Asianet Suvarna News Asianet Suvarna News

ಯೋಗೇಶ್ವರ್‌ ವಿರುದ್ಧ ಮುಗಿಯದ ಬಿಜೆಪಿಗರ ಯುದ್ಧ

* ಸಿ.ಪಿ. ಯೋಗೇಶ್ವರ್‌ ವಿರುದ್ಧ ಹರಿಹಾಯ್ದ ಸಚಿವರು, ಶಾಸಕರು
* ಹಲವು ಮುಖಂಡರಿಂದ ಭಾರೀ ಟೀಕಾ ಪ್ರಹಾರ
* ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿಯಲ್ಲೇ ಕೆಲವರಿಂದ ಪ್ರಯತ್ನ 
 

BJP Leaders Slam Minister CP Yogeshwar grg
Author
Bengaluru, First Published May 29, 2021, 8:53 AM IST

ಬೆಂಗಳೂರು(ಮೇ.29): ರಾಜ್ಯದಲ್ಲಿರುವುದು ಶುದ್ಧ ಬಿಜೆಪಿ ಸರ್ಕಾರವಲ್ಲ, ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರ’ ಎಂದಿರುವ ಸಚಿವ ಸಿ.ಪಿ.ಯೋಗೇಶ್ವರ್‌ ವಿರುದ್ಧ ಇದೀಗ ಹಿರಿಯ ಮುಖಂಡರಾದ ಕಂದಾಯ ಸಚಿವ ಆರ್‌.ಅಶೋಕ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಮತ್ತಷ್ಟು ಬಿಜೆಪಿ ಮುಖಂಡರು ತಿರುಗಿಬಿದ್ದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲೇ ಸರ್ಕಾರ ಮುಂದುವರಿಯಲಿದ್ದು, ಈ ರೀತಿ ಮಾತನಾಡುವುದು ಯೋಗೇಶ್ವರ್‌ ಅವರಿಗೆ ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿಯಲ್ಲೇ ಕೆಲವರು ತೆರೆಮರೆಯಲ್ಲೇ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿರುವ ವಿದ್ಯಮಾನಕ್ಕೆ ಸಂಬಂಧಿಸಿ ಸಚಿವ ಯೋಗೇಶ್ವರ್‌ ವಿರುದ್ಧ ಗುರುವಾರವೇ ಸಚಿವ ಈಶ್ವರಪ್ಪ, ಶಾಸಕರಾದ ಅಪ್ಪಚ್ಚು ರಂಜನ್‌, ರೇಣುಕಾಚಾರ್ಯ, ರಾಜುಗೌಡ, ಪ್ರೀತಂ ಗೌಡ, ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ಮೊದಲಾದವರು ತೀವ್ರ ವಾಗ್ದಾಳಿ ನಡೆಸಿದ್ದರು. ಯೋಗೇಶ್ವರ್‌ ಅವರನ್ನು ಸಂಪುಟದಿಂದಲೇ ಕೈಬಿಡುವಂತೆ, ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದ್ದರು.

ಸಚಿವ ಕೆ.ಎಸ್‌.ಈಶ್ವರಪ್ಪ ಶುಕ್ರವಾರವೂ ವಾಗ್ದಾಳಿ ಮುಂದುವರಿಸಿದ್ದು ಅವರೊಂದಿಗೆ ಕಂದಾಯ ಸಚಿವ ಆರ್‌.ಅಶೋಕ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ತೋಟಗಾರಿಕೆ ಸಚಿವ ಆರ್‌.ಶಂಕರ್‌, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸೇರಿದಂತೆ ಹಲವು ಮುಖಂಡರು ದನಿಗೂಡಿಸಿದ್ದಾರೆ.

ಯೋಗೇಶ್ವರ್‌ ವಿರುದ್ಧ ಬಿಜೆಪಿಯಲ್ಲಿ ಭಾರೀ ಅಸಮಾಧಾನ : ಕೈ ತಪ್ಪುತ್ತಾ ಸಚಿವ ಸ್ಥಾನ?

ತಿಂದ ಅನ್ನ ಜೀರ್ಣವಾಗಲ್ಲ

ಕೆಲವರಿಗೆ ಈ ರೀತಿ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಈ ರೀತಿ ಮಾತನಾಡುವುದು ಕೆಲವರಿಗೆ ಚಟ. ಆದರೆ, ಇದರಿಂದ ಅವರಿಗೂ (ಯೋಗೇಶ್ವರ್‌) ಒಳ್ಳೆಯದಲ್ಲ. ಪಕ್ಷಕ್ಕೂ ಒಳ್ಳೆಯದಲ್ಲ. ಮತ್ತೆ ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಸಿಎಂದು ಪಕ್ಷಾತೀತ ವರ್ತನೆ

ಯಾರೇ ಆಗಲಿ ಮೂರು ಪಕ್ಷದ ಸರ್ಕಾರ ಎಂದು ಹೇಳಬಾರದು. ಸಿಎಂ ಪಕ್ಷಾತೀತವಾಗಿ ನಡೆದುಕೊಂಡಿದ್ದಾರೆ. ನಮ್ಮ ಪಕ್ಷದ ಸಚಿವರ, ಶಾಸಕರ ಮಾತನ್ನಷ್ಟೇ ಕೇಳಿದರೆ ಸಾಲದು. ವಿರೋಧ ಪಕ್ಷದ ಮುಖಂಡರ ಸಲಹೆಗಳನ್ನೂ ಕೇಳಬೇಕಾಗುತ್ತದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ. 

ಕಾರ್ಯಕರ್ತರಿಗೆ ನೋವು ಮಾಡ್ಬೇಡಿ

ಸದ್ಯಕ್ಕೆ ನಾಯಕತ್ವ ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮೆಲ್ಲಾ ಶಾಸಕರು ಸಿಎಂ ಜೊತೆ ಕಲ್ಲು ಬಂಡೆಯಂತೆ ನಿಂತಿದ್ದೇವೆ. ಯೋಗೇಶ್ವರ್‌ ಬಹಿರಂಗ ಹೇಳಿಕೆ ನೀಡಿ ಲಕ್ಷಾಂತರ ಕಾರ್ಯಕರ್ತರ ಮನಸು ನೋಯಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

ಯೋಗೇಶ್ವರ್‌ಗೆ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡುವುದಕ್ಕೆ ಸಮಾಧಾನವಿದ್ದರೆ ಸರ್ಕಾರದೊಂದಿಗೆ ಇರಲಿ, ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗಲಿ ಎಂದು ಮಾರುತ್ತರ ನೀಡಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಮುಂದಿನ ಚುನಾವಣೆಯನ್ನೂ ಅವರ ನೇತೃತ್ವದಲ್ಲೇ ಎದುರಿಸಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ. ಇದು ಯಡಿಯೂರಪ್ಪ ನೇತೃತ್ವದ ಸರ್ಕಾರ, ಬಿಜೆಪಿಯ ಸರ್ಕಾರ. ಈ ಅವಧಿಯನ್ನು ಯಡಿಯೂರಪ್ಪ ನೇತೃತ್ವದಲ್ಲಿ ಪೂರ್ಣಗೊಳಿಸುತ್ತೇವೆ.
 

Follow Us:
Download App:
  • android
  • ios