Asianet Suvarna News Asianet Suvarna News

ಸರ್ಕಾರದ ಖಜಾನೆ ಖಾಲಿಯಾಗಿಲ್ಲ, ಆರ್ಥಿಕವಾಗಿ ಸದೃಢ: ಸಚಿವ ಅಶೋಕ್‌

ವಿರೋಧ ಪಕ್ಷಗಳು ಸರ್ಕಾರ ದಿವಾಳಿ ಆಗಿದೆ. ಖಜಾನೆಯಲ್ಲಿ ಹಣ ಇಲ್ಲ ಎಂದು ಸುಳ್ಳು ಆರೋಪ ಮಾಡುತ್ತಿವೆ. ಆದರೆ, ವಿರೋಧ ಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. 

Government treasury is not empty Says minister Says Minister R Ashok gvd
Author
First Published Nov 28, 2022, 2:00 AM IST

ಚಿಕ್ಕಬಳ್ಳಾಪುರ (ನ.28): ವಿರೋಧ ಪಕ್ಷಗಳು ಸರ್ಕಾರ ದಿವಾಳಿ ಆಗಿದೆ. ಖಜಾನೆಯಲ್ಲಿ ಹಣ ಇಲ್ಲ ಎಂದು ಸುಳ್ಳು ಆರೋಪ ಮಾಡುತ್ತಿವೆ. ಆದರೆ, ವಿರೋಧ ಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಕಷ್ಟು ಹಣ ಅವರ ಪಿಡಿ ಖಾತೆಗಳಲ್ಲಿ ಜಮಾ ಆಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಜಿಲ್ಲೆಯ ಜರಬಂಡಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮ ವಾಸ್ತವ್ಯ ಮುಗಿದ ಬಳಿಕ ಗ್ರಾಮದಲ್ಲಿ 216 ರೈತರಿಗೆ ಪೌತಿ ಖಾತೆಯ ಪಹಣಿಗಳನ್ನು ವಿತರಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿರುವ 3,976 ರೈತರಿಗೆ 5.38 ಕೋಟಿ ರು.ಗಳಷ್ಟುಬೆಳೆ ನಷ್ಟಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆಗೆ 435 ಮನೆಗಳಿಗೆ ಹಾನಿ ಆಗಿದ್ದು, ಆ ಕುಟುಂಬಸ್ಥರಿಗೆ ಪರಿಹಾರವಾಗಿ 3.69 ಕೋಟಿ ರು.ಅನುದಾನ ನೀಡಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 1,225 ಜನ ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ 9.9 ಕೋಟಿ ರು.ಪರಿಹಾರ ವಿತರಿಸಲಾಗಿದೆ. ತಂದೆ, ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ದತ್ತು ತೆಗೆದುಕೊಂಡು ಶಿಕ್ಷಣದಿಂದ ಹಿಡಿದು ಅವರ ಎಲ್ಲಾ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ ಎಂದರು.

ಮಂಚೇನಹಳ್ಳಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಸಚಿವ ಅಶೋಕ್‌ ಘೋಷಣೆ

ಈ ಹಿಂದೆ ವರ್ಷವಾದರೂ ಬೆಳೆ ಹಾನಿ ಪರಿಹಾರ ಬರುತ್ತಿರಲಿಲ್ಲ. ಈಗ ಒಂದು ತಿಂಗಳಲ್ಲಿಯೇ ರೈತರಿಗೆ ಬೆಳೆ ಹಾನಿಯ ಪರಿಹಾರ ನೀಡುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ. ನೇರವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ರೈತರಿಗೆ ಬಹಳ ವರ್ಷಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ಪೌತಿ ಖಾತೆಯನ್ನು ಒಂದು ಆಂದೋಲನವಾಗಿ ರೂಪಿಸಿ, ರೈತರಿಗೆ ಶೀಘ್ರವೇ ಪೌತಿ ಖಾತೆ ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಪಿಂಚಣಿಗೆ 290 ಕೋಟಿ ರು. ನೀಡಲಾಗುತ್ತಿದೆ. ಡಾ.ಕೆ. ಸುಧಾಕರ್‌ ಅವರು ಈ ಭಾಗದಲ್ಲಿ ಒಳ್ಳೆಯ ಕಾರ್ಯ ಮಾಡಿ ಮನೆ ಮಾತಾಗಿದ್ದಾರೆ. ಪ್ರತಿ ಮನೆಗೂ ಆರೋಗ್ಯ ಕಾರ್ಡ್‌ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಜಮೀನು ಮಾರಬೇಡಿ: ರೈತರು ಪೌತಿ ಖಾತೆ ಆಂದೋಲನದ ಲಾಭ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾರಿಗೂ ಜಮೀನು ಮಾರಾಟ ಮಾಡದೇ ದಾಖಲೆಗಳನ್ನು ನಿಮ್ಮ ಮಕ್ಕಳ ಹೆಸರಲ್ಲಿ ಮಾಡಿಸಿ, ಅವರ ಭವಿಷ್ಯವನ್ನು ಭದ್ರಪಡಿಸಿ ಎಂದು ರೈತರಿಗೆ ಸಲಹೆ ನೀಡಿದರು. ಪೌತಿ ಖಾತೆ ಆಂದೋಲನವನ್ನು ಇನ್ನಷ್ಟು ಚುರುಕುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ಗೊಲ್ಲಹಳ್ಳಿ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ: ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಕಂದಾಯ ಸಚಿವ ಆರ್‌.ಅಶೋಕ್‌ಗೆ ಗೊಲ್ಲಹಳ್ಳಿ ಗ್ರಾಮಸ್ಥರು, ನಮ್ಮೂರಲ್ಲಿ ನ್ಯಾಯ ಬೆಲೆ ಅಂಗಡಿ ಇಲ್ಲ. ಪಡಿತರಕ್ಕೆ ಬೇರೆ ಊರಿಗೆ ಹೋಗಬೇಕು. ನಮ್ಮೂರಲ್ಲಿಯೆ ನ್ಯಾಯ ಬೆಲೆ ಅಂಗಡಿ ತೆರೆದರೆ ನಮಗೆ ಅನುಕೂಲವಾಗುತ್ತದೆ ಎಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಅಶೋಕ್‌, ಗ್ರಾಮದಲ್ಲಿಯೆ ನ್ಯಾಯಬೆಲೆ ಅಂಗಡಿ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

Grama Vastavya: ಸ್ಮಶಾನ ಸಮಸ್ಯೆಗೆ ಐದೇ ನಿಮಿಷದಲ್ಲಿ ಸಚಿವ ಅಶೋಕ್‌ ಪರಿಹಾರ!

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ದ್ರಾಕ್ಷಿ ಬೋರ್ಡ್‌ನ ಅಧ್ಯಕ್ಷ ರವಿನಾರಾಯಣರೆಡ್ಡಿ, ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌, ಜಿಪಂ ಸಿಇಒ ಪಿ.ಶಿವಶಂಕರ್‌, ಎಸ್ಪಿ ಡಿ.ಎಲ್‌.ನಾಗೇಶ್‌, ಉಪ ವಿಭಾಗಾಧಿಕಾರಿ ಡಾ.ಸಂತೋಷ್‌ ಕುಮಾರ್‌, ಗೌರಿಬಿದನೂರು ತಹಶೀಲ್ದಾರ್‌ ಶ್ರೀನಿವಾಸ್‌ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios