Asianet Suvarna News Asianet Suvarna News

ಮಂಡ್ಯದಲ್ಲಿ ಕೋಮುಬೀಜ ಬಿತ್ತಿದ ಎಚ್‌ಡಿಕೆ: ಸಚಿವ ಎನ್.ಚಲುವರಾಯಸ್ವಾಮಿ

ಬಿಜೆಪಿಯವರ ಜೊತೆ ಸೇರಿಕೊಂಡಿರುವ ಜೆಡಿಎಸ್ ಮಂಡ್ಯ ನೆಲದಲ್ಲಿ ಕೋಮು ಬೀಜ ಬಿತ್ತನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ ಅವರು ಮಂಡ್ಯವನ್ನು ಮಂಗಳೂರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

HD Kumaraswamy has sown communal seeds in Mandya Says Minister N Cheluvarayaswamy gvd
Author
First Published Jan 31, 2024, 5:23 AM IST

ಮಂಡ್ಯ (ಜ.31): ಬಿಜೆಪಿಯವರ ಜೊತೆ ಸೇರಿಕೊಂಡಿರುವ ಜೆಡಿಎಸ್ ಮಂಡ್ಯ ನೆಲದಲ್ಲಿ ಕೋಮು ಬೀಜ ಬಿತ್ತನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯವನ್ನು ಮಂಗಳೂರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸೋಮವಾರ ನಡೆದ ಪಾದಯಾತ್ರೆಯೊಂದಿಗೆ ಜೆಡಿಎಸ್ ಅಂತಿಮಯಾತ್ರೆಯೂ ನಡೆದಿದೆ. ಅಲ್ಲಿಗೆ ಪ್ರಾದೇಶಿಕ ಪಕ್ಷದ ಸಮಾಧಿಯೂ ಆದಂತಾಗಿದೆ. ಕುಮಾರಸ್ವಾಮಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಿರೆ ನೋವಾಗುತ್ತಿರಲಿಲ್ಲ. 

ತಮ್ಮ ವೈಯಕ್ತಿಕ ಹಿತಾಸಕ್ತಿ, ಸ್ವಾರ್ಥ ರಾಜಕೀಯ ಸಾಧನೆಗೆ ಜಯಪ್ರಕಾಶ್ ನಾರಾಯಣ್, ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್.ಪಟೇಲ್‌ರಂಥವರು ಪ್ರಾದೇಶಿಕ ಪಕ್ಷದ ಉಳಿವಿಗೆ ನಡೆಸಿದ ಹೋರಾಟಕ್ಕೆ ತಿಲಾಂಜಲಿ ಹಾಡಿರುವುದು ತೀವ್ರ ನೋವುಂಟುಮಾಡಿದೆ ಎಂದರು. ಕೆರಗೋಡು ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ನಡೆದ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ. ಪಾದಯಾತ್ರೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತ. ಕೆರಗೋಡು ಜನರಿಗೂ ಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಜನ ಇಂತಹ ಪ್ರಚೋದನೆಗೆ ಒಳಗಾಗುವವರೂ ಅಲ್ಲ. ಹೊರಗಿನಿಂದ ಜನರನ್ನು ಕರೆತಂದು ಬೇಕೆಂತಲೇ ಗಲಾಟೆ ಮಾಡಿಸಿದ್ದಾರೆ ಎಂದು ದೂರಿದರು.

ಕೆರಗೋಡು ಹನುಮ ಧ್ವಜ ಪ್ರಕರಣ: ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದ ಚಲುವರಾಯಸ್ವಾಮಿ

ಗ್ಯಾರಂಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಜನ ಸಾಮಾನ್ಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪಂಚ ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಯೋಜನೆ ಸದುಪಯೋಗಪಡಿಸಿಕೊಳ್ಳಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಮೈಷುಗರ್ ಫ್ಯಾಕ್ಟರಿ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾರಂಭ ಮತ್ತು ಡಿಸಿಸಿ ಬ್ಯಾಂಕ್ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ವಿತರಣೆ ಹಾಗೂ ಮಾಹಿತಿ ನೀಡುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ₹112 ಕೋಟಿ ಗಳನ್ನು 5 ಲಕ್ಷದೊಳಗಿನ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗುತ್ತಿದೆ. 5 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಈ ವರ್ಷ 20 ಲಕ್ಷ ರೈತರಿಗೆ 16 ಸಾವಿರ ಕೋಟಿ ರು. ಬಡ್ಡಿ ರಹಿತ ( ಶೂನ್ಯ ಬಡ್ಡಿ)ಸಾಲ ನೀಡಲಾಗಿದೆ. ಅದರ ಬಡ್ಡಿಯನ್ನು ಸರ್ಕಾರ ಡಿಸಿಸಿ ಬ್ಯಾಂಕಿಗೆ ಪಾವತಿಸುತ್ತದೆ. ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯ ಸೌಲಭ್ಯ ಇದುವರೆಗೆ 3.58 ಕೋಟಿ ಜಿಲ್ಲೆಯ ಮಹಿಳೆಯರು ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ತಲಾ 2000 ರು.ನಂತೆ 435820 ಮಹಿಳೆಯರಿಗೆ ನೀಡಿ 89.17 ಕೋಟಿ ರು. ವೆಚ್ಚ ಭರಿಸಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿರುವ 4 ಲಕ್ಷದ 64 ಸಾವಿರ ಕುಟುಂಬಗಳು ಫಲಾನುಭವಿಯಾಗಿದ್ದು, 76 ಸಾವಿರ ಕೋಟಿ ರು. ಹಣವನ್ನು ಸರ್ಕಾರ ಪಾವತಿಸಿದೆ ಎಂದರು. ಜಿಲ್ಲೆಯಲ್ಲಿ 2600 ಯುವಕರು ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದು, ಪದವೀಧರರಿಗೆ 3000 ಹಾಗೂ ಡಿಪ್ಲೋಮೋ ಮುಗಿಸಿದವರಿಗೆ ನಿರುದ್ಯೋಗ ಭತ್ಯೆಯಾಗಿ ಗರಿಷ್ಠ 2 ವರ್ಷದವರೆಗೆ 1500 ರು. ಹಣವನ್ನು ಈ ಯೋಜನೆಯಡಿ ನೀಡಲಾಗುವುದು ಎಂದರು.

ಎಚ್‌ಡಿಕೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಸೇರ್ಪಡೆ: ಸಚಿವ ಚಲುವರಾಯಸ್ವಾಮಿ

ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸರ್ಕಾರ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡಿದೆ. ಮುಂದಿನ ದಿನಗಳಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ರೈತರ ಬದುಕು ಸುಧಾರಿಸಲು ವಿ.ಸಿ.ನಾಲೆ ಹಾಗೂ ಅಣೆಕಟ್ಟು ನಾಲೆ ಆಧುನೀಕರಣ ಗೊಳಿಸಿ ಕಟ್ಟಕಡೆಯ ಭಾಗಕ್ಕೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸದಾ ರೈತರ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತದೆ ಎಂದರು.

Follow Us:
Download App:
  • android
  • ios