‘ಅಹಿಂದ ಸಿದ್ದು, ‘ಹಿಂದ’ ಹಿಂದಿಕ್ಕಿ ಅಲ್ಪಸಂಖ್ಯಾತರ ಜಪ ಮಾಡ್ತಿದ್ದಾರೆ’: ವಿಜಯೇಂದ್ರ ಆರೋಪ
ಅಹಿಂದ ಎಂದು ಹೇಳಿಕೊಂಡು ಅಧಿಕಾರ ಗಿಟ್ಟಿಸಿಕೊಂಡ ಸಿಎಂ ಸಿದ್ದರಾಮಯ್ಯ ಅವರು ಈಗ 'ಹಿಂದ'ವನ್ನು ಹಿಂದಿಕ್ಕಿ ಕೇವಲ ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಕಲಬುರಗಿ (ಜ.31): ಅಹಿಂದ ಎಂದು ಹೇಳಿಕೊಂಡು ಅಧಿಕಾರ ಗಿಟ್ಟಿಸಿಕೊಂಡ ಸಿಎಂ ಸಿದ್ದರಾಮಯ್ಯ ಅವರು ಈಗ 'ಹಿಂದ'ವನ್ನು ಹಿಂದಿಕ್ಕಿ ಕೇವಲ ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ಬೀದರ್‌ನ ಗಣೇಶ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಹಿಂದುಳಿದ, ದಲಿತ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ. ಶೋಷಿತರ ಧ್ವನಿಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಕಾರಣೀಭೂತವಾದ, ಅವರ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್ ದಲಿತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯನವರಿಗೆ ಅಧಿಕಾರ ಮಾಡಲು, ಮಜಾ ಮಾಡಲು ಸರ್ಕಾರ ಬೇಕು. ರಾಜ್ಯದಲ್ಲಿ ರೈತರು ಬರಕ್ಕೆ ಸಿಲುಕಿ ನಲುಗುತ್ತಿದ್ದಾಗ ಬರ ಪರಿಹಾರ ಕೊಡಲು ಮನವಿ ಸಲ್ಲಿಸಿದರೆ ಸರ್ಕಾರದ ಬಳಿ ಹಣವಿಲ್ಲ ಎಂದಿದ್ದಾರೆ. ಬರದ ಛಾಯೆ ಆವರಿಸಿ ಸಂಕಷ್ಟಕ್ಕೀಡಾದ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಈ ಸಂದರ್ಭದಲ್ಲಿ ಪರಿಹಾರ ಒದಗಿಸಲೂ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಮೊಸಳೆ ಕಣ್ಣೀರು ಹಾಕುತ್ತಾ ಮೋದಿ ಅವರ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ ಎಂದು ಕಿಡಿ ಕಾರಿದರು.
ಬೀದರ್ ಸಂಸದ ಸ್ಥಾನಕ್ಕೆ ಸೂಕ್ತ ವ್ಯಕ್ತಿ ನೀಡಿ: ವಿಜಯೇಂದ್ರಗೆ ಶಾಸಕ ಚವ್ಹಾಣ್ ಸಾಷ್ಟಾಂಗ ನಮಸ್ಕಾರ
ಭ್ರಷ್ಟ ಸರ್ಕಾರ ಕಿತ್ತೊಗೆಯುವೆ: ರಾಜ್ಯದಲ್ಲಿರುವ ಭ್ರಷ್ಟ, ಲಂಚಕೋರ ಹಾಗೂ ಜನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯೋವರೆಗೂ ತಾವು ವಿರಮಿಸೋದಿಲ್ಲ ಎಂದ ಅವರು, ತಮ್ಮ ಈ ಸಂಕಲ್ಪ ಸಾಕಾರಕ್ಕೆ ಕಲ್ಯಾಣ ನಾಡಿನ ಜನಾಶೀರ್ವಾದ ಕೋರಿದರು. ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವಂಥ ಸನ್ನಿವೇಶವನ್ನು ನಾನೆಂದೂ ತರಲು ಬಿಡುವುದಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ನನ್ನ ಅಧಿಕಾರದ ಅವಧಿಯಲ್ಲಿ ನಾನು ಭರವಸೆ ನೀಡುತ್ತೇನೆ. ನಮ್ಮ ಮುಂದಿರುವ ಗುರಿ ಒಂದೇ, ಅದು ಬಿಜೆಪಿ ಅಧಿಕಾರಕ್ಕೆ ಬರಬೇಕು, ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂಬುದು. ಬಿಜೆಪಿ ಸಂಘಟನೆಗೆ ನಾನು ಒತ್ತು ನೀಡುತ್ತೇನೆ. ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡುವ ಗೌರವವನ್ನೇ ಬೂತ್ ಮಟ್ಟದ ಪ್ರಮುಖರಿಗೂ ನೀಡುವ ಏಕೈಕ ಪಕ್ಷ ಬಿಜೆಪಿ ಎಂದು ಬಣ್ಣಿಸಿದರು.
ತೆರೆದ ಜೀಪಿನಲ್ಲಿ ಮೆರವಣಿಗೆ: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಸೋಮವಾರ ಕಲಬುರಗಿಗೆ ಆಗಮಿಸಿರುವ ಬಿ.ವೈ.ವಿಜಯೇಂದ್ರ ಅವರಿಗೆ ಸ್ಥಳೀಯ ಬಿಜೆಪಿ ಘಟಕದಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಕಲಬುರಗಿಗೆ ಆಗಮಿಸಿದ ಅವರು, ಶರಣಬಸವೇಶ್ವರ ಮಹಾ ದಾಸೋಹ ಮನೆಗೆ ಭೇಟಿ ನೀಡಿದರು. ಇಲ್ಲಿನ ಶರಣಬಸವೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರನ್ನು ಕಂಡು ಆಶೀರ್ವಾದ ಪಡೆದುಕೊಂಡರು. ಶರಣಬಸವಪ್ಪ ಅಪ್ಪ ಹಾಗೂ ಚಿ. ದೊಡ್ಡಪ್ಪ ಅವರಿಗೆ ಸನ್ಮಾನಿಸಿದರು.
ಧ್ವಜ ಇಳಿಸೋ ದುಸ್ಸಾಹಕ್ಕೆ ಮುಂದಾದ ಕಾಂಗ್ರೆಸ್ ನಡೆ ಖಂಡನೀಯ: ಬಿ.ವೈ.ವಿಜಯೇಂದ್ರ
ನಂತರ, ಇಲ್ಲಿಂದ ಸಮಾರಂಭ ನಡೆಯಲಿರುವ ಎನ್‌ವಿ ಮೈದಾನದವರೆಗೂ ತೆರೆದ ಜೀಪಿನಲ್ಲಿ ವಿಜಯೇಂದ್ರ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ, ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ನೂತನ ಅಧ್ಯಕ್ಷರಾಗಿರುವ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್ ಅವರ ಪದಗ್ರಹಣ ಕೂಡಾ ನಡೆಯಿತು.