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೂ ಕೊಟ್ಟಿದ್ದಾರೆ. ಎಂತಹ ಸಂದರ್ಭ ಬಂದರೂ ನಿಭಾಯಿಸಿಕೊಳ್ಳುತ್ತೇವೆ. ನಾವೇನೂ ಅಂತ ಅಶಕ್ತರೇನಲ್ಲ.
ನಾನು ಎಂಪಿ ಟಿಕೆಟ್ ಕೇಳ್ತಿನಿ, ನಿಲ್ತೀನಿ ಅಂತ ಹೇಳಿದ್ದೇನೆ. ಲೋಕಸಭೆನಲ್ಲಿ ಒಂದು ಅವಕಾಶ ಸಿಕ್ಕರೆ ನಮ್ಮ ಜಿಲ್ಲೆಯಿಂದ ಪ್ರತಿನಿಧಿಸಬೇಕು ಅಂತ ಇದ್ದೇನೆ. ನನ್ನ ಅನಿಸಿಕೆಯನ್ನು ಹೈಕಮಾಂಡ್ ಮುಂದೆ ಮಂಡಿಸಿದ್ದೇನೆ. ಹೈಕಮಾಂಡ್‌ನವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ನಿಲ್ಲು ಎಂದರೆ ನಿಲ್ಲುತ್ತೇನೆ. ಮಂತ್ರಿಯಾಗಿರು ಅಂದ್ರೆ ಮಂತ್ರಿಯಾಗಿ ಇರ್ತಿನಿ. ಮುದ್ದಹನುಮೇಗೌಡರು ಪಕ್ಷಕ್ಕೆ ಬರ್ತಾರೆ ಅನ್ನೋದನ್ನ ಖಚಿತವಾಗಿ ಹೇಳಲು ಆಗಲ್ಲ. ಅವರ ಬಹಳಷ್ಟು ಸ್ನೇಹಿತರು ಬರುವ ಇಂಗಿತವನ್ನು ತೋರಿಸಿದ್ದಾರೆ. ಬಂದೋರೆಲ್ಲಾ ಆಕಾಂಕ್ಷಿಗಳಿರುತ್ತಾರೆ ಎಂದು ವ್ಯಂಗ್ಯವಾಗಿ ಮಾತನಾಡಿದರು.