Asianet Suvarna News Asianet Suvarna News

ಆನ್‌ಲೈನ್‌ ಆಸ್ತಿ ನೋಂದಣಿಗಾಗಿ ನ.1ರಿಂದ ಕಾವೇರಿ-2 ತಂತ್ರಾಂಶ: ಸಚಿವ ಅಶೋಕ್‌

ಆಸ್ತಿ ನೋಂದಣಿಗಾಗಿ ಜನ ಅಲೆಯುವುದನ್ನು ತಪ್ಪಿಸಲು ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಅಭಿವೃದ್ಧಿಪಡಿಸಿದ ‘ಕಾವೇರಿ-2’ ಎಂಬ ತಂತ್ರಾಂಶವನ್ನು ನ.1ರಿಂದ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. 

Kaveri 2 software for online property registration from November 1 r ashok gvd
Author
First Published Sep 6, 2022, 5:16 AM IST

ಬೆಂಗಳೂರು (ಸೆ.06): ಆಸ್ತಿ ನೋಂದಣಿಗಾಗಿ ಜನ ಅಲೆಯುವುದನ್ನು ತಪ್ಪಿಸಲು ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಅಭಿವೃದ್ಧಿಪಡಿಸಿದ ‘ಕಾವೇರಿ-2’ ಎಂಬ ತಂತ್ರಾಂಶವನ್ನು ನ.1ರಿಂದ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಕಾವೇರಿ-2 ತಂತ್ರಾಂಶ ಪ್ರಾಯೋಗಿಕವಾಗಿ ಜಾರಿಗೆ ಸಿದ್ಧತೆ ಕೈಗೊಳ್ಳಲಾಗಿದೆ. 

ಕಾವೇರಿ-2 ತಂತ್ರಾಂಶದ ಮೂಲಕ ಜನರು ಅನ್‌ಲೈನ್‌ಲ್ಲಿ ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜತೆ ಸಲ್ಲಿಸುವ ದಾಖಲೆಗಳನ್ನು ಉಪನೋಂದಣಾಧಿಕಾರಿಗಳು ಪರಿಶೀಲಿಸುತ್ತಾರೆ, ಅದರಲ್ಲಿ ಸಮಸ್ಯೆ ಮತ್ತು ತಪ್ಪುಗಳಿದ್ದರೆ ಅರ್ಜಿದಾರರಿಗೆ ಮಾಹಿತಿ ನೀಡಲಿದ್ದಾರೆ. ಬಳಿಕ ದಾಖಲೆ ಪತ್ರದ ನೋಂದಣಿಗೆ ಸಮಯ ನಿಗದಿ ಮಾಡಲಾಗುತ್ತದೆ. ನಿಗದಿಗೊಳಿಸಿದ ದಿನದಂದು ಅರ್ಜಿದಾರರು ಹೋದಲ್ಲಿ ಅವರ ಹೆಬ್ಬೆಟ್ಟು ಗುರುತು ಮತ್ತು ಸಹಿ ಪಡೆದು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ವಿವರಿಸಿದರು.

