ರಾಜ್ಯದ ಎಸ್‌ಸಿ, ಎಸ್‌ಟಿ ಮೀಸಲಿಗೆ ಕೇಂದ್ರ ಸರ್ಕಾರದಿಂದ ಕೊಕ್ಕೆ: ಸಿದ್ಧರಾಮಯ್ಯ
ಮೀಸಲಾತಿ ಪ್ರಮಾಣವನ್ನು ಶೇ.50 ಕ್ಕಿಂತ ಮೇಲೆ ಹೆಚ್ಚಿಸುವ ಪ್ರಸ್ತಾಪವಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸಚಿವರೇ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಕುರಿತ ಬಿಜೆಪಿ ರಾಜಕೀಯ ನಾಯಕರ ಪ್ರಚಾರದ ಬಲೂನ್‌ಗೆ ಕೇಂದ್ರವೇ ಸೂಜಿ ಚುಚ್ಚಿದೆ.
ಬೆಂಗಳೂರು (ಡಿ.11): ‘ಮೀಸಲಾತಿ ಪ್ರಮಾಣವನ್ನು ಶೇ.50 ಕ್ಕಿಂತ ಮೇಲೆ ಹೆಚ್ಚಿಸುವ ಪ್ರಸ್ತಾಪವಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸಚಿವರೇ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಕುರಿತ ಬಿಜೆಪಿ ರಾಜಕೀಯ ನಾಯಕರ ಪ್ರಚಾರದ ಬಲೂನ್‌ಗೆ ಕೇಂದ್ರವೇ ಸೂಜಿ ಚುಚ್ಚಿದೆ. ರಾಜ್ಯ ಬಿಜೆಪಿಯ ಬಣ್ಣವನ್ನು ಕೇಂದ್ರ ಸರ್ಕಾರವೇ ಬಯಲು ಮಾಡಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
‘ಎಸ್ಸಿ, ಎಸ್ಟಿ ಸಮುದಾಯದವರ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾದ ಕಾಳಜಿ ಇದ್ದರೆ ತಕ್ಷಣ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮೀಸಲಾತಿ ಮಿತಿ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ ಯಾವ ಕರ್ಮಕ್ಕೆ ಡಬಲ್ ಎಂಜಿನ್ ಸರ್ಕಾರ?’ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಹೈಕಮಾಂಡ್ ಹೇಳಿದರೆ ವರುಣದಿಂದಲೇ ಸ್ಪರ್ಧೆ: ಸಿದ್ದರಾಮಯ್ಯ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಬಿಜೆಪಿಯವರಿಗೆ ಪ್ರಧಾನ ಮಂತ್ರಿಯವರ ಜೊತೆ ಮಾತನಾಡುವ ಧೈರ್ಯ ಇಲ್ಲದಿದ್ದರೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲಿ. ನಾವು ಮೀಸಲಾತಿ ಹೆಚ್ಚಳದ ಅವಶ್ಯಕತೆ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಇದನ್ನು ಬಿಟ್ಟು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಬಣ್ಣ ಬಯಲು ಮಾಡಿಕೊಳ್ಳಬೇಡಿ ಎಂದು ಕಿಡಿ ಕಾರಿದ್ದಾರೆ.
ರಾಜಕೀಯ ಉದ್ದೇಶ: ಕೇಂದ್ರವು ಮೀಸಲಾತಿಗೆ ಇರುವ ಶೇ.50 ರಷ್ಟುಮಿತಿಯನ್ನು ಸಡಿಲಗೊಳಿಸುವ ಪ್ರಸ್ತಾವನೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾದರೆ ರಾಜ್ಯದಲ್ಲಿ ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹಾಗೂ ಎಸ್ಟಿಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ತೋರ್ಪಡಿಕೆ ತೀರ್ಮಾನಕ್ಕೆ ಕೇಂದ್ರ ಒಪ್ಪಿಗೆ ನೀಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ತನ್ಮೂಲಕ ಎಸ್ಸಿ,ಎಸ್ಟಿಮೀಸಲಾತಿ ಹೆಚ್ಚಳದ ನಿರ್ಧಾರ ಸಮುದಾಯದ ಬಗೆಗಿನ ಕಾಳಜಿಗಲ್ಲ, ಕೇವಲ ರಾಜಕೀಯ ದುರುದ್ದೇಶಕ್ಕೆ ಎಂಬುದು ಸಾಬೀತಾಗಿದೆ ಎಂದು ಹರಿಹಾಯ್ದಿದ್ದಾರೆ.
ಮರುಳು ಮಾಡಲಾಗಲ್ಲ: ‘ಶೇಕಡಾ 50ರ ಒಟ್ಟು ಮೀಸಲಾತಿ ಪ್ರಮಾಣದ ಮಿತಿಯನ್ನು ಕಿತ್ತುಹಾಕದೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮೀಸಲಾತಿ ಪ್ರಮಾಣವನ್ನು ಹೇಗೆ ಹೆಚ್ಚಿಸಲು ಸಾಧ್ಯ? ಕೆಲವರನ್ನು ಕೆಲವು ಕಾಲ ಮರುಳು ಮಾಡಬಹುದು, ಎಲ್ಲರನ್ನೂ ಎಲ್ಲ ಕಾಲದಲ್ಲಿಯೂ ಮರಳು ಮಾಡಲು ಸಾಧ್ಯವಿಲ್ಲ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವುದರಿಂದ ರಾಜ್ಯದ ಸರ್ಕಾರ ಮೊದಲು ಇದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸಬೇಕಿತ್ತು. ಈ ಕರ್ತವ್ಯದಲ್ಲಿ ರಾಜ್ಯ ಸರ್ಕಾರ ಸೋತಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ತತ್ವ ಸಿದ್ದಾಂತವೇ ಇಲ್ಲ: ಸಚಿವ ಕಾರಜೋಳ ವ್ಯಂಗ್ಯ
ಶೇಕಡಾ 50ರ ಒಟ್ಟು ಮೀಸಲಾತಿ ಪ್ರಮಾಣದ ಮಿತಿಯನ್ನು ಕಿತ್ತುಹಾಕದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೇಗೆ ಹೆಚ್ಚಿಸಲು ಸಾಧ್ಯ? ಕೆಲವರನ್ನು ಕೆಲವು ಕಾಲ ಮರುಳು ಮಾಡಬಹುದು, ಎಲ್ಲರನ್ನೂ ಎಲ್ಲ ಕಾಲದಲ್ಲಿಯೂ ಮರಳು ಮಾಡಲು ಸಾಧ್ಯವಿಲ್ಲ.
-ಸಿದ್ದರಾಮಯ್ಯ, ವಿಪಕ್ಷ ನಾಯಕ