ಕೇಂದ್ರ ಅಕ್ಕಿ ಕೊಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್ ಟಾಂಗ್
ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದಕ್ಕೇ ವಿಧಿ ಇಲ್ಲದೇ ಹಣ ಕೊಡುತ್ತಿದ್ದೇವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬಿಜೆಪಿ ಅಕ್ಕಿ ಕೊಡಬೇಕೆಂಬ ಟೀಕೆಗೆ ತಿರುಗೇಟು ಕೊಟ್ಟರು.
ಚಾಮರಾಜನಗರ (ಜು.02): ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದಕ್ಕೇ ವಿಧಿ ಇಲ್ಲದೇ ಹಣ ಕೊಡುತ್ತಿದ್ದೇವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬಿಜೆಪಿ ಅಕ್ಕಿ ಕೊಡಬೇಕೆಂಬ ಟೀಕೆಗೆ ತಿರುಗೇಟು ಕೊಟ್ಟರು. ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಇಂದಿನಿಂದ ವಿದ್ಯುತ್, ಅಕ್ಕಿ ಗ್ಯಾರಂಟಿ ಜಾರಿಯಾಗುತ್ತಿದೆ, ನಾವು ಕೊಟ್ಟಭರವಸೆ ಜಾರಿ ಮಾಡುತ್ತಿದ್ದೇವೆ, ಅಕ್ಕಿ ಬದಲು ಹಣ ಕೊಡುವ ವಿಚಾರವನ್ನು ವಿರೋಧ ಮಾಡುವವರು ಮಾಡುತ್ತಿರುತ್ತಾರೆ, ಅಕ್ಕಿ ಸಂಗ್ರಹವಾದ ಮೇಲೆ ಅಕ್ಕಿಯನ್ನು ಕೊಡುತ್ತೇವೆ, ಹಣ ಕೊಡುವುದು ತಾತ್ಕಾಲಿಕ ವ್ಯವಸ್ಥೆ ಎಂದರು.
ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಅಕ್ಕಿ ಸಿಗದ ಕಾರಣ ಹಣ ಕೊಡ್ತಿದ್ದೇವೆ, ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾರಣ ವಿಧಿ ಇಲ್ಲದೆ ಹಣ ಕೊಡ್ತಿದ್ದೇವೆ, ಎರಡ್ಮೂರು ತಿಂಗಳ ಬಳಿಕ ಅಕ್ಕಿ ಕೊಡುತ್ತೇವೆ, ಪ್ರತಿಪಕ್ಷದವರು ಹೇಳಿದಂಗೆ ಕೇಳೋಕ್ ಆಗಲ್ಲ ಎಂದು ಕಿಡಿಕಾರಿದರು. ಬಿಜೆಪಿ ಅವ್ರಿಗೆ ಇನ್ನೇನ್ ಕೆಲಸ ಇದೆ, ಏನಾದ್ರು ಹೇಳುತ್ತಿರುತ್ತಾರೆ ಪ್ರೋಟೆಸ್ಟ್ ಮಾಡೋರಿಗೆ ಬೇಡ ಅನ್ನೋಕೆ ಆಗುತ್ತಾ, ಮಾಡಲಿ ಎಂದು ಯಡಿಯೂರಪ್ಪ ಪ್ರತಿಭಟನೆ ಸಂಬಂಧ ತಿರುಗೇಟು ಕೊಟ್ಟರು.
ಮಾಜಿ ಸ್ಪೀಕರ್ ಕೃಷ್ಣ ತತ್ತ್ವ, ಸಿದ್ದಾಂತಕ್ಕೆ ಬದ್ಧ ರಾಜಕಾರಣಿ: ಸಚಿವ ಚಲುವರಾಯಸ್ವಾಮಿ
ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟಹೆಸರು ತರಲು ಹೆಚ್ಚುವರಿ ಅಕ್ಕಿಯನ್ನು ಕೊಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ, ಕೇಂದ್ರ ಸರ್ಕಾರ ಮತ್ತು ಪ್ರದಾನಿ ಮೋದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ಆವರರಣ ತಲುಪಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾತನಾಡಿ, ಕೇಂದ್ರ ಬಿಜೆಪಿ ಮಲತಾಯಿ ಧೋರಣೆ ತಾಳುತ್ತಿದ್ದು, ರಾಜ್ಯ ಬೆಜೆಪಿ ನಾಯಕರ ಷಡ್ಯಂತ್ರದಿಂದ ಹೆಚ್ಚುವರಿ ಅಕ್ಕಿಯನ್ನು ಕೊಡದೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟಹೆಸರು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ನಾವೇನು ಅಂಬಾನಿ, ಅದಾನಿಗೋಸ್ಕರ ಕಾರ್ಯಕ್ರಮ ಮಾಡುತ್ತಿಲ್ಲ, ಬಡವರು, ಸಾಮಾನ್ಯ ಜನರಿಗೋಸ್ಕರ ಅವರ ಹಸಿವನ್ನು ಇಂಗಿಸುವ ಪ್ರಮುಖ ಅನ್ನಭಾಗ್ಯ ಯೋಜನೆಗಾಗಿ ಎಂಬುದನ್ನು ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು, ನಮ್ಮ 5 ಗ್ಯಾರಂಟಿಗಳನ್ನು ವಿಫಲಗೊಳಿಸುವುದಕೋಸ್ಕರ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್ ಕಾರ್ಡ್ ಹೊಂದಿರುವ ಹಲವು ಬಡ ಕುಟುಂಬಗಳು ಇವೆ. ಇವರಿಗೆ ಆಹಾರ ಭದ್ರತೆ ಕಾಯಿದೆ ಅನ್ವಯ ಉಚಿತ ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಹಾಲಿ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಎಫ್‌ಸಿಐ ಹಾಗೂ ಇತರೆ ಆಹಾರ ದಾಸ್ತಾನು ಮಂಡಳಿಗಳಿಗೆ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ಒದಗಿಸಲು ಲಿಖಿತ ಮನವಿ ಮಾಡಿದ್ದರೂ ನಮ್ಮಲ್ಲಿ ದಾಸ್ತಾನು ಇಲ್ಲ ಅಥವಾ ಪ್ರಸ್ತುತ ಸರಬರಾಜು ಮಾಡಲು ಸಾಧ್ಯವಿಲ್ಲವೆಂಬ ಬೇಜವಾಬ್ದಾರಿ ಉತ್ತರವನ್ನು ನೀಡಿದೆ ಎಂದರು.
ನೀರಿನ ಸಮಸ್ಯೆ ನೀಗಿಸಲು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಮುನಿಯಪ್ಪ
ಮೊದಲು ಅಕ್ಕಿಯನ್ನು ನಿಗದಿತ ಬೆಲೆಗೆ ಕೊಡುತ್ತೇವೆ ಎಂದು ಹೇಳಿ ನಂತರ ಕೇಂದ್ರ ಸರ್ಕಾರ ಕುಮ್ಮಕ್ಕು ಮತ್ತು ರಾಜ್ಯ ಬಿಜೆಪಿ ನಾಯಕರ ಷಡ್ಯಂತ್ರದಿಂದ ಅಕ್ಕಿಯನ್ನು ಕೊಡಲು ಸಾಧ್ಯವಿಲ್ಲ ಎಂದು ಎಫ್.ಸಿ.ಐ ಹೇಳುತ್ತದೆ ಎಂದು ಆರೋಪಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಥಮ ಪ್ರಜೆಗಳಾದ ತಾವು ಕೇಂದ್ರ ಸರ್ಕಾರಕ್ಕೆ ತಕ್ಷಣವೇ ರಾಜ್ಯ ಸರ್ಕಾರದ ಬೇಡಿಕೆಯ ಅನ್ವಯ ಪಡಿತರ ಅರ್ಜಿಯನ್ನು ಬಿಡುಗಡೆಗೊಳಿಸುವಂತೆ ಸೂಕ್ತ ನಿರ್ದೇಶನವನ್ನು ನೀಡಬೇಕೆಂದು ಮನವಿ ಮಾಡಿದರು.