ಭಾರತೀಯ ನಾಗರಿಕತ್ವ ಪಡೆಯುವ ಮೊದಲೇ 1980ರಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ನವದೆಹಲಿ: ಭಾರತೀಯ ನಾಗರಿಕತ್ವ ಪಡೆಯುವ ಮೊದಲೇ 1980ರಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಸೋನಿಯಾ 1983ರಲ್ಲಿ ದೇಶದ ನಾಗರಿಕತ್ವ ಪಡೆದಿದ್ದರು

ಸೋನಿಯಾ ಗಾಂಧಿ 1983ರಲ್ಲಿ ದೇಶದ ನಾಗರಿಕತ್ವ ಪಡೆದಿದ್ದರು. ಆದರೆ, 1980ರಲ್ಲೇ ಅವರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ ಅವರ ವಿರುದ್ಧ ವಂಚನೆ ಹಾಗೂ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದ ಮೇರೆಗೆ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಕೋರಿ ಪರಿಷ್ಕೃತ ಕ್ರಿಮಿನಲ್‌ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ನೋಟಿಸ್‌ ಜಾರಿ ಮಾಡಿದೆ.

ಮೇಲ್ಮನವಿಗೆ ಸಂಬಂಧಿಸಿ ನೋಟಿಸ್ ಜಾರಿ

ಸೆಂಟ್ರಲ್‌ ದಿಲ್ಲಿ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಆಫ್‌ ದಿ ರೌಸ್‌ ಅವೆನ್ಯೂ ಕೋರ್ಟ್ಸ್‌ನ ಉಪಾಧ್ಯಕ್ಷ ವಿಕಾಸ್‌ ತ್ರಿಪಾಠಿ ಅವರ ಅರ್ಜಿಯನ್ನು ಸೆ.11ರಂದು ಅಡಿಷನಲ್‌ ಚೀಫ್‌ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ತಿರಸ್ಕರಿಸಿದ್ದರು. ಸೋನಿಯಾ ಮೇಲಿನ ಆರೋಪಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳು ಇಲ್ಲ, ಜತೆಗೆ ಮತದಾರರ ಪಟ್ಟಿಯ ಪ್ರಮಾಣೀಕೃತವಲ್ಲದ ಝೆರಾಕ್ಸ್‌ ಪ್ರತಿಗಳನ್ನು ಇಟ್ಟುಕೊಂಡು ಆರೋಪ ಮಾಡಲಾಗುತ್ತಿದೆ ಎಂದು ಕೋರ್ಟ್‌ ಹೇಳಿತ್ತು. ಇದನ್ನು ಪ್ರಶ್ನಿಸಿ ಇದೀಗ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ಈ ಸಂಬಂಧ ವಿವರಣೆ ಕೋರಿ ನೋಟಿಸ್‌ ನೀಡಿರುವ ಕೋರ್ಟ್‌, ಮುಂದಿನ ವಿಚಾರಣೆಯನ್ನು ಜ.6ಕ್ಕೆ ನಿಗದಿಪಡಿಸಿದೆ.