ಸರ್ಕಾರ ಟೀಕಿಸಿದ ವ್ಯಕ್ತಿ ಎಷ್ಟು ಪಕ್ಷ ಬದಲಿಸಿದ್ದಾರೆ? : ಅಶೋಕ್ ಟಾಂಗ್
- ರಾಜ್ಯದಲ್ಲಿರುವುದು ಶುದ್ಧ ಬಿಜೆಪಿ ಸರ್ಕಾರವಲ್ಲ ಎಂದು ಹೇಳಿಕೆ ನೀಡಿರುವ ವ್ಯಕ್ತಿ ಎಷ್ಟು ಪಕ್ಷ ಬದಲಾಯಿಸಿದ್ದಾರೆ
- ಸಚಿವ ಸಿ.ಪಿ.ಯೋಗೇಶ್ವರ್‌ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್
- ಬಹಿರಂಗವಾಗಿ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ
ಬೆಂಗಳೂರು(ಮೇ.31): ರಾಜ್ಯದಲ್ಲಿರುವುದು ಶುದ್ಧ ಬಿಜೆಪಿ ಸರ್ಕಾರವಲ್ಲ ಎಂದು ಹೇಳಿಕೆ ನೀಡಿರುವ ವ್ಯಕ್ತಿ ಯಾರು? ಅವರ ಹಿನ್ನೆಲೆ ಏನು? ಎಷ್ಟುಪಕ್ಷ ಬದಲಾಯಿಸಿದವರು? ಇದಾವುದೂ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆ ಇದ್ದರೆ ನಾಲ್ಕು ಗೋಡೆ ಮಧ್ಯೆ ಅಥವಾ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಅದನ್ನು ಬಿಟ್ಟು ಹೀಗೆ ಬಹಿರಂಗವಾಗಿ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ. ಇದು ಪಕ್ಕಾ ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ, ಮೋದಿ ಸರ್ಕಾರ ಎಂದು ಹೇಳಿದರು.
ಯೋಗೇಶ್ವರ್ ವಿರುದ್ಧ ಮುಗಿಯದ ಬಿಜೆಪಿಗರ ಯುದ್ಧ .
ಸಿದ್ದು ಟೀಕೆಗೆ ತಿರುಗೇಟು: ಬಿಜೆಪಿ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಇದೇ ವೇಳೆ ಸಚಿವ ಅಶೋಕ್ ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರಿಗೂ ಸಾಕಷ್ಟುಜವಾಬ್ದಾರಿಗಳಿವೆ. ಬರೀ ಸರ್ಕಾರವನ್ನು ಟೀಕಿಸುವುದೇ ಕೆಲಸವಲ್ಲ. ಸರ್ಕಾರದ ವಿರುದ್ಧ ಟ್ವೀಟ್ ಮಾಡುವುದು ಬಿಟ್ಟರೆ ಅವರು ಬೇರೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಈ ಇಳಿ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೆಲಸ ಮಾಡುತ್ತಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ಸಿದ್ದರಾಮಯ್ಯ ಅವರು ಎಂದಾದರೂ ಭೇಟಿ ನೀಡಿದ್ದಾರಾ? ಜನರ ಸಂಕಷ್ಟಕೇಳಿದ್ದಾರಾ? ಕರೆದಲ್ಲಿಗೆ ಹೋಗಿ ಆಹಾರದ ಕಿಟ್‌ಗಳನ್ನು ವಿತರಿಸಿ ಬರುತ್ತಿದ್ದಾರೆ ಅಷ್ಟೆಎಂದು ಟೀಕಿಸಿದರು.