ಡಿಕೆಶಿ ವಿರುದ್ಧ ಸಿಡಿದ ಇಬ್ಬರು ಸಚಿವರು: 5 ವರ್ಷವೂ ಸಿದ್ದು ಸಿಎಂ ಆಗಿ ಮುಂದುವರಿಲೆಂದು ಅಗ್ರಹ!
ಸಚಿವರು, ಶಾಸಕರು ಕೂಡಿ ಊಟ ಮಾಡಿದರೆ ಏನೂ ತಪ್ಪಿಲ್ಲ. ಒಮ್ಮೊಮ್ಮೆ ನಾನು ಬಸವರಾಜ ಬೊಮ್ಮಾಯಿ ಸೇರಿ ಊಟ ಮಾಡ್ತೀವಿ, ಅದರಲ್ಲಿ ತಪ್ಪೇನು? ಎಂದು ಹೇಳಿದ ಸಚಿವ ಎಂ.ಬಿ. ಪಾಟೀಲ್
ಹೊಸಪೇಟೆ(ಜ.11): ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ. ಈ ಅವಧಿಯಲ್ಲಿ ಮಾತ್ರವಲ್ಲ, ಮುಂದಿನ ಅವಧಿಗೂ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಏರ್ಪಟ್ಟಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದ, ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್ ಗೆ ಉಂಟಾದ ಭರ್ಜರಿ ಪ್ರತಿಕ್ರಿಯೆ ಮತ್ತು ವಿದೇಶದಿಂದ ಮರಳಿದರು ಕ್ಷಣದಲ್ಲಿಯೇ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಅಖಾಡಕ್ಕಿಳಿದು ಗೃಹ ಸಚಿವ ಪರಮೇಶ್ವರ್ ಏರ್ಪಡಿಸಿದ್ದ ಔತಣ ಮುಂ ದೂಡಿಸಿದ ಮಧ್ಯೆಯೇ ಎಂ.ಬಿ.ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದು ಕುತೂಹಲ ಕೆರಳಿಸಿದೆ.
ಡಿಕೆ ಸಾಹೇಬನಿಗೆ ಬಗಲ್ ಮೇ ದುಷ್ಮನ್ಸ್ ಕಡು ಕಾಟ: ಶತ್ರುನಾಶಕ್ಕೆ ಪ್ರತ್ಯಂಗಿರಾ ದೇವಿ ಮೊರೆ ಹೋದ್ರಾ ಡಿಸಿಎಂ?
ನಗರದ ಅಮರಾವತಿ ಅತಿಥಿ ಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು, ಶಾಸಕರು ಕೂಡಿ ಊಟ ಮಾಡಿದರೆ ಏನೂ ತಪ್ಪಿಲ್ಲ. ಒಮ್ಮೊಮ್ಮೆ ನಾನು ಬಸವರಾಜ ಬೊಮ್ಮಾಯಿ ಸೇರಿ ಊಟ ಮಾಡ್ತೀವಿ, ಅದರಲ್ಲಿ ತಪ್ಪೇನು? ಎಂದು ಅವರು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಎಂಗೆ ಔತಣಕೂಟ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿದೇಶ ಪ್ರವಾಸದಲ್ಲಿದ್ದರು. ಹಾಗಾಗಿ ಔತಣ ಕೂಟದಲ್ಲಿ ಭಾಗಿಯಾಗಿರಲಿಲ್ಲ ಎಂದರು. ಸಂಕ್ರಮಣ ಹಬ್ಬದ ಬಳಿಕ ಆಪರೇಷನ್ ಆಗುತ್ತೆ ಎನ್ನುವ ವಿಚಾರಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ ಜೆಡಿಎಸ್ ಶಾಸಕರು ನಮ್ಮ ಜತೆ ಇದ್ದಾರೆ. ಹಾಗೆಯೇ ಬಿಜೆಪಿಯ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ರಾಜಕೀಯ ಬೆಳವಣಿಗೆ ಏನಾದರೂ ಆದರೆ ಅವರೆಲ್ಲರನ್ನೂ ಪಕ್ಷಕ್ಕೆ ಕರೆತರುತ್ತೇವೆ. ನಮ್ಮ ಸಂಪರ್ಕದಲ್ಲಿ ಯಾರಿದ್ದಾರೆ ಎನ್ನುವುದು ನಿಮಗೂ ತಿಳಿದಿರುವ ವಿಚಾರ ಎಂದರು.
