2023ರ ಹಾಸನಾಂಬ ಜಾತ್ರಾ ಮಹೋತ್ಸವ ಸಂಪನ್ನ: ದೀಪ ಹಚ್ಚಿ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು
ಕಳೆದ 14 ದಿನಗಳ ಕಾಲ ಲಕ್ಷಾಂತರ ಭಕ್ತರ ದರ್ಶನಕ್ಕೆ ಮುಕ್ತವಾಗಿದ್ದ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ ಮುಚ್ಚಲಾಯಿತು.
ಹಾಸನ (ನ.15): ಕಳೆದ 14 ದಿನಗಳಿಂದ (ನ.2ರಿಂದ ನ.15ರವರೆಗೆ) ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ಪವಾಡ ಸದೃಶ ಹಾಸನಾಂಬ ದೇವಿಯ ಗರ್ಭಗುಡಿಯನ್ನು ಇಂದು (ಬುಧವಾರ ಮಧ್ಯಾಹ್ನ 12.23ಕ್ಕೆ) ಗಣ್ಯರ ಸಮ್ಮುಖದಲ್ಲಿ ಮುಚ್ಚಲಾಯಿತು. ಈ ಮೂಲಕ 2023ರ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ರಾಜ್ಯದಲ್ಲಿ ಒಮ್ಮೆ ಹಚ್ಚಿದ ದೀಪ ಒಂದು ವರ್ಷದವರೆಗೆ ಪ್ರಜ್ವಲಿಸುತ್ತಾ ಉರಿಯುವಂತಹ ಪವಾಡಕ್ಕೆ ಪ್ರಸಿದ್ಧಿಯಾಗಿರುವ ಹಾಸನ ನಗರದ ಹಾಸನಾಂಬೆ ದೇವಸ್ಥಾನ ವರ್ಷಕ್ಕೆ ಕೇವಲ 15 ದಿನ ಮಾತ್ರ ಭಕ್ತರ ದರ್ಶನಕ್ಕೆ ಮುಕ್ತವಾಗಿರುತ್ತದೆ. ಇದೇ ವೇಳೆ ಹಾಸನಾಂಬ ಜಾತ್ರಾ ಮಹೋತ್ಸವವನ್ನೂ ನಡೆಸಲಾಗುತ್ತದೆ. ಇನ್ನು 2023ರ ಹಾಸನಾಂಬ ದೇವಿಯ ದರ್ಶನವು ನವೆಂಬರ್ 2ರಿಂದ ಆರಂಭವಾಗಿ ನವೆಂಬರ್ 15ರ ಮಧ್ಯಾಹ್ನಕ್ಕೆ ಮುಕ್ತಾಯವಾಗಿದೆ. ಇಂದು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮಾ ನೇತೃತ್ವದಲ್ಲಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು.
ಹಾಸನಾಂಬ ದೇವಾಲಯಕ್ಕೆ ವಿವಿಐಪಿ ಶಿಷ್ಟಾಚಾರ ದರ್ಶನ ರದ್ದುಗೊಳಿಸಿದ ಜಿಲ್ಲಾಡಳಿತ
ಈ ವರ್ಷದ ಹಾಸನಾಂಬೆ ದರ್ಶನ ಸಂಪನ್ನವಾಗಿದೆ. ಇಂದು ಮಧ್ಯಾಹ್ನ 12.23ಕ್ಕೆ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು. ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಬಳಿಕ ಅರ್ಚಕರು ಹಾಗು ಅಧಿಕಾರಿಗಳು ಗರ್ಭಗುಡಿಯಿಂದ ಹೊರ ಬಂದರು. ಈ ವೇಳೆ ಕೊನೆಯ ಹಂತದಲ್ಲಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಕೊನೆ ಹಂತದಲ್ಲಿ ಹಾಸನಾಂಬೆಯ ದರ್ಶನ ಪಡೆದರು. ನಂತರ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತುಯ. ಇದರೊಂದಿಗೆ ಈ ವರ್ಷ ದ 14 ದಿನಗಳ ಹಾಸನಾಂಬೆ ಉತ್ಸವಕ್ಕೆ ವಿದ್ಯುಕ್ತ ತೆರೆ ಎಳೆಯಲಾಯಿತು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಗರ್ಭಗುಡಿ ಬಾಗಿಲು ಬಂದ್ ಮಾಡಲಾಯಿತು. ಹಾಸನಾಂಬೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರು ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿ ಬೀಗ ಹಾಕಿದರು. ಈ ವೇಳೆ ಅರ್ಚಕರು ಎಲ್ಲರ ಮುಂದೆ ಬೀಗ ಪ್ರದರ್ಶನ ಮಾಡಿ ಬಾಗಿಲಿಗೆ ಬೀಗ ಹಾಕಿದರು.