Bengaluru Flood: ಕೆರೆ ಮುಚ್ಚಲು ಅನುಮತಿ ಕೊಟ್ಟವರಿಗೆ ಶಿಕ್ಷೆ ಆಗಬೇಕಲ್ಲವೇ?: ಸಚಿವ ಅಶೋಕ್
ಕೆರೆ ಮುಚ್ಚಿ ಲೇಔಟ್ ನಿರ್ಮಿಸಿದ್ದೇ ಪ್ರವಾಹಕ್ಕೆ ಕಾರಣ, 30ಕ್ಕೂ ಹೆಚ್ಚು ಕೆರೆ ಮುಚ್ಚಿರುವ ಹಿಂದಿನ ಸರ್ಕಾರಗಳು: ಅಶೋಕ್
ಬೆಂಗಳೂರು(ಸೆ.15): ‘ಬೆಂಗಳೂರಿನ ಪ್ರವಾಹ ಸಮಸ್ಯೆಗೆ ಕೇವಲ ನಮ್ಮ ಸರ್ಕಾರವನ್ನೇ ಹೊಣೆ ಎಂದು ಬಿಂಬಿಸಲಾಗುತ್ತಿದೆ. ಹಿಂದಿನ ಸರ್ಕಾರಗಳ ಅವಧಿಗಳಲ್ಲಿ ನಗರದ 30ಕ್ಕೂ ಹೆಚ್ಚು ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ನಿರ್ಮಿಸಿದ್ದರಿಂದ ಪ್ರವಾಹ ಸೃಷ್ಟಿಯಾಗಿದೆ. ಹೀಗಾಗಿ ಕೆರೆ ಮುಚ್ಚಲು ಅನುಮತಿ ನೀಡಿದ ಸರ್ಕಾರ ಹಾಗೂ ಸಚಿವರಿಗೆ ಶಿಕ್ಷೆಯಾಗಬೇಕಲ್ಲವೇ’ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ಜತೆಗೆ, ಗುರುವಾರ ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರ ಪಟ್ಟಿಬಿಡುಗಡೆ ಮಾಡುತ್ತೇನೆ. ಇದರಿಂದ ಯಾರಾರಯರು, ಎಷ್ಟೆಷ್ಟುಒತ್ತುವರಿ ಮಾಡಿಕೊಂಡಿದ್ದಾರೆ. ನಗರದ ಸಮಸ್ಯೆಗಳಿಗೆ ಯಾರೆಲ್ಲಾ ಹೊಣೆ ಎಂಬುದು ಗೊತ್ತಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಮಳೆ ಹಾನಿ ಕುರಿತ ಎಚ್.ಡಿ.ಕುಮಾರಸ್ವಾಮಿ ಚರ್ಚೆ ವೇಳೆ ಮಧ್ಯ ಪ್ರವೇಶಿಸಿದ ಆರ್.ಅಶೋಕ್, ಜೆ.ಪಿ.ನಗರದ ಡಾಲರ್ಸ್ ಕಾಲೋನಿ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್ ಇವೆಲ್ಲವೂ ಕೆರೆಗಳ ಜಾಗದಲ್ಲೇ ನಿರ್ಮಿಸಿರುವ ವಸತಿ ಪ್ರದೇಶ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸರ್ಕಾರಿ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿದೆ. ಹೀಗಾಗಿ ಬಿಡಿಎ ಪ್ರಮುಖ ಅಪರಾಧಿ. ಕೆರೆ ಮುಚ್ಚಲು ಅನುಮೋದನೆ ನೀಡಿದ ಸರ್ಕಾರ ಹಾಗೂ ಸಚಿವರಿಗೆ ಶಿಕ್ಷೆಯಾಗಬೇಕಲ್ಲವೇ ಎಂದು ಪ್ರಶ್ನಿಸಿದರು.