ಎರಡೂವರೆ ವರ್ಷದ ಸಿಎಂ ಹುದ್ದೆಗೇಕೆ ಡಿಕೆಶಿ ಒದ್ದಾಟ?: ರಾಜಣ್ಣ
ಬೆಂಗಳೂರು: ಅಧಿಕಾರ ಹಸ್ತಾಂತರ ತಪ್ಪಿಸಲು ಪ್ರತ್ಯೇಕ ಸಭೆಗಳನ್ನು ನಡೆಸಲಾಗುತ್ತಿದೆ ಎಂಬುದೆಲ್ಲಾ ಗೊತ್ತಿಲ್ಲ, ಅದು ನಿಜವೂ ಇರಬಹುದು ಅಥವಾ ಸುಳ್ಯ ಇರಬಹುದು. ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದೇ ನಮಗೆ ಖಚಿತವಿಲ್ಲ, ಹೀಗಾಗಿ ಅಧಿಕಾರ ಹಸ್ತಾಂತರ ವನ್ನು ಕಾಲವೇ ನಿರ್ಣಯಿಸಬೇಕೆಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಜತೆಗೆ, 'ಎರಡೂವರೆ ವರ್ಷದ ಅವಧಿಗೆ ಮುಖ್ಯಮಂತ್ರಿ ಆಗಲು ಡಿ.ಕೆ.ಶಿವಕುಮಾರ್ ಅವರಿಗೆ ಯಾಕೆ ಒದ್ದಾಟ, ಹೋರಾಟ? 2024ರ ಚುನಾವಣೆ ಅವರ ನೇತೃತ್ವದಲ್ಲೇ ಎದುರಿಸೋಣ. 5 ವರ್ಷ ಪೂರ್ಣಾವಧಿ ಅವರೇ ಸಿಎಂ ಆಗಲಿ' ಎಂದೂ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಎದುರಾಗಿರುವ ಒಪಂದದ ಪ್ರಕಾರ ಎರಡೂವರೆ ವರ್ಷದ ಬಳಿಕ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಹಸ್ತಾಂತರಿಸುವುದನ್ನು ತಪ್ಪಿಸಲೆಂದೇ ದಲಿತರ ಸಭೆಗಳು ನಡೆಯುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಸಂಪುಟ ಸಭೆ ಬಳಿಕ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಊಟಕ್ಕೆ ಸೇರಲು ಹೇಳಿದ್ದಕ್ಕೆ ಸೇರಿದ್ದೆವು. ಅಲ್ಲಿ ಮುಖ್ಯಮಂತ್ರಿಗಳೂ ಭಾಗವಹಿಸಿ ದ್ದರು. ಈ ವೇಳೆ ಯಾವುದೇ ರಾಜಕೀಯ ತೀರ್ಮಾನ ಆಗಿಲ್ಲ, ಇನ್ನು ಪರಮೇಶ್ವರ್ ಅವರು ಎಸ್ಸಿ, ಎಸ್ಟಿ ಸಮಾವೇಶ ನಡೆಸುವ ಬಗ್ಗೆ ಹಾಗೂ ದಲಿತರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಭೆ ಕರೆದಿದ್ದರು. ಆದರೆ ಹೈಕಮಾಂಡ್ ಸಲಹೆ ಮೇರೆಗೆ ಅದನ್ನು ಮುಂದೂಡಲಾಗಿದೆ. ಸಭೆಯನ್ನು ರದ್ದು ಮಾಡಿಲ್ಲ ಎಂದು ಹೇಳಿದರು.
ದಲಿತರು ಸಭೆ ಸೇರಿದರೆ ಇಷ್ಟೆಲ್ಲ ವಿವಾದ ಸೃಷ್ಟಿ ಮಾಡುತ್ತೀರಿ. ಆ ವಿವಾದ ಸೃಷ್ಟಿಯ ಹಿಂದೆ ಯಾರೇ ಇರಲಿ ದಲಿತರ ಸಭೆ ವಿರೋ ಧಿಸುವುದು ತಪ್ಪು. ಈ ರೀತಿ ವಿರೋಧ ಮಾಡು ವವರು ಚಲುವರಾಯಸ್ವಾಮಿ ಒಕ್ಕಲಿಗ ಶಾಸಕರ ಸಭೆ ನಡೆದಾಗ ಯಾಕೆ ಮಾತನಾಡಿಲ್ಲ. ಅದರ ಬಗ್ಗೆ ಯಾಕೆ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಕಿಡಿಕಾರಿದರು.
ಅಬಲರ ಕೈಗೆ ಅಧಿಕಾರ ಬೇಕು-ಡಿಕೆಶಿಗೆ ಟಾಂಗ್:
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ, ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿದರೂ ನಾವೆಲ್ಲರೂ ಬದ್ದರಾಗಿರುತ್ತೇವೆ. ವೈಯಕ್ತಿಕವಾಗಿ ನನ್ನನ್ನು ಕೇಳಿದರೆ ಅಬಲರ ಕೈಯಲ್ಲಿ ಅಧಿಕಾರ ಇರಬೇಕು ಎಂದು ಹೇಳುತ್ತೇನೆ. ಮೇಲ್ವರ್ಗ ಅಥವಾ ಕೆಳವರ್ಗ ಎಂಬ ಪದ ಬಳಸುವುದಿಲ್ಲ. ನಮಗೆ ನಾವು ಕೆಳಗಿದ್ದೇವೆ ಎಂದು ತೋರಿಸಿ ಕೊಳ್ಳಲು ಇಷ್ಟವಿಲ್ಲ. ಹಿಂದುಳಿದವರು, ಅಬ ಲರ ಕೈಯಲ್ಲಿ ಅಧಿಕಾರ ಇರಬೇಕು ಎಂದರು.
ಶಿವಕುಮಾರ್ ಸಿಎಂ ಆಗುತ್ತಾರೆಂಬ ಜ್ಯೋತಿಷಿ ಹೇಳಿಕೆ ಬಗ್ಗೆ, ನಾನು ಜ್ಯೋತಿಷ್ಯ, ಪೂಜೆ ಪುನಸ್ಕಾರ ನಂಬುವುದಿಲ್ಲ. ಅಸಹಾಯಕರಿಗೆ ಸಹಾಯ ಮಾಡುವುದಕ್ಕಿಂತ ದೊಡ್ಡ ದೇವರ ಆಶೀರ್ವಾದ ಮತ್ತೊಂದಿಲ್ಲ. ದೇವರ ಪೂಜೆ ಮಾಡಿದರೆ ಎಲ್ಲವೂ ಆಗುವುದಾದರೆ ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಭಕ್ತಾದಿಗಳು ಸಾಯುತ್ತಿರಲಿಲ್ಲ ಎಂದರು.
ಯತ್ನಾಳ್‌ಗೆ ಉಗೀರಿ, ಡಿಕೆಶಿ ಬಗ್ಗೆ ಮಾತಾಡಲು ಯಾರು ಹೇಳಿದ್ದು?: ಎಸ್.ಟಿ.ಸೋಮಶೇಖರ್
ನನ್ನ ಹಣೆಯಲ್ಲಿ ಬರೆದಿದ್ದರೆ ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ
ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರಿಂದ ಕೆಪಿಸಿಸಿ ಅಧ್ಯಕ್ಷರಾದರು. ಅವರ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿಯೂ ಆಗುತ್ತಾರೆ. ನನ್ನ ಹಣೆಯಲ್ಲಿ ಬರೆದಿದ್ದರೆ ನಾನು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ. ಆದರೆ ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ. ಮುಂದಿನ ಚುನಾವಣೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ಈ ಕ್ಷಣವೇ ಬೇಡ ಎಂದರೂ ನಾನು ಸಚಿವ 'ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ರಾಜಣ್ಣ ಹೇಳಿದರು.
ಸಭೆ ಮಾಡಿಯೇ ತೀರುತ್ತೇವೆ: ರಾಜಣ್ಣ
ಸಂಘಟನೆ ದೃಷ್ಟಿಯಿಂದ ಆಗುವ ಸಭೆಗಳನ್ನು ತಪ್ಪು ಎಂದು ಹೇಳ ಬಾರದು. ಎಸ್ಸಿ,ಎಸ್ಟಿ ಸಮುದಾಯದ ಸಭೆಗಳು ಪಕ್ಷವನ್ನು ಬಲಹೀನ ಮಾಡಲು ಅಲ್ಲ. ನಾವೇನು ನಕ್ಸಲ್ ಚಟುವಟಿಕೆ ಮಾಡಿಲ್ಲ. ಮುಂದೆ ನಾವು ಸಭೆಯನ್ನು ಮಾಡಿಯೇ ತೀರುತ್ತೇವೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ.