ದೇವೇಗೌಡರ ಮನೆಗೆ ಅಶೋಕ್: ಫೋನ್‌ನಲ್ಲಿ ಸಿಎಂ ಬೊಮ್ಮಾಯಿ ಕೂಡ ಮಾತು
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಆರೋಗ್ಯ ವಿಚಾರಿಸುವುದರ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು.
ಬೆಂಗಳೂರು (ಸೆ.18): ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಆರೋಗ್ಯ ವಿಚಾರಿಸುವುದರ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು. ಶನಿವಾರ ಪದ್ಮನಾಭನಗರದ ನಿವಾಸಕ್ಕೆ ತೆರಳಿದ ಆರ್.ಅಶೋಕ್ ಅವರಿಗೆ ದೇವೇಗೌಡ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ದೇವೇಗೌಡ ಅವರ ಆರೋಗ್ಯದ ಕುರಿತು ಅಶೋಕ್ ವಿಚಾರಿಸಿದರು. ಈ ವೇಳೆ ಕೆಲ ಹೊತ್ತು ರಾಜಕೀಯ ವಿದ್ಯಮಾನ ಬಗ್ಗೆ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆ ದೇವೇಗೌಡ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರೇ ವಿಚಾರಿಸಿ ಟ್ವೀಟ್ ಮಾಡಿದ್ದರು.
ನಾವು ದೇವೇಗೌಡ ಅವರ ಬಗ್ಗೆ ಕಾಳಜಿ ವಹಿಸದಿದ್ದರೆ ತಪ್ಪಾಗುತ್ತದೆ. ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬನ್ನಿ ಎಂದು ಅಶೋಕ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಅಶೋಕ್ ಅವರು ಹೋಗಿದ್ದರು. ದೇವೇಗೌಡ ಅವರ ಮನೆಯಿಂದಲೇ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಅಶೋಕ್ ನೀಡಿದರು. ದೂರವಾಣಿ ಮೂಲಕವೇ ದೇವೇಗೌಡರ ಜತೆ ಮುಖ್ಯಮಂತ್ರಿಯವರು ಮಾತನಾಡಿದರು. ಇದೇ ವೇಳೆ ಪದ್ಮನಾಭನಗರದಲ್ಲಿನ ದೇವಗಿರಿ ಶ್ರೀನಿವಾಸ ದೇವಾಲಯದ ಅಭಿವೃದ್ಧಿ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ದೇವೇಗೌಡ ಅವರು ತಿಳಿಸಿದರು. ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಅಶೋಕ್ ಆಶ್ವಾಸನೆ ನೀಡಿದರು ಎನ್ನಲಾಗಿದೆ.
Bengaluru Flood: ಕೆರೆ ಮುಚ್ಚಲು ಅನುಮತಿ ಕೊಟ್ಟವರಿಗೆ ಶಿಕ್ಷೆ ಆಗಬೇಕಲ್ಲವೇ?: ಸಚಿವ ಅಶೋಕ್
ಕುತೂಹಲ ಮೂಡಿಸಿದ ಭೇಟಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ದೇವೇಗೌಡ ಅವರ ಭೇಟಿಗೆ ಇದು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಉಭಯ ನಾಯಕ ಭೇಟಿ ಕುತೂಹಲ ಮೂಡಿಸಿದೆ.
ಒತ್ತುವರಿ ತೆರವಿಗೆ ಹಲವಾರು ಅಡ್ಡಿ: ಶ್ರೀಮಂತರು, ಐಟಿ ಬಿಟಿ ಕಂಪನಿಗಳು ಮಾಡಿರುವ ಒತ್ತುವರಿ ತೆರವಿಗೆ ಕಾಂಗ್ರೆಸ್‌ನವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ, ಬಡವರು ಮಾಡಿರುವ ಒತ್ತುವರಿ ತೆರವು ಮಾಡಿದರೆ ಮಾಧ್ಯಮಗಳು ಹಿಂದೆ ಬೀಳುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದು ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅಸಹಾಯಕತೆ ತೋಡಿಕೊಂಡ ಘಟನೆ ಶುಕ್ರವಾರ ನಡೆಯಿತು.
ಮಳೆ ಹಾನಿ ವಿಚಾರ ಕುರಿತು ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಅವರು, ಹಿಂದಿನಿಂದಲೂ ಎಲ್ಲಾ ಸರ್ಕಾರಗಳೂ ಬೆಂಗಳೂರಲ್ಲಿ ಮಳೆ ಬಂದಾಗ ಮಾತ್ರ ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ಎಲ್ಲ ಒತ್ತುವರಿಗಳನ್ನೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡುವುದಾಗಿ ಹೇಳುತ್ತವೆ. ಮೂರ್ನಾಲ್ಕು ದಿನ ತೆರವು ಮಾಡಿ ಆ ಮೇಲೆ ಸುಮ್ಮನಾಗುತ್ತವೆ. ಈಗಿನ ಸರ್ಕಾರ ಹಾಗೆ ಮಾಡಬಾರದು. ಎಲ್ಲ ಒತ್ತುವರಿಗಳನ್ನೂ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಆನ್‌ಲೈನ್ ಆಸ್ತಿ ನೋಂದಣಿಗಾಗಿ ನ.1ರಿಂದ ಕಾವೇರಿ-2 ತಂತ್ರಾಂಶ: ಸಚಿವ ಅಶೋಕ್
ಈ ವೇಳೆ, ಮಧ್ಯಪ್ರವೇಶಿಸಿದ ಸಚಿವ ಅಶೋಕ್ ಅವರು, ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ಗುರುವಾರ ಸದನದಲ್ಲಿ ಆಡಿ ಮಾತುಗಳನ್ನು ಉಲ್ಲೇಖಿಸಿ ಕಾಂಗ್ರೆಸ್‌ನವರು ಐಟಿ ಬಿಟಿಯವರ ಮೇಲೆ ಏಕೆ ನಿಮ್ಮ ಕಣ್ಣು ಅಂತಾರೆ. ಶ್ರೀಮಂತರು ಮಾಡಿರುವ ಒತ್ತವರಿ ತೆರವಿಗೆ ವಿರೋಧ ವ್ಯಕ್ತವಾಗುತ್ತದೆ. ಬಡವರ ಒತ್ತುವರಿ ತೆರವು ಮಾಡಲು ಹೋದರೆ ಮಾಧ್ಯಮಗಳು ಹಿಂದೆ ಬೀಳುತ್ತಿವೆ. ಸರ್ಕಾರಕ್ಕೆ ಒತ್ತುವರಿ ತೆರವು ಕಾರ್ಯಾಚರಣೆ ದೊಡ್ಡ ಸಮಸ್ಯೆಯಾಗಿದೆ ಎಂದರು.