ಗ್ರಾಮ ವಾಸ್ತವ್ಯದಲ್ಲಿ ಶಾಸಕರ ಹಾಜರಿ ಕಡ್ಡಾಯ?: ಸಚಿವ ಅಶೋಕ್‌

ನೋಂದಣಿ ಬಳಿಕ ಅದರ ಪ್ರತಿಯನ್ನು ಪಡೆಯಲು ಅರ್ಜಿದಾರರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾಯಬೇಕಿಲ್ಲ. ಬದಲಿಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಜಿದಾರರ ಡಿಜಿ ಲಾಕರ್‌ಗೆ ಅದರ ಪ್ರತಿ ರವಾನೆಯಾಗುತ್ತದೆ. ಡಿಜಿ ಲಾಕರ್‌ ಸುರಕ್ಷಿತವಾಗಿರುವುದರಿಂದ ನೋಂದಣಿ ದಾಖಲೆಯನ್ನು ಬೇರೆಯವರು ಪಡೆಯಲು ಸಾಧ್ಯವಿಲ್ಲ. ಇದರಿಂದ ಆಸ್ತಿ ನೋಂದಣಿಯಲ್ಲಿ ನಾಗರಿಕರಿಗೆ ಆಗುವ ಅಕ್ರಮ ಮತ್ತು ವಂಚನೆಯನ್ನು ತಡೆಯಬಹುದಾಗಿದೆ. ನೋಂದಣಿ ಪ್ರಕ್ರಿಯೆಯ ಪ್ರತಿ ಹಂತದಲ್ಲಿಯೂ ನಾಗರಿಕರ ಮೊಬೈಲ್‌ ಸಂಖ್ಯೆ ಸಂದೇಶ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಈ ನಡುವೆ, ಮನೆ, ಕಟ್ಟಡ, ನಿವೇಶನ ಮತ್ತು ಜಮೀನು ಖರೀದಿಯಲ್ಲಿ ಯಾರೂ ಮೋಸ ಹೋಗದಂತೆ ತಡೆಯಲು ಸರ್ಕಾರವೇ ಏಜೆನ್ಸಿಗಳನ್ನು ಪ್ರಾರಂಭಿಸಲಿದೆ. ಇದರ ರೂಪುರೇಷೆಗಳು ಸಿದ್ಧವಾಗುತ್ತಿವೆ. ಸಂಬಂಧಿತ ಆಸ್ತಿಯ ಖರೀದಿಯಲ್ಲಿ ಯಾವುದೇ ಸಮಸ್ಯೆಗಳು ಇಲ್ಲದಿರುವ ಅಥವಾ ಇರುವ ಬಗ್ಗೆ ಸರ್ಕಾರದ ಏಜೆನ್ಸಿಯೇ ಪರಿಶೀಲಿಸಲಿದೆ. ಇದರಿಂದ ಒಂದೇ ನಿವೇಶನ ಮತ್ತು ಆಸ್ತಿಯನ್ನು ಹಲವು ಕಡೆ ಮಾರಾಟ ಮಾಡುವುದು ಸೇರಿದಂತೆ ಇತರೆ ವಂಚನೆ ಮಾಡುವುದನ್ನು ತಪ್ಪಿಸಲು ಸಾಧ್ಯವಿದೆ ಎಂದರು.

ರಿಯಾಯಿತಿಯಿಂದ ಹೆಚ್ಚಿದ ಆದಾಯ: ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಶೇ.10ರಷ್ಟುರಿಯಾಯಿತಿ ನೀಡಿದ್ದರಿಂದ ಸರ್ಕಾರದ ಆದಾಯ ಹೆಚ್ಚಿದ್ದು, ಕಳೆದ ಮೂರು ತಿಂಗಳಲ್ಲಿ 6,700 ಕೋಟಿ ರು.ಗಿಂತ ಹೆಚ್ಚು ಅಧಿಕ ಹಣ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ 1,900 ಕೋಟಿ ರು. ಹೆಚ್ಚುವರಿ ಆದಾಯ ಸಂಗ್ರವಾಗಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಈ ವರ್ಷ 14 ಸಾವಿರ ಕೋಟಿ ರು. ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದ್ದು, ಮೂರು ತಿಂಗಳಲ್ಲಿ 6,700 ಕೋಟಿ ರು.ಗಿಂತ ಹೆಚ್ಚು ಸಂಗ್ರಹವಾಗಿದೆ. ಇದನ್ನು ಇನ್ನೂ ಮೂರು ತಿಂಗಳು ವಿಸ್ತರಿಸಿ ಸದ್ಯದಲ್ಲಿಯೇ ಆದೇಶ ಮಾಡಲಾಗುವುದು ಎಂದು ಅವರು ವಿವರಿಸಿದರು.

ಸಿದ್ದು ಅವರನ್ನು ಯಾವ ಲಿಂಗಾಯಿತರೂ ನಂಬೋದಿಲ್ಲ: ಸಚಿವ ಅಶೋಕ್‌

ಒತ್ತುವರಿ ರೈತರಿಗೆ 30 ವರ್ಷ ಜಮೀನು ಲೀಸ್‌: ಹಾಸನ, ಚಿಕ್ಕಮಗಳೂರು ಸೇರಿದಂತೆ ಮುಂತಾದ ಕಡೆ ಕಾಫಿ ಬೆಳೆಗಾರರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ಮತ್ತು ಅಧಿಕಾರಿಗಳ ನಡುವೆ ನಿರಂತರ ಜಟಾಪಟಿ ಮುಂದುವರಿದಿದೆ. ಇದಕ್ಕೆ ಅಂತ್ಯಹಾಡಲು ರೈತರಿಗೆ ಮಾತ್ರ 30 ವರ್ಷಕ್ಕೆ ಲೀಸ್‌ ಆಧಾರದಲ್ಲಿ ನೀಡಲು ಮಸೂದೆ ಮಂಡಿಸಲಾಗುವುದು. ಇದರಿಂದ ರೈತರಿಗೆ ವಿವಿಧ ಸೌಲಭ್ಯ ಪಡೆಯಲು ಅನುಕೂಲವಾಗಲಿದ್ದು, ಸರ್ಕಾರಕ್ಕೂ ಆದಾಯ ಬರಲಿದೆ ಎಂದು ಸಚಿವ ಅಶೋಕ್‌ ತಿಳಿಸಿದರು.

Follow Us:
Download App:
  • android
  • ios