ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೆ ಈಗಾಗಲೇ ಮುಹೂರ್ತ ನಿಗದಿ ಮಾಡಿಕೊಂಡಿರುವ ಸಚಿವ ಹಾಗೂ ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಭಾನುವಾರ ಮಂಡ್ಯದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಚ್ಚರಿ ಮೂಡಿಸಿದರು.

ಬೆಂಗಳೂರು (ಮಾ.13): ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೆ ಈಗಾಗಲೇ ಮುಹೂರ್ತ ನಿಗದಿ ಮಾಡಿಕೊಂಡಿರುವ ಸಚಿವ ಹಾಗೂ ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಭಾನುವಾರ ಮಂಡ್ಯದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಚ್ಚರಿ ಮೂಡಿಸಿದರು. ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿರುವ ಕೆ.ಸಿ.ನಾರಾಯಣಗೌಡ ಅವರು ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಬದಲಾದ ರಾಜಕಿಯ ಪರಿಸ್ಥಿತಿಯಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದರು. 

ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಲು ಕಾರಣರಾದರು. ಇದೀಗ ಚುನಾವಣೆ ಸಮೀಪಿಸಿದಂತೆ ಕಾಂಗ್ರೆಸ್‌ ಸೇರ್ಪಡೆಯಾಗಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರೊಂದಿಗೆ ಅಂತಿಮ ಹಂತದ ಮಾತುಕತೆಯನ್ನೂ ನಡೆಸಿದ್ದಾರೆ. ಇದೇ ತಿಂಗಳ 21 ರಂದು ಕೆ.ಆರ್‌.ಪೇಟೆ ಪಟ್ಟಣದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದರೂ ಮೋದಿ ಜತೆ ವೇದಿಕೆ ಹಂಚಿಕೊಂಡಿರುವುದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.

ಬೆಂ-ಮೈ ದಶಪಥ ಅಡಿಗಲ್ಲು ನಮ್ಮದೆ, ಉದ್ಘಾಟಿಸುತ್ತಿರೋದು ನಾವೇ: ಸಿಎಂ ಬೊಮ್ಮಾಯಿ

ನಾರಾಯಣಗೌಡ, ಸೋಮಣ್ಣ ಬಿಜೆಪಿ ಬಿಡಲ್ಲ: ಸಚಿವರಾದ ಕೆ.ಸಿ. ನಾರಾಯಣಗೌಡ, ವಿ. ಸೋಮಣ್ಣ ಅವರು ಬಿಜೆಪಿಯನ್ನು ತೊರೆಯುವುದಿಲ್ಲ. ಅಲ್ಲದೇ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರ ಅಲೆ ರಾಜ್ಯದಲ್ಲಿ ವ್ಯಾಪಕವಾಗಿದೆ. ವಿರೋಧ ಪಕ್ಷದವರು ಬಿಜೆಪಿ ಬಗ್ಗೆ ಏನೇ ಅಪಪ್ರಚಾರ ಮಾಡಿದರೂ ರಾಜ್ಯದ ಜನ ನಂಬದೇ ಬಿಜೆಪಿ ಪರ ನಿಲ್ಲುತ್ತಾರೆ ಎಂದರು.

ಇತ್ತೀಚೆಗೆ ನಡೆದ ರಾಮನಗರದ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರಕ್ಕೆ ಧಕ್ಕೆಯಾಗಿಲ್ಲ. ಈ ಕುರಿತು ನನ್ನ ಜತೆ ಸಂಸದ ಡಿ.ಕೆ. ಸುರೇಶ ಅವರು ವಾಗ್ವಾದ ನಡೆಸಿದ್ದು ಸರಿಯಲ್ಲ ಎಂದರು. ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪನವರ ಕಚೇರಿಯಲ್ಲಿ ಸಿಕ್ಕ ಕೋಟ್ಯಂತರ ರು. ಬಗ್ಗೆ ಲೋಕಾಯುಕ್ತ ವ್ಯಾಪಕ ತನಿಖೆ ಕೈಗೊಂಡಿದ್ದು, ಅವರು ಈಗಾಗಲೇ ಈ ಸಂಬಂಧ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಾಳು ವಿರುಪಾಕ್ಷಪ್ಪನವರ ಅವರನ್ನು ರಕ್ಷಣೆ ಮಾಡುವ ಕಾರ್ಯವನ್ನು ಸರ್ಕಾರ ಮಾಡಿಲ್ಲ.

ಬೆಂ-ಮೈ ಎಕ್ಸ್‌ಪ್ರೆಸ್‌ವೇಯಿಂದ ಕರ್ನಾ​ಟ​ಕದ ಅಭಿ​ವೃ​ದ್ಧಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ವಿರೂಪಾಕ್ಷಪ್ಪ ಅವರನ್ನು ಇದುವರೆಗೂ ಲೋಕಾಯುಕ್ತ ಪೊಲೀಸರು ಬಂಧಿಸದೇ ಇರುವುದಕ್ಕೆ ತಾಂತ್ರಿಕ ಕಾರಣಗಳಿವೆ. ಕಾನೂನಿನ ಪ್ರಕಾರ ವಿರುಪಾಕ್ಷಪ್ಪ ದೋಷಿ ಎಂದು ಕಂಡುಬಂದರೆ ಕೂಡಲೇ ಅವರನ್ನು ಬಂಧಿಸುವ ಕ್ರಮವನ್ನು ಸಂಬಂಧಪಟ್ಟವರು ಮಾಡಲಿದ್ದಾರೆ ಎಂದರು. ಜನಾರ್ದನರೆಡ್ಡಿಯವರ ಪಕ್ಷದಿಂದ ಬಿಜೆಪಿಗೆ ಯಾವುದೇ ತೊಂದರೆ ಆಗದು. ಅವರನ್ನು ಬಿಜಿಪಿಗೆ ಸೆಳೆಯುವ ಪ್ರಯತ್ನ ನಡೆದಿದೆ ಎಂಬ ವಿದ್ಯಮಾನದ ಕುರಿತು ಗೊತ್ತಿಲ್ಲ ಎಂದರು. ಬಿಜಿಪಿ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ, ಮಂಡಲ್‌ ಪ್ರಧಾನ ಕಾರ್ಯದರ್ಶಿ ಡಾ. ರಾಕೇಶ, ಕೊಟ್ಟೂರು ಬಿಜೆಪಿ ಘಟಕಾಧ್ಯಕ್ಷ ಬಿ.ಆರ್‌. ವಿಕ್ರಮ್‌, ಶ್ರೀನಿವಾಸ (ಬುಲ್‌) ಪ್ರಕಾಶ ಮಂಡಕ್ಕಿ, ಬಸವರಾಜ್‌ ಕೋನಾಪುರ್‌, ಆರ್‌. ಬೊಮ್ಮ ಮತ್ತಿತರರು ಇದ್ದರು.