ಸ್ಮಾರ್ಟ್‌ ಮೀಟರ್ ಖರೀದಿ ಗುತ್ತಿಗೆ ನೀಡಿಕೆಯಲ್ಲಿ ಬಹುಕೋಟಿ ಅವ್ಯವಹಾರ ಆರೋಪ ಸಂಬಂಧ ವಿವರಣೆ ಕೋರಿ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಕೆಲ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ.

ಬೆಂಗಳೂರು (ಅ.29): ಸ್ಮಾರ್ಟ್‌ ಮೀಟರ್ ಖರೀದಿ ಗುತ್ತಿಗೆ ನೀಡಿಕೆಯಲ್ಲಿ ಬಹುಕೋಟಿ ಅವ್ಯವಹಾರ ಆರೋಪ ಸಂಬಂಧ ವಿವರಣೆ ಕೋರಿ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಕೆಲ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ನೋಟಿಸ್‌ಗೆ ವಾರದಲ್ಲಿ ಉತ್ತರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ನೋಟಿಸ್ ಸ್ವೀಕರಿಸಿರುವ ಸಚಿವ ಜಾರ್ಜ್‌ ಅವರು, ಈ ಗುತ್ತಿಗೆ ಸಂಬಂಧ ತಾವು ಏಕಪಕ್ಷೀಯ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಡಿಸಿರುವುದಾಗಿ ತಿಳಿದು ಬಂದಿದೆ. ಸ್ಮಾರ್ಟ್‌ ಮೀಟರ್ ಖರೀದಿ ಗುತ್ತಿಗೆ ಅವ್ಯವಹಾರ ಆರೋಪ ಕುರಿತು ದಾಖಲೆಗಳನ್ನು ಸಂಗ್ರಹಿಸಿ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆ ಕೈಗೆತ್ತಿಕೊಂಡ ಲೋಕಾಯುಕ್ತ ಪೊಲೀಸರು, ಅಕ್ರಮದ ಬಗ್ಗೆ ವಿವರಣೆ ಕುರಿತು ಸಚಿವ ಜಾರ್ಜ್‌ ಹಾಗೂ ಬೆಸ್ಕಾಂ ವ್ಯವಸ್ಥಾಪಕ ಮಹಾಂತೇಶ್ ಬೀಳಗಿ ಸೇರಿದಂತೆ ಇಂಧನ ಇಲಾಖೆ ಕೆಲ ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಈ ಗುತ್ತಿಗೆ ಪ್ರಕ್ರಿಯೆ ನಡೆದಾಗ ಬೆಸ್ಕಾಂ ವ್ಯವಸ್ಥಾಪಕರಾಗಿದ್ದ ಮಹಾಂತೇಶ್ ಬೀಳಗಿ ಅ‍ವರು, ನಂತರ ಬೇರೆ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ. ಆದರೆ ಅವರ ಅವಧಿಯಲ್ಲೇ ಯೋಜನೆ ನೀಲನಕ್ಷೆ ರೂಪಿಸಿದ್ದರಿಂದ ಮಹಾಂತೇಶ್ ಬೀಳಗಿ ಅವರಿಂದ ಸಹ ಲೋಕಾಯುಕ್ತ ಪೊಲೀಸರು ವಿವರಣೆ ಕೋರಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಏನಿದು ಹಗರಣ?: ರಾಜ್ಯದಲ್ಲಿ 39 ಲಕ್ಷ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆಗೆ ಸರ್ಕಾರ ತೀರ್ಮಾನಿಸಿತು. ಮೊದಲು ಬೆಸ್ಕಾಂ ವ್ಯಾಪ್ತಿಯಲ್ಲಿ ಮೀಟರ್ ಅಳವಡಿಕೆಗೆ ನಿರ್ಧರಿಸಿದ್ದ ಸರ್ಕಾರವು, ಬಳಿಕ ಆ ಯೋಜನೆಯನ್ನು ರಾಜ್ಯ ವ್ಯಾಪ್ತಿ ವಿಸ್ತರಿಸಿತ್ತು. ವರ್ಷಕ್ಕೆ 9 ಲಕ್ಷ ಮೀಟರ್‌ಗಳ ಅಳವಡಿಕೆ ಗುರಿ ಹೊಂದಲಾಗಿತ್ತು. ಆದರೆ ಈ ಯೋಜನೆಯಲ್ಲಿ ಭಾರಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಆಪಾದಿಸಿದ್ದವು. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಸ್ಮಾರ್ಟ್‌ ಮೀಟರ್ ಖರೀದಿಸಲು ಇಂಧನ ಇಲಾಖೆ ಯೋಜಿಸಿದ್ದು, ಈ ಖರೀದಿ ಟೆಂಡರ್‌ನಲ್ಲಿ ಕೋಟ್ಯಂತರ ರು. ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದಿದ್ದವು. ಈ ಹಗರಣದ ಕುರಿತು ತನಿಖೆಗೆ ಒತ್ತಾಯಿಸಿ ನ್ಯಾಯಾಲಯಕ್ಕೆ ಸಹ ಅರ್ಜಿ ಸಲ್ಲಿಕೆಯಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ಯೋಜನೆಯ ಟೆಂಡರ್ ಅಕ್ರಮ ಆರೋಪದ ಬಗ್ಗೆ ಕಡತಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ನಾನು ತಪ್ಪು ಮಾಡಿಲ್ಲ: ಸಚಿವ

ಸ್ಮಾರ್ಟ್‌ ಮೀಟರ್‌ ಅಳವಡಿಕೆ ಟೆಂಡರ್ ಅಕ್ರಮದ ಆರೋಪವನ್ನು ಸಚಿವ ಕೆ,ಜೆ.ಜಾರ್ಜ್ ನಿರಾಕರಿಸಿದ್ದಾರೆ. ಈ ಗುತ್ತಿಗೆ ನೀಡಿಕೆ ಸಂಬಂಧ ಏಕ ಪಕ್ಷೀಯವಾಗಿ ನಾನು ತೀರ್ಮಾನ ಮಾಡಿಲ್ಲ. ನಿಯಮಾನುಸಾರ ಇಲಾಖೆಯ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸಿದ್ದಾರೆ. ಅಲ್ಲದೆ, ಈ ರೀತಿಯ ಯೋಜನೆಗಳ ಗುತ್ತಿಗೆ ತೀರ್ಮಾನವನ್ನು ತಾಂತ್ರಿಕ ಸಲಹಾ ಸಮಿತಿ ತೀರ್ಮಾನಿಸುತ್ತದೆ. ಆ ಸಮಿತಿಗೆ ನಾನು ಅಧ್ಯಕ್ಷನಾಗಿದ್ದೇನೆ. ಆದರೆ ಸಮಿತಿ ಸದಸ್ಯರ ಸಹಮತ ಪಡೆದ ಬಳಿಕ ಟೆಂಡರ್ ಪ್ರಕ್ರಿಯೆ ನಡೆದಿದೆ. ಹೀಗಾಗಿ ನನ್ನ ಮೇಲಿನ ಆರೋಪಗಳು ನಿರಾಧಾರವಾಗಿವೆ ಎಂದು ಲೋಕಾಯುಕ್ತ ಪೊಲೀಸರಿಗೆ ಮೌಖಿಕವಾಗಿ ಸಚಿವರು ಸ್ಪಷ್ಟನೆ ನೀಡಿರುವುದಾಗಿ ತಿಳಿದು ಬಂದಿದೆ. ಈ ನೋಟಿಸ್‌ಗೆ ಕೆಲವೇ ದಿನಗಳಲ್ಲಿ ಲಿಖಿತವಾಗಿ ಉತ್ತರ ನೀಡುವುದಾಗಿ ಹೇಳಿ ಸಚಿವರು ಸಮಯ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.