‘ಸನಾತನ ಧರ್ಮದ ಹೇಳಿಕೆ ವಿಚಾರದಲ್ಲಿ ನಾನು ಮಾಡಿದ ಟ್ವೀಟ್‌ನಲ್ಲಿ ಏನೂ ತಪ್ಪಿಲ್ಲ. ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತಿದ್ದು, ಸಂವಿಧಾನದಿಂದ ಏನೂ ಇಲ್ಲ ಎಂಬುದನ್ನು ಬಿಜೆಪಿಯವರು ಹೇಳಲಿ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಸೆ.08): ‘ಸನಾತನ ಧರ್ಮದ ಹೇಳಿಕೆ ವಿಚಾರದಲ್ಲಿ ನಾನು ಮಾಡಿದ ಟ್ವೀಟ್‌ನಲ್ಲಿ ಏನೂ ತಪ್ಪಿಲ್ಲ. ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತಿದ್ದು, ಸಂವಿಧಾನದಿಂದ ಏನೂ ಇಲ್ಲ ಎಂಬುದನ್ನು ಬಿಜೆಪಿಯವರು ಹೇಳಲಿ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಂವಿಧಾನವೇ ನನ್ನ ಧರ್ಮ ಎಂದಿದ್ದೇನೆ. ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ. ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ನಿಮ್ಮ ಆಚರಣೆ ವಿರುದ್ಧ ನಾನಿಲ್ಲ, ನನ್ನ ಆಚರಣೆ ವಿರುದ್ಧ ಯಾಕೆ ಇದ್ದೀರಿ? ನನಗೆ ಸಂವಿಧಾನದ ಬಗ್ಗೆ ನಂಬಿಕೆ ಇದೆ. ನಾನು ಯಾರಿಗೆ ಯಾಕೆ ಸಮರ್ಥನೆ ಮಾಡಬೇಕು? ನನ್ನ ವಿರುದ್ಧ ಎಫ್‌ಆರ್‌ಐ ಎಲ್ಲಿಯಾದರೂ ಹಾಕಿಕೊಳ್ಳಬಹುದು. ಸಂವಿಧಾನ ಗೌರವಿಸುತ್ತೇನೆ ಎಂದರೆ ಎಫ್‌ಐಆರ್‌ ಹಾಕುತ್ತೇವೆ ಎಂದರೆ ಹಾಕಿಕೊಳ್ಳಲಿ’ ಎಂದು ಕಿಡಿಕಾರಿದರು.

ಮೋದಿ ಅವರೇ ನಿಮ್ಮ ಸಮಯ ಮುಗಿದಿದೆ, ಮುಂದಿನ ಪ್ರಧಾನಿ ರಾಹುಲ್‌ ಗಾಂಧಿ: ಸಲೀಂ ಅಹ್ಮದ್

‘ರಿಪಬ್ಲಿಕ್‌ ಆಫ್‌ ಭಾರತ’ ಎಂದು ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ವಾಟ್ಸಾಪ್‌ ವಿಶ್ವವಿದ್ಯಾಲಯದಲ್ಲಿ ಬೆಳೆದು ಬಂದವರು. ಇತಿಹಾಸ ತಿಳಿದುಕೊಂಡು ಬಂದಿಲ್ಲ. ಭಾರತ, ಇಂಡಿಯಾ ಹೇಗೆ ಬಂತು ಎಂಬುದನ್ನು ತಿಳಿದುಕೊಳ್ಳಲಿ. ರಸ್ತೆ ಹೆಸರು ಬದಲಿಸುತ್ತಿದ್ದರು. ಈಗ ದೇಶದ ಹೆಸರು ಬದಲಿಸುತ್ತಿದ್ದಾರೆ. ಮೊದಲು ದೇಶದ ಹಣೆಬರಹ ಬದಲಿಸಲಿ. ಹಸಿವಿನಿಂದ ಎಷ್ಟುಜನ ಸಾಯುತ್ತಿದ್ದಾರೆ. ದೇಶದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ’ ಎಂದು ಒತ್ತಾಯಿಸಿದರು.

ತಲೆ ಕತ್ತರಿಸುವ ಉದ್ದೇಶ ಇಲ್ಲ: ‘ಬಿ.ಎಲ್‌. ಸಂತೋಷ್‌ ಅವರೇ, ಧರ್ಮದಲ್ಲಿ ಸೋಂಕು ಇದೆ ಎಂದು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ. ನಿಮ್ಮ ವಾಟ್ಸಾಪ್‌ ವಿಶ್ವವಿದ್ಯಾಲಯದಿಂದ ಹೊರಗೆ ಬಂದು ವಾಸ್ತವವನ್ನು ಅರಿಯಿರಿ. ತಲೆ ಕತ್ತರಿಸುವ ಉದ್ದೇಶವನ್ನು ಯಾರೂ ಹೊಂದಿಲ್ಲ. ಆದರೆ ಸೋಂಕು ನಿವಾರಿಸಬೇಕಾದ ಅನಿವಾರ್ಯತೆ ಇದೆ’ ಎಂದು ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ನಾಯಕ ಬಿ.ಎಲ್‌. ಸಂತೋಷ್‌ ಅವರಿಗೆ ತಿರುಗೇಟು ನೀಡಿದ್ದಾರೆ.

‘ಯಾವ ಧರ್ಮ ಎಲ್ಲಾ ವ್ಯಕ್ತಿಗಳಿಗೂ ಸಮಾನತೆ, ಸಮಾನ ಘನತೆ ನೀಡುವುದಿಲ್ಲವೋ ಆ ಧರ್ಮ ರೋಗಕ್ಕೆ ಸಮ’ ಎಂಬ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಟ್ವೀಟರ್‌ ಖಾತೆ ಮೂಲಕ ಮೂಲಕ ಖಂಡಿಸಿದ್ದರು. ‘ಯಾವುದೇ ವ್ಯಕ್ತಿಯ ಹೊಟ್ಟೆಗೆ ಸೋಂಕಾಗಿದ್ದರೆ ತಲೆ ಕಡಿಯುತ್ತೀರಾ?’ ಎಂದೂ ಪ್ರಶ್ನಿಸಿದ್ದರು.

ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್‌ ಮಾಡಿರುವ ಆರೋಪ ಸುಳ್ಳು: ಕೆ.ಎಸ್‌.ಈಶ್ವರಪ್ಪ

ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿರುವ ಪ್ರಿಯಾಂಕ್‌ ಖರ್ಗೆ, ಯಾರೂ ತಲೆ ಕತ್ತರಿಸುವ ಉದ್ದೇಶ ಹೊಂದಿಲ್ಲ. ಆದರೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಘನತೆಯಿಂದ ಬದುಕಲು ಅವಕಾಶ ನೀಡುವ ಮೂಲಕ ಸಮಾಜದಲ್ಲಿನ ಸೋಂಕು ನಿವಾರಿಸಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ. ಅಲ್ಲದೆ ‘ದಯವಿಲ್ಲದ ಧರ್ಮ ಯಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ, ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ’ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ್ದಾರೆ.