ಖಾತಾ, ಆರ್‌ಟಿಸಿ ಬದಲಾವಣೆ ಅರ್ಜಿ 2 ತಿಂಗಳಿನಲ್ಲಿ ಇತ್ಯರ್ಥ
ಕಂಠೀರವ ಸ್ಟೇಡಿಯಂ, ಕೆಂಪೇಗೌಡ ಬಸ್ಸು ನಿಲ್ದಾಣ ಸೇರಿದಂತೆ 30ಕ್ಕೂ ಹೆಚ್ಚು ಕೆರೆಗಳನ್ನು ಮುಚ್ಚಲಾಗಿದೆ. ಇದರಿಂದ ನಗರದಲ್ಲಿರುವ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಕೆರೆಗಳನ್ನು ಮುಚ್ಚಿದ್ದರಿಂದ ಸಮಸ್ಯೆಯಾಗಿದೆ. ಬ್ರ್ಯಾಂಡ್ ಬೆಂಗಳೂರು ಹೆಸರು ಹಾಳಾದರೆ ಎಲ್ಲರೂ ಹೊಣೆ ಎಂಬುದನ್ನು ಯೋಚಿಸಬೇಕು ಎಂದು ಕಿಡಿ ಕಾರಿದರು.
ಮಧ್ಯ ಪ್ರವೇಶಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೆರೆ ಮುಚ್ಚುವಂತೆ ಯಾವ ಸರ್ಕಾರ ಅಥವಾ ಸಚಿವರೂ ಹೇಳಿರುವುದಿಲ್ಲ. ಇದು ಅಧಿಕಾರಿಗಳು ಹಾಗೂ ಯೋಜನಾ ವಿಭಾಗದವರ ತಪ್ಪು. ಯಾವ ಪಕ್ಷದವರೂ ಕೆರೆ ಮುಚ್ಚಲು ಹೇಳಲ್ಲ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.
ಇದಕ್ಕೆ ಆರ್.ಅಶೋಕ್, ಸಚಿವ ಸಂಪುಟ ಸಭೆಯ ಒಪ್ಪಿಗೆ ಇಲ್ಲದೆ ಕೆರೆ ಮುಚ್ಚಲು ಸಾಧ್ಯವೇ? ಸರ್ಕಾರದ ಅನುಮತಿ ಪಡೆದೇ ಅವರು ಕೆರೆ ಜಾಗದಲ್ಲಿ ಬಡಾವಣೆಗಳನ್ನು ನಿರ್ಮಿಸಿರುವುದು ಅಲ್ಲವೇ? ಎಂದು ಪ್ರಶ್ನಿಸಿದರು. ಇನ್ನು ಒಣಗಿರುವ ಕೆರೆಗಳನ್ನು ಮುಚ್ಚಿವಂತೆ ಒಂದು ಆದೇಶ ಮಾಡಲಾಗಿದೆ. ಕೋಲಾರ ಭಾಗದಲ್ಲಿ 30 ವರ್ಷಗಳಿಂದ ಕೆರೆ ತುಂಬಿಲ್ಲ. ಹಾಗಂತ ಅಂತಹ ಕೆರೆಗಳನ್ನು ಮುಚ್ಚಲು ಸಾಧ್ಯವೇ? ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರನ್ನು ಸಿಂಗಾಪುರ ಮಾಡಲು ಹೋಗಿದ್ದಾಗ ಇವೆಲ್ಲಾ ಆಗಿದ್ದು. ನಾವು ಯಾರನ್ನೂ ಟೀಕೆ ಮಾಡಬಾರದು. ವಾಸ್ತವಾಂಶ ಚರ್ಚೆ ಮಾಡಬೇಕು ಎಂದು ಹೇಳಿ ಒತ್ತುವರಿ ಚರ್ಚೆಗೆ ತೆರೆ ಎಳೆದು ನೆರೆ ಹಾನಿ ಕುರಿತ ಚರ್ಚೆ ಮುಂದುವರೆಸಿದರು.