Asianet Suvarna News Asianet Suvarna News

ಪ್ರತಾಪ್‌ ಸಿಂಹ ಹೋರಾಡ್ತಾರೆಂದು ಸರ್ಕಾರದ ಹಣ ಎರಚಲು ಸಾಧ್ಯವೇ?: ಸಚಿವ ವೆಂಕಟೇಶ್‌

ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಸಂಸದ ಪ್ರತಾಪ್‌ ಸಿಂಹ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಸರ್ಕಾರದ ಹಣವನ್ನು ಸಿಕ್ಕಸಿಕ್ಕಂತೆ ಎರಚಲು ಆಗುತ್ತದೆಯೇ? ಅರ್ಹರನ್ನು ಗುರುತಿಸಿ ವಿವಿಧ ಯೋಜನೆಗಳ ಮೂಲಕ ಸರ್ಕಾರದ ಹಣವನ್ನು ಸರಿಯಾದ ಸಮಯದಲ್ಲಿ ಸದ್ಬಳಕೆ ಮಾಡಲಾಗುವುದು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್‌ ತಿರುಗೇಟು ನೀಡಿದರು. 

Minister K Venkatesh Slams On MP Pratap Simha At Mysuru gvd
Author
First Published Jun 5, 2023, 2:20 AM IST

ಪಿರಿಯಾಪಟ್ಟಣ (ಜೂ.05): ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಸಂಸದ ಪ್ರತಾಪ್‌ ಸಿಂಹ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಸರ್ಕಾರದ ಹಣವನ್ನು ಸಿಕ್ಕಸಿಕ್ಕಂತೆ ಎರಚಲು ಆಗುತ್ತದೆಯೇ? ಅರ್ಹರನ್ನು ಗುರುತಿಸಿ ವಿವಿಧ ಯೋಜನೆಗಳ ಮೂಲಕ ಸರ್ಕಾರದ ಹಣವನ್ನು ಸರಿಯಾದ ಸಮಯದಲ್ಲಿ ಸದ್ಬಳಕೆ ಮಾಡಲಾಗುವುದು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್‌ ತಿರುಗೇಟು ನೀಡಿದರು. ಸಚಿವರಾದ ಬಳಿಕ ಪಿರಿಯಾಪಟ್ಟಣಕ್ಕೆ ಮೊದಲ ಬಾರಿಗೆ ಭಾನುವಾರ ಆಗಮಿಸಿದ ವೇಳೆ ಪಕ್ಷದ ಕಚೇರಿ ಬಳಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ಯಾರಂಟಿ ಭಾಗ್ಯಗಳನ್ನು ಕಡ್ಡಾಯ ಜಾರಿ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎನ್ನುವ ಸಂಸದ ಪ್ರತಾಪ್‌ ಸಿಂಹ ಮೊದಲು ಅವರದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆ ಸಂದರ್ಭ ನೀಡಿದ್ದ ಭರವಸೆಯಂತೆ ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಹಾಗೂ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡಿದ್ದಾರಾ ಎಂಬುದನ್ನು ಅರಿತು ಮೊದಲು ಅವುಗಳನ್ನು ಜನರಿಗೆ ಕೊಡಿಸಲಿ ನಂತರ ನನ್ನ ಹಾಗೂ ನಮ್ಮ ಪಕ್ಷದ ವಿರುದ್ಧ ಮಾತನಾಡಲಿ ಎಂದು ಸವಾಲೆಸೆದರು.

