Asianet Suvarna News Asianet Suvarna News

Keragodu Hanuman Flag Riot Case: ಹೊರಗಿನಿಂದ ಜನರನ್ನು ಕರೆತಂದು ಜೆಡಿಎಸ್‌ನವರು ಗಲಾಟೆ ಮಾಡಿಸಿದ್ದಾರೆ: ಚಲುವರಾಯಸ್ವಾಮಿ

ಕೆರಗೋಡು ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. 

Minister N Cheluvarayaswamy Slams On JDS Over Keragodu Hanuman Flag Riot Case gvd
Author
First Published Jan 31, 2024, 7:43 AM IST | Last Updated Jan 31, 2024, 7:43 AM IST

ಮಂಡ್ಯ (ಜ.31): ಕೆರಗೋಡು ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. ಪಾದಯಾತ್ರೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತ. ಕೆರಗೋಡು ಜನರಿಗೂ ಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಜನರು ಇಂತಹ ಪ್ರಚೋದನೆಗೆ ಒಳಗಾಗುವವರೂ ಅಲ್ಲ. ಹೊರಗಿನಿಂದ ಜನರನ್ನು ಕರೆತಂದು ಬೇಕೆಂತಲೇ ಗಲಾಟೆ ಮಾಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಧರ್ಮಾಧಾರಿತ ರಾಜಕಾರಣಕ್ಕೆ ಯತ್ನ: ಬಿಜೆಪಿಯವರು ಮಂಡ್ಯದಲ್ಲಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ಇದಕ್ಕೆ ಜೆಡಿಎಸ್‌ನವರು ಬೆಂಬಲ ನೀಡುತ್ತಿದ್ದಾರೆ. ಧರ್ಮಾಧಾರಿತ ರಾಜಕಾರಣ ಮಾಡುವುದಕ್ಕೆ ಇದು ಮಂಗಳೂರಲ್ಲ. ಮಂಡ್ಯದ ಜನರು ನಿಮ್ಮ ಮಾತುಗಳಿಂದ ಪ್ರೇರಿತರಾಗಿ ಬಿಜೆಪಿ ಪರ ಒಲವು ತೋರುತ್ತಾರೆಂದು ಭಾವಿಸಿದ್ದರೆ ಅದು ಮೂರ್ಖತನ. ಹೋರಾಟದ ನೆಲದಲ್ಲಿರುವ ಅವರಿಗೆ ನಿಮ್ಮ ಢೋಂಗಿತನ ಏನೆಂಬುದು ಗೊತ್ತಿದೆ ಎಂದರು.

ಮಂಡ್ಯದಲ್ಲಿ ಕೋಮುಬೀಜ ಬಿತ್ತಿದ ಎಚ್‌ಡಿಕೆ: ಸಚಿವ ಎನ್.ಚಲುವರಾಯಸ್ವಾಮಿ

ರಾಜಕಾರಣದಲ್ಲಿ ಎಲ್ಲರೂ ಸೋತಿದ್ದಾರೆ. ೨೦೧೮ರಲ್ಲಿ ಏಳು ಕ್ಷೇತ್ರಗಳಲ್ಲೂ ನಾವು ಸೋತಿದ್ದೆವು. ಆದರೂ ನಿಮ್ಮ ಆಡಳಿತ ನೋಡಿಕೊಂಡು ಸುಮ್ಮನಿದ್ದೆವು. ಇಂತಹ ಕ್ಷುಲ್ಲಕ ರಾಜಕೀಯ ಮಾಡಿರಲಿಲ್ಲ. ನೀವು ಅಸಮರ್ಥರೆಂದು ಗೊತ್ತಾದ ಬಳಿಕ ಜನರು ೨೦೨೩ರಲ್ಲಿ ನಮಗೆ ಅಧಿಕಾರ ಕೊಟ್ಟಿದ್ದಾರೆ. ನಾವು ಅಭಿವೃದ್ಧಿಪರ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇವೆ. ಇದೂ ಕೂಡ ಶಾಶ್ವತವಲ್ಲ. ಜಿಲ್ಲೆಯ ಜನರು ಬುದ್ಧಿವಂತರಿದ್ದಾರೆ. ಪ್ರತಿ ಚುನಾವಣೆಯಲ್ಲೂ ಅದನ್ನು ಸಾಬೀತು ಪಡಿಸುತ್ತಿದ್ದಾರೆ. ಇದನ್ನು ಜೆಡಿಎಸ್-ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಶಾಂತಿ ಭಂಗ ಮಾಡಿದರೆ ಶಾಂತಿಯಾತ್ರೆ: ಈಗ ಪಾದಯಾತ್ರೆಯೆಲ್ಲಾ ಮುಗಿದು ಶಾಂತ ಪರಿಸ್ಥಿತಿ ನೆಲೆಸಿದೆ. ಮತ್ತೆ ಜನರನ್ನು ಪ್ರಚೋದನೆ ಮಾಡುವುದು, ಶಾಂತಿಗೆ ಭಂಗ ತರುವುದು ಮಾಡಿದಲ್ಲಿ ಆಗ ಶಾಂತಿಯಾತ್ರೆ ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಡೆದ ಪಾದಯಾತ್ರೆ ಸಮಯದಲ್ಲಿ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು ಅಹಿತಕರ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

‘ಅಹಿಂದ ಸಿದ್ದು, ‘ಹಿಂದ’ ಹಿಂದಿಕ್ಕಿ ಅಲ್ಪಸಂಖ್ಯಾತರ ಜಪ ಮಾಡ್ತಿದ್ದಾರೆ’: ವಿಜಯೇಂದ್ರ ಆರೋಪ

ಬಿಜೆಪಿಯವರು ಚುನಾವಣಾ ರಾಜಕೀಯ ಮಾಡುವುದಕ್ಕೆ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುವುದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಪ್ರಕರಣವನ್ನು ಜೀವಂತವಾಗಿಡುವುದೇ ಅವರ ಉದ್ದೇಶ. ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂಬುದು ಅವರ ಭಾವನೆ. ಇದೆಲ್ಲವನ್ನೂ ಜನರೂ ಗಮನಿಸುತ್ತಿದ್ದು, ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios