ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾಗಿ ಜಿಎಸ್‌ಟಿ ಪಾಲು ಹಂಚಿಕೆ ಮಾಡುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ಚಿಕ್ಕಮಗಳೂರು (ಮಾ.08): ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾಗಿ ಜಿಎಸ್‌ಟಿ ಪಾಲು ಹಂಚಿಕೆ ಮಾಡುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಮೂಡಿಗೆರೆಯಲ್ಲಿ ಶನಿವಾರ ಆಯೋಜಿಸಿದ್ದ ‘ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನಗಳ ಹಕ್ಕುಪತ್ರ, ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಇತರೆ ಸೌಲತ್ತು ವಿತರಣೆ’ ಸಮಾರಂಭ ಉದ್ಘಾಟಿಸಿ ಮಾತನಾಡಿ ಈ ಹಿಂದೆ ಸೇಲ್‌ ಟ್ಯಾಕ್ಸ್‌ ವ್ಯವಸ್ಥೆ ಇತ್ತು. ಆಗ ನೇರವಾಗಿ ರಾಜ್ಯ ಸರ್ಕಾರಕ್ಕೆ ತೆರಿಗೆ ಹಣ ಬರುತ್ತಿತ್ತು.

ಅದನ್ನು ತೆಗೆದು ಇದೀಗ ಜಿಎಸ್‌ಟಿ ಜಾರಿಗೊಳಿಸಲಾಯಿತು. ಜಿಎಸ್‌ಟಿ ಕೊಡುಗೆಯಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿ 2ನೇ ಸ್ಥಾನದಲ್ಲಿದೆ. ವಾರ್ಷಿಕವಾಗಿ ಸುಮಾರು ₹4 ಲಕ್ಷ ಕೋಟಿ ಗೂ ಅಧಿಕ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಮೂಲಕ ನೀಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ವಾರ್ಷಿಕ ಕೇವಲ ₹60 ಸಾವಿರ ಕೋಟಿ ಜಿಎಸ್‌ಟಿ ಪಾಲು ನೀಡುತ್ತಿದೆ. ನಾವು ರಾಜ್ಯದಿಂದ ಸಂಗ್ರಹವಾದ ಎಲ್ಲ ಮೊತ್ತವನ್ನು ನಮಗೇ ಕೊಡಿ ಎಂದು ಕೇಳುತ್ತಿಲ್ಲ.

ಈಗ ನೀಡುತ್ತಿರುವುದಕ್ಕಿಂತ ಹೆಚ್ಚಿನ ಮೊತ್ತ ಕೊಡಿ ಎಂದು ಕೇಳುತ್ತಿದ್ದೇವೆ. ಅದನ್ನು ಕೊಟ್ಟರೆ, ಖಾಲಿ ಹುದ್ದೆ ಭರ್ತಿಗೆ ಅನುಕೂಲವಾಗಲಿದೆ. ರಾಜ್ಯ ಇನ್ನಷ್ಟು ಅಭಿವೃದ್ಧಿ ಆಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಹೆಚ್ಚು ಸಂಖ್ಯೆ ಹೊಂದಿದ ಯುವಕರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ರಾಜ್ಯದ 57 ಸಾವಿರ ಖಾಲಿ ಹುದ್ದೆಗಳ ಭರ್ತಿಗೂ ತೀರ್ಮಾನಿಸಲಾಗಿದೆ. ಯುವಕರಿಗೆ ಹೆಚ್ಚಿನ ಸರ್ಕಾರಿ ಉದ್ಯೋಗ ನೀಡಬೇಕು ಎಂಬುದು ಉದ್ದೇಶ ಎಂದರು.

ಶೀಘ್ರ 50 ಸಾವಿರ ಎಕರೆ ಅರಣ್ಯ ಭೂಮಿ ಜನರ ಬಳಕೆಗೆ

ಸುಮಾರು 50 ಸಾವಿರ ಎಕರೆ ಅರಣ್ಯ ಭೂಮಿಯನ್ನು ಆಶ್ರಯ ನಿವೇಶನ ಹಂಚಿಕೆ ಸೇರಿದಂತೆ ವಿವಿಧ ಸಾರ್ವಜನಿಕ ಉಪಯೋಗಕ್ಕೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಶಾಸಕಿ ನಯನಾ ಮೋಟಮ್ಮ ಪ್ರತಿ ಸಭೆಯಲ್ಲಿ ವಸತಿ ರಹಿತರಿಗೆ ನಿವೇಶನ ಹಂಚಿಕೆಗೆ ಭೂಮಿ ಕೇಳುತ್ತಿದ್ದರು. ಆ ಸಂದರ್ಭದಲ್ಲಿ ಯಾವುದೇ ಭೂಮಿ ಯಾದರೂ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಜಾಗ ಎಂದು ಹೇಳುತ್ತಿದ್ದರು. ಈ ಹಿಂದೆಯೇ ಡೀಮ್ಡ್ ಹಾಗೂ ರಿಸರ್ವ್ ಪಾರೆಸ್ಟ್ ಜಾಗವನ್ನು ಸರ್ಕಾರದ ಅವಶ್ಯಕತೆ ಇದ್ದರೆ ಬಿಟ್ಟು ಕೊಡಬೇಕೆಂಬ ನಿಯಮ ಇದೆ. ಆದರೆ, ಸರ್ವೇ ಆಗಿರಲಿಲ್ಲ. ಇದೀಗ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಈ ಕುರಿತಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಲವು ಸಭೆ ಮಾಡಿದ್ದಾರೆ. ಶೀಘ್ರದಲ್ಲಿ 50 ಎಕರೆ ಅರಣ್ಯ ಭೂಮಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಒಂದು ವರ್ಷದ ಹಿಂದೆ ಚಂದ್ರಲೋಕದಲ್ಲಿ ನಿವೇಶನ ಕೊಡ್ತಾರಾ ಎಂಬ ಟೀಕೆ ಬಂದಿತ್ತು. ಆದರೆ, ಈಗ ಹೆಮ್ಮೆಯಿಂದ ಹೇಳುತ್ತೇನೆ. ಚಂದ್ರಲೋಕದಲ್ಲಿ ಅಲ್ಲ. ಕ್ಷೇತ್ರದ ದಾರದಹಳ್ಳಿ ನಂದೀಪುರ, ತ್ರಿಪುರ, ಹಂತೂರು, ಜಾವಳಿ, ಬಿ.ಹೊಸಳ್ಳಿ, ತಳಿಹಳ್ಳಿ, ಬಸ್ಕಲ್ ಸೇರಿದಂತೆ 8 ಗ್ರಾ.ಪಂ. ವ್ಯಾಪ್ತಿಯಲ್ಲಿ 245 ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮೂಡಿಗೆರೆ ನಗರ ಸೇರಿದಂತೆ ಇನ್ನಷ್ಟು ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

20 ವರ್ಷದ ನಂತರ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಈ ಹಿಂದೆ ಮೋಟಮ್ಮ ಶಾಸಕರು ಮತ್ತು ಸಚಿವ ರಾಗಿದ್ದಾಗ ಹಂಚಿಕೆ ಮಾಡಲಾಗಿತ್ತು. ಆ ನಂತರ ಶಾಸಕರಾಗಿ ಆಯ್ಕೆಯಾದ ಯಾರೂ ಹಂಚಿಕೆ ಮಾಡಿಲ್ಲ. ಇದೀಗ ಅವರ ಮಗಳಾದ ನಾನು ಶಾಸಕಿಯಾಗಿ ಬಂದು ಹಂಚಿಕೆ ಮಾಡುತ್ತಿದ್ದೇನೆ. ಕುದುರೆ ಮುಖಲೇಬರ್ ಕಾಲೋನಿಯ ಸುಮಾರು 40 ಕುಟುಂಬಕ್ಕೆ ನಿವೇಶನ ಕೊಡುವ ಚಿಂತನೆ ಇದೆ ಎಂದು ಹೇಳಿದರು.

ಸಮಾರಂಭದಲ್ಲಿ ಮಾಜಿ ಸಚಿವೆ ಮೋಟಮ್ಮ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿದರು. ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿ.ಪಂ.ಸಿಇಒ ಎಚ್.ಎಸ್.ಕೀರ್ತನಾ, ಬಿ.ಎಸ್.ಜಯರಾಂಗೌಡ, ಕೆ.ವೆಂಕಟೇಶ್, ರಮೇಶ್ ಹೊಸ್ಕೆರೆ, ಜಿತೇಂದ್ರಕುಮಾರ್, ನಟೇಶ್, ವಿಜಯಕುಮಾರ್, ತಹಸೀಲ್ದಾರ್ ಎಸ್.ಅಶ್ವಿನಿ ಉಪಸ್ಥಿತರಿದ್ದರು.