ಪ್ರಧಾನಿ ಮೋದಿಗೆ ಪರ್ಯಾಯ ನಾಯಕ ಸಿದ್ದರಾಮಯ್ಯ: ಪುಟ್ಟರಂಗಶೆಟ್ಟಿ

ರಾಜ್ಯದ ಜನ ಹಾಗೂ ನಮ್ಮೆಲ್ಲರ ಆಸೆಯಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಈ ಗೆಲುವು ನನ್ನದಲ್ಲ ನಿಮ್ಮದು. ಅಧಿಕಾರ ಬರುವುದು ಹಾಗೂ ಹೋಗುವುದು ಸಹಜ. ಆದರೆ ಅಧಿಕಾರದಲ್ಲಿ ಇರುವ ಸಂದರ್ಭ ಜನಪರ ಕೆಲಸಗಳನ್ನು ಮಾಡಬೇಕು. ಜೂ. 11 ರಿಂದ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಬಹುದು. 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಮತ್ತು ಅನ್ನಭಾಗ್ಯ ಜು. 1 ರಿಂದ ಅನುಷ್ಟಾನಕ್ಕೆ ಬರಲಿದೆ. ಯುವನಿಧಿ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಜೂ. 15 ರಿಂದ ಜು. 15 ರವರೆಗೆ ಅರ್ಜಿ ಸಲ್ಲಿಸಬೇಕು. ಆ. 15 ರಿಂದ ಈ ಎರಡು ಯೋಜನೆ ಜಾರಿಗೆ ತರಲಿದ್ದೇವೆ. ಈ ಕಾರ್ಯಕ್ರಮಗಳಿಂದ ಸರ್ಕಾರಕ್ಕೆ . 57 ಸಾವಿರ ಕೋಟಿ ಹೊರೆ ಬೀಳಲಿದೆ. ಆದರೂ ನೀಡಿದ ಭರವಸೆಗಳನ್ನು ಈಡೇರಿಸಲು ನಾವು ಮುಂದಾಗಿದ್ದೇವೆ ಎಂದರು.

ನನ್ನ ಕಾರ್ಯಕರ್ತರು ಯಾರು ಎಂಬುದು ನನಗೆ ಗೊತ್ತಿದೆ. ಸಾರ್ವಜನಿಕ ಕೆಲಸಕ್ಕೆ ಹಗಲು ರಾತ್ರಿ ದುಡಿಯಲು ಸಿದ್ಧನಿದ್ದೇನೆ. ನಿಮ್ಮ ಗೌರವಕ್ಕೆ ಯಾವುದೇ ರೀತಿಯ Oಕ್ಕೆ ಬರದ ರೀತಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷ ಇನ್ನೂ ಗಟ್ಟಿಯಾಗಿ ಬೇರೂರಲಿದೆ. ಜೆಡಿಎಸ್‌ನವರು 123 ರಲ್ಲಿ 23 ಸೀಟ್‌ ಕೂಡ ಗೆಲ್ಲಲು ಆಗಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಪಕ್ಷ ಏನಾಗುತ್ತದೆ ಎಂದು ಕಾದು ನೋಡಬೇಕು. ನಮ್ಮ ಕ್ಯಾಂಡಿಡೇಟ್‌ಗಳು ಸರಿಯಾಗಿ ಕೆಲಸ ಮಾಡಿದ್ದರೆ ಚಾಮುಂಡೇಶ್ವರಿ ಹಾಗೂ ಹುಣಸೂರಿನಲ್ಲಿ ಗೆಲ್ಲುತ್ತಿದ್ದೇವು ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಮಾತನಾಡಿ, ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರು, ಜಿದ್ದಿನ ರಾಜಕಾರಣ ಸಮಾಜಕ್ಕೆ ದೊಡ್ಡ ಅಪಾಯಕಾರಿ. ಕಾಂಗ್ರೆಸ್‌ ಪಕ್ಷ ಸ್ವತಂತ್ರ ಭಾರತದಿಂದಲೂ ಕೂಡ ಬಹಳಷ್ಟುದೊಡ್ಡ ಸೋಲು ಮತ್ತು ಗೆಲುವು ಕಂಡಿದೆ. ಆದ್ದರಿಂದ ಸೇಡಿನ ಮತ್ತು ಜಿದ್ದಿನ ರಾಜಕಾರಣವನ್ನು ಕಾಂಗ್ರೆಸ್‌ ಪಕ್ಷ ನಿರಂತರವಾಗಿ ವಿರೋಧಿಸುತ್ತದೆ. ಪಿರಿಯಾಪಟ್ಟಣದಲ್ಲಿ ನಾವು ಭಾರೀ ಬಹುಮತದಿಂದ ಗೆದ್ದು ಮಂತ್ರಿಗಳಾಗಿದ್ದೇವೆ ಎಂದರು.

ತಾಲೂಕಿನಲ್ಲಿ ಸಾಮರಸ್ಯ ಹಾಗೂ ಸೌಹಾರ್ಧತೆಗೋಸ್ಕರ ಎಲ್ಲರ ಸಹಕಾರ ಬಯಸುವುದು ಕಾಂಗ್ರೆಸ್‌ ಪಕ್ಷದ ಮುಖ್ಯ ಗುರಿ. ರಾಜಕಾರಣದಲ್ಲಿ ತೋಳ್ಬಲ ಹಣಬಲ ಹಾಗೂ ಜಾತಿ ಬಲ ದೀರ್ಘಾವಧಿಯ ಯಶಸ್ಸನ್ನು ನೀಡಲಾರದು. ಐದು ಗ್ಯಾರಂಟಿಯನ್ನು ರಾಜ್ಯದ ಜನತೆಗೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ. ಜಿಲ್ಲಾಧ್ಯಕ್ಷನಾಗಿ 9 ವರ್ಷ ಪೂರೈಸಿದ್ದು ಹೋರಾಟ ಮನೋಭಾವನೆಯಿಂದ ಪಕ್ಷ ಸಂಘಟನೆಗೆ ದುಡಿದಿದ್ದೇನೆ ಎಂದರು.

ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್‌.ಡಿ.ಕುಮಾರಸ್ವಾಮಿ

ಈ ವೇಳೆ ಕುರುಬ ಸಮಾಜ ತಾಲೂಕು ಅಧ್ಯಕ್ಷ ಎಚ್‌.ಡಿ. ಗಣೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಟಿ. ಸ್ವಾಮಿ, ರೆಹಮತ ಜಾನ್‌ ಬಾಬು, ಕೆಪಿಸಿಸಿ ಸದಸ್ಯರಾದ ನಿತಿನ್‌ ವೆಂಕಟೇಶ್‌, ಅನಿಲ್‌ಕುಮಾರ್‌, ನಗರ ಘಟಕ ಅಧ್ಯಕ್ಷ ಅಶೋಕ್‌ಕುಮಾರ್‌ ಗೌಡ, ಹಿರಿಯ ವಕೀಲ ಬಿ.ವಿ ಜವರೇಗೌಡ, ಕೆಲ್ಲೂರು ನಾಗರಾಜ್‌ ವಿವಿಧ ಘಟಕದ ಪದಾಧಿಕಾರಿಗಳಾದ ಪಿ. ಮಹದೇವ್‌, ಶೇಖರ್‌, ಪುರುಷೋತ್ತಮ…, ಬಿ.ಎಸ್‌. ನಂಜುಂಡಸ್ವಾಮಿ, ಪಂಚವಳ್ಳಿ ಲೋಹಿತ್‌, ಮಂಜು ಆಯಿತನಹಳ್ಳಿ, ಆವರ್ತಿ ಚಂದ್ರಶೇಖರ್‌, ಸರಸ್ವತಿ, ಕೆ.ಆರ್‌, ನಿರೂಪಾ ರಾಜೇಶ್‌, ಪದ್ಮಲತಾ, ವಿಂಧ್ಯಶ್ರೀ, ಶಿವಕುಮಾರ್‌, ಅಸ್ಲಾಂ ಪಾಷಾ, ಶಫಿ, ರಾಜೇಶ್‌, ಮಂಜು, ಮಹೇಂದ್ರ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಇದ್ದರು.

Follow Us:
Download App:
  • android
  • ios