ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ನಾರಾಯಣಗೌಡ!
ಚುನಾವಣೆ ಸಮೀಪಿಸಿರುವ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಚಿವ ಕೆ.ಸಿ.ನಾರಾಯಣಗೌಡ ಅವರು ಹಾಡಿ ಹೊಗಳಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಮಂಡ್ಯ/ಕೆ.ಆರ್.ಪೇಟೆ (ಫೆ.01): ಚುನಾವಣೆ ಸಮೀಪಿಸಿರುವ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಚಿವ ಕೆ.ಸಿ.ನಾರಾಯಣಗೌಡ ಅವರು ಹಾಡಿ ಹೊಗಳಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಅಷ್ಟು ಮಾತ್ರವಲ್ಲದೆ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುವರೆಂಬ ಗಾಳಿ ಸುದ್ದಿಗೆ ಪುಷ್ಠಿ ನೀಡಿದೆ. ತಾಲೂಕಿನ ಗಡಿಗ್ರಾಮವಾದ ಹೊನ್ನೇನಹಳ್ಳಿಯಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಕೆ.ಸಿ.ನಾರಾಯಣಗೌಡ ಮುಕ್ತಕಂಠದಿಂದ ಹೊಗಳಿರುವ ಭಾಷಣದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿ ಸದ್ದು ಮಾಡುತ್ತಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಚಿವ ಭೈರತಿ ಬಸವರಾಜು ಆಗಮಿಸಿದ್ದರು. ಅವರ ಭಾಷಣದ ಬಳಿಕ ಮಾತಿಗಿಳಿದ ಸಚಿವ ಕೆ.ಸಿ.ನಾರಾಯಣಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಸ್ತಾಪಿಸಿದರು.
ಒಂದು ಪಕ್ಷದಲ್ಲಿದ್ದು ಮತ ಕೇಳುವುದು ಧರ್ಮ. ಆದರೆ, ಯಾರ ಬಗ್ಗೆಯೂ ಟೀಕೆ-ಟಿಪ್ಪಣಿಗಳನ್ನು ಮಾಡಬಾರದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಸಿದ್ದರಾಮಯ್ಯ ದೇಶದ ಗೌರವಾನ್ವಿತ ನಾಯಕರಲ್ಲಿ ಒಬ್ಬರು. ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದಾಗಲೂ ಸಿದ್ದರಾಮಯ್ಯ ನನ್ನ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ನನ್ನ ಕ್ಷೇತ್ರಕ್ಕೆ 6 ಮೊರಾರ್ಜಿ ಶಾಲೆ ಹಾಗೂ ಒಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನೀಡಿದ್ದಾರೆ. ರಾಜ್ಯದಲ್ಲಿ ಎರಡೇ ಎರಡು ಕಿತ್ತೂರು ರಾಣಿ ಚೆನ್ಮಮ್ಮ ವಸತಿ ಶಾಲೆಗಳು ಮಂಜೂರಾಗಿದ್ದು ಅದರಲ್ಲಿ ಒಂದನ್ನು ನನ್ನ ಕ್ಷೇತ್ರಕ್ಕೆ ಸಿದ್ದರಾಮಯ್ಯ ನೀಡಿದ್ದಾರೆ. ಮೊರಾರ್ಜಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಜೊತೆಗೆ ಸಿದ್ದರಾಮಯ್ಯ ನನ್ನ ಕ್ಷೇತ್ರದ ಅಭಿವೃದ್ಧಿಗೆ 40 ಕೋಟಿ ರು. ಅನುದಾನ ನೀಡಿದ್ದರು ಎಂದು ಕೊಂಡಾಡಿದರು.
ಕೃಷಿ ಕಾಯ್ದೆ ವಾಪಸ್ ಪಡೆಯದಿದ್ರೆ ಬಿಜೆಪಿಗೆ ಮತವಿಲ್ಲ: ಕೋಡಿಹಳ್ಳಿ ಚಂದ್ರಶೇಖರ್
ಸಚಿವರ ಹೇಳಿಕೆ ನಂಬುವ ಸ್ಥಿತಿಯಲ್ಲಿಲ್ಲ: ಯಡಿಯೂರಪ್ಪ ಅವರನ್ನು ಹೊಗಳಿಕೊಂಡು ಬಿಜೆಪಿ ಸೇರಿದ ಸಚಿವ ಕೆ.ಸಿ.ನಾರಾಯಣಗೌಡರು ಇದೀಗ ಸಿದ್ದರಾಮಯ್ಯ ಅವರನ್ನು ಹೊಗಳಲು ಆರಂಭಿಸಿರುವುದು ತಾಲೂಕಿನಾದ್ಯಂತ ಚರ್ಚೆಯಾಗುತ್ತಿದೆ. ಇತ್ತೀಚೆಗೆ ತಮ್ಮ ನಿವಾಸದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿಯೂ ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಹೊಗಳಿದ್ದರು. ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಕೌಟುಂಬಿಕ ಬಾಂಧವ್ಯವಿದೆ ಎಂದಿದ್ದರು. ಇದೀಗ ಬಹಿರಂಗ ವೇದಿಕೆಯಲ್ಲಿಯೇ ಸಿದ್ದರಾಮಯ್ಯ ಅವರನ್ನು ಹೊಗಳಿರುವುದು ಸಚಿವ ನಾರಾಯಣಗೌಡರ ಚಿತ್ತ ಕಾಂಗ್ರೆಸ್ಸಿನತ್ತ ಎನ್ನುವ ಗಾಳಿ ಸುದ್ದಿಗೆ ಮತ್ತಷ್ಟುಪುಷ್ಠಿ ನೀಡಿದೆ. ಆದರೆ, ಕೆ.ಸಿ.ನಾರಾಯಣಗೌಡ ಮಾತ್ರ ಎಲ್ಲಿಯೂ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಸುಳಿವು ನೀಡುತ್ತಿಲ್ಲ.
ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಜೆಡಿಎಸ್ ಪಕ್ಷದ ವರಿಷ್ಠರು ನನ್ನನ್ನು ಕಡೆಗಣಿಸಿದ್ದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ. ಆದರೆ, ಸಚಿವರ ಹೇಳಿಕೆಯನ್ನು ನಂಬುವ ಸ್ಥಿತಿ ಕ್ಷೇತ್ರದಲ್ಲಿಲ್ಲ. ಜೆಡಿಎಸ್ ಪಕ್ಷ ತ್ಯಜಿಸುವ ಅಂತಿಮ ಕ್ಷಣದವರೆಗೂ ಕೆ.ಸಿ.ನಾರಾಯಣಗೌಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೊಗಳುತ್ತಲೇ ಇದ್ದುದ್ದನ್ನು ಕ್ಷೇತ್ರದ ಕೆಲವು ರಾಜಕೀಯ ಮುಖಂಡರು ಸ್ಮರಿಸುತ್ತಿದ್ದಾರೆ.
ಜೆಡಿಎಸ್‌ನವರಿಂದ ವಿಡಿಯೋ ವೈರಲ್: ಸಚಿವ ಕೆ.ಸಿ.ನಾರಾಯಣಗೌಡ ಯಾವುದೇ ವೇದಿಕೆಯಲ್ಲಿ ಮಾತನಾಡಿದರೂ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ 1700 ಕೋಟಿ ರು. ಅನುದಾನ ತಂದಿದ್ದೇನೆ. ಸಂತೇಬಾಚಹಳ್ಳಿ ಹೋಬಳಿಯ ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಲು 250 ಕೋಟಿ ರು. ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ತಾಲೂಕು ಜೆಡಿಎಸ್ ಮುಖಂಡರು ಸಚಿವ ಕೆ.ಸಿ.ಎನ್ ಅವರ ಹಳೆಯ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಹಳೆಯ ವಿಡಿಯೋ ತುಣುಕಿನಲ್ಲಿ ನಾರಾಯಣಗೌಡರು ಎಚ್.ಡಿ.ಕುಮಾರಸ್ವಾಮಿ ತಾಲೂಕಿನ ಅಭಿವೃದ್ಧಿಗಾಗಿ 1200 ಕೋಟಿ ಅನುದಾನ ನೀಡಿದ್ದಾರೆ. ಸಂತೇಬಾಚಹಳ್ಳಿ ಏತ ನೀರಾವರಿಗೆ 212 ಕೋಟಿ ರು., ಲೋಕೋಪಯೋಗಿ ಇಲಾಖೆಗೆ 100 ಕೋಟಿ ರು., ನೀರಾವರಿ ಇಲಾಖೆಗೆ 54 ಕೋಟಿ ರು. ಅನುದಾನ ನೀಡಿದ್ದಾರೆ ಎಂದು ನಾರಾಯಣಗೌಡ ಹೇಳುತ್ತಿರುವ ವಿಡಿಯೋವನ್ನು ಜೆಡಿಎಸ್ ನಾಯಕರು ವೈರಲ್ ಮಾಡಿದ್ದಾರೆ. ನಾರಾಯಣಗೌಡರು ಹೇಳುತ್ತಿರುವುದರಲ್ಲಿ ಯಾವುದು ಸತ್ಯ, ಸುಳ್ಳು ಯಾವುದು ಎಂಬ ಬಗ್ಗೆ ಸಾರ್ವಜನಿಕರು ತಮ್ಮಲ್ಲೇ ಚರ್ಚಿಸುತ್ತಿದ್ದಾರೆ.
Tumakuru: ಆಸ್ತಿ ಆಸೆಗಾಗಿ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ ಮೊಮ್ಮಗ
ಕಾಂಗ್ರೆಸ್ಸಿಗರ ವಿರೋಧ: ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರುವುದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದಲೂ ಭಾರೀ ಪ್ರತಿರೋಧವಿದೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ವಿಜಯರಾಮೇಗೌಡ, ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರ ಕುಮಾರ್ ಮತ್ತು ಎಂ.ಡಿ.ಕೃಷ್ಣಮೂರ್ತಿ ಒಗ್ಗೂಡಿ ಪತ್ರಿಕಾ ಹೇಳಿಕೆ ನೀಡಿದ್ದು ಕೆ.ಸಿ.ಎನ್ ಕಾಂಗ್ರೆಸ್ ಸೇರ್ಪಡೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದ ವೀಕ್ಷಕರ ಮುಂದೆಯೂ ವಿಷಯ ಪ್ರಸ್ತಾಪಿಸಿ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿದರೆ ಅವರನ್ನು ಸೋಲಿಸುತ್ತೇವೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಒಟ್ಟಾರೆ ಸಚಿವ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆ ಸುದ್ದಿ ತಾಲೂಕಿನಾದ್ಯಂತ ಹರಿದಾಡುತ್ತಿದ್ದು ಕಾಂಗ್ರೆಸ್ ವಲಯದಲ್ಲೂ ತಲ್ಲಣವನ್ನುಂಟುಮಾಡಿದೆ.