Asianet Suvarna News Asianet Suvarna News

ಪ್ರಧಾನಿ ಮೋದಿ ಇನ್ನು 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುತ್ತಾರೆ: ಸಚಿವ ಅಶೋಕ್‌

ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ 15 ದಿನಕ್ಕೊಮ್ಮೆ ಕರ್ನಾಟಕಕ್ಕೆ ಬರುತ್ತಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು. 

Minister R Ashok Talks About PM Narendra Modi At Tumakuru gvd
Author
First Published Dec 11, 2022, 12:29 PM IST

ತುಮಕೂರು (ಡಿ.11): ಮುಂಬರುವ ವಿಧಾನಸಭಾಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ 15 ದಿನಕ್ಕೊಮ್ಮೆ ಕರ್ನಾಟಕಕ್ಕೆ ಬರುತ್ತಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರತಿ ತಿಂಗಳು ನಾಲ್ಕು ಬಾರಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದೇ ತಿಂಗಳು ಕೇಂದ್ರದ ನಾಯಕರೆಲ್ಲ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿನ ಮಾನದಂಡಗಳು ಏನು, ಚುನಾವಣೆ ಎದುರಿಸಲು ಏನೇನು ಮಾಡಬೇಕು ಎಂಬುದನ್ನು ಮೋದಿ, ಶಾ ಅವರು ತೀರ್ಮಾನಿಸುತ್ತಾರೆ ಎಂದರು.

ಇದೇ ವೇಳೆ ಕರ್ನಾಟಕದಲ್ಲೂ ಟಿಕೆಟ್‌ ಹಂಚಿಕೆ ವಿಚಾರವಾಗಿ ಗುಜರಾತ್‌ ಮಾದರಿ ಅನುಸರಿಸುವ ಕುರಿತ ಪ್ರಶ್ನೆಗೆ ಗುಜರಾತ್‌ ಮಾದರಿ ಗುಜರಾತ್‌ನಲ್ಲೇ, ಕರ್ನಾಟಕ ಮಾದರಿ ಕರ್ನಾಟಕದಲ್ಲೇ ಎಂದು ಅಶೋಕ್‌ ಸ್ಪಷ್ಟಪಡಿಸಿದರು. ಈ ಮೂಲಕ ಗುಜರಾತ್‌ನಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ಅನುಸರಿಸಿದ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸುವ ಸಾಧ್ಯತೆಯನ್ನು ತಳ್ಳಿಹಾಕಿದರು. ದಲಿತ ಸಿಎಂ ವಿಚಾರದ ಕುರಿತೂ ಪ್ರತಿಕ್ರಿಯಿಸಿದ ಅವರು, ಇದನ್ನು ಪಕ್ಷದ ವರಿಷ್ಠರೇ ತೀರ್ಮಾನಿಸುತ್ತಾರೆ. ಕರ್ನಾಟಕದಲ್ಲಿ ಎಲ್ಲಾ ಜಾತಿ, ಸಮುದಾಯದವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಯಾರೂ ದಲಿತ ಸಿಎಂ ಆಗಬೇಕು ಅಂತ ನಮ್ಮಲ್ಲಿ ಬೇಡಿಕೆ ಇಟ್ಟಿಲ್ಲ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರಾಜ್ಯದ ಎಸ್‌ಸಿ, ಎಸ್‌ಟಿ ಮೀಸಲಿಗೆ ಕೇಂದ್ರ ಸರ್ಕಾರದಿಂದ ಕೊಕ್ಕೆ: ಸಿದ್ಧರಾಮಯ್ಯ

ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ: ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ಸಾಧ್ಯತೆಯನ್ನು ಕಂದಾಯ ಸಚಿವ ಆರ್‌.ಅಶೋಕ್‌ ತಳ್ಳಿಹಾಕಿದ್ದಾರೆ. ರೆಡ್ಡಿ ಹೊಸ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ, ಅವೆಲ್ಲ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ರೆಡ್ಡಿ ಅವರು ಹೊಸ ಪಕ್ಷ ಕಟ್ಟಿಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂಬ ಊಹಾಪೋಹಗಳಿಗೆ ಸಂಬಂಧಿಸಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಈ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ, ನಾನು ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿದ್ದೇವೆ. ರೆಡ್ಡಿ ಹೊಸ ಪಕ್ಷ ಕಟ್ಟುವುದೆಲ್ಲ ಶುದ್ಧ ಸುಳ್ಳು. ಹಿಂದೆ ಕೂಡ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮುಂದೆಯೂ ಬೆಂಬಲ ನೀಡುತ್ತಾರೆ ಎಂದು ಅಶೋಕ್‌ ಹೇಳಿದರು.

ಆಡಳಿತ ಯಂತ್ರ ಚುರುಕಿಗೆ ಎಲ್ಲ ರೀತಿಯ ಸಹಕಾರ: ಶಿರಾ ನಗರದ ತಾಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದ ಪಕ್ಕದಲ್ಲಿ ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಸುಮಾರು 1.60 ಕೋಟಿ ವೆಚ್ಚದಲ್ಲಿ ಸರ್ಕಾರ ತಾಲೂಕು ಸಬ್‌ರಿಜಿಸ್ಟಾರ್‌ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಆಡಳಿತ ಯಂತ್ರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಶಿರಾ ನಗರದ ಬುಕ್ಕಾಪಟ್ಟಣ ರಸ್ತೆಯ ತಾಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದ ಸಮೀಪ ನಿರ್ಮಾಣಕ್ಕೆ ಉದ್ದೇಶಿಸಿರುವ ಸಬ್‌ ರಿಜಿಸ್ಟಾರ್‌ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸರ್ಕಾರದ ಖಜಾನೆ ಖಾಲಿಯಾಗಿಲ್ಲ, ಆರ್ಥಿಕವಾಗಿ ಸದೃಢ: ಸಚಿವ ಅಶೋಕ್‌

ಇದು ಶಾಸಕ ಡಾ.ಎಂ.ಸಿ. ರಾಜೇಶಗೌಡ ಕೋರಿಕೆಯ ಮೇರೆಗೆ ಬಿಡುಗಡೆಯಾದ ಅನುದಾನದಲ್ಲಿ ನಿರ್ಮಿಸಲಿರುವ ಕಟ್ಟಡ. ಜನರಿಗೆ ಅನುಕೂಲವಾಗುವಂತೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಶಾಸಕರ ಕೋರಿಕೆಯಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಶಿರಾ ಶಾಸಕ ಡಾ.ಎಂ.ಸಿ.ರಾಜೇಶಗೌಡ ಒರ್ವ ಸಜ್ಜನ ರಾಜಕಾರಣಿ, ಸೌಮ್ಯ ಸ್ವಭಾವದ ಜೊತೆಗೆ, ಸರಳ ಸಜ್ಜನಿಕೆಗೆ ಹೆಸರಾದವರು. ಸರ್ಕಾರದಿಂದ ಕ್ಷೇತ್ರದಲ್ಲಿ ಯಾವುದೆ ಕೆಲಸ ಕಾರ್ಯವಾಗಬೇಕಾದರೂ, ಸಂಬಂಧಪಟ್ಟಸಚಿವರು, ಅಧಿಕಾರಿಗಳ ಗಮನಕ್ಕೆ ತಂದು, ತ್ವರಿತವಾಗಿ ಕಾರ್ಯಕ್ರಮಗಳಿಗೆ ಅನುಮೋದನೆ ಪಡೆಯುವ ಕೆಲಸ ಮಾಡುತ್ತಾರೆ. ಸರ್ಕಾರದ ಮುಂದೆ ಶಾಸಕರು ಇನ್ನೂ ಹಲವು ಬೇಡಿಕೆಗಳಿವೆ. ಹಂತ ಹಂತವಾಗಿ ಅವುಗಳನ್ನು ಸರ್ಕಾರ ಕಾರ್ಯರೂಪಕ್ಕೆ ತರಲಿದೆ ಎಂದು ಸಚಿವ ಆರ್‌.ಅಶೋಕ್‌ ನುಡಿದರು.

Follow Us:
Download App:
  • android
  